Advertisement

ಬಾಲಸೋರ್ ಭೀಕರ ದುರಂತ: ರೈಲು ಅಪಘಾತ ತಪ್ಪಿಸುವ ಕವಚ ತಂತ್ರ್ಞಾನ ಕೆಲಸ ಮಾಡಲಿಲ್ಲವೇ?

11:43 AM Jun 03, 2023 | Team Udayavani |

ಹೊಸದಿಲ್ಲಿ: ಒಡಿಶಾದ ಬಾಲಸೋರ್‌ ನಲ್ಲಿ ಮೂರು ರೈಲುಗಳ ಭೀಕರ ಅಪಘಾತವು ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಅಪಘಾತದಲ್ಲಿ ಸುಮಾರು 280ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, ಸಾವಿರ ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲು ಅಪಘಾತ ತಡೆಯಲೆಂದು ಅಳವಡಿಸಿರುವ ಕವಚ ತಂತ್ರಜ್ಞಾನವು ಇಲ್ಲಿ ಕೆಲಸ ಮಾಡಿಲ್ಲವೇ ಎನ್ನವುದು ಇದೀಗ ಚರ್ಚೆಯ ವಿಷಯವಾಗಿದೆ.

Advertisement

KAVACH ತಂತ್ರಜ್ಞಾನವನ್ನು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ (TCAS) ಅಥವಾ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ (ATP) ಎಂದು ಕರೆಯಲಾಗುತ್ತದೆ. ಇದು ರೈಲು ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ತಂತ್ರಜ್ಞಾನವು SIL4 ಪ್ರಮಾಣೀಕರಣವನ್ನು ಸಹ ಪಡೆದುಕೊಂಡಿದೆ. ಅಂದರೆ ಈ ವ್ಯವಸ್ಥೆಯಲ್ಲಿ 10,000 ವರ್ಷಗಳಲ್ಲಿ ಕೇವಲ ಒಂದು ದೋಷ ಕಂಡುಬರಬಹುದು. ಅಷ್ಟು ನಿಖರವಾಗಿದೆ ಈ ವ್ಯವಸ್ಥೆ.

ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಮುಖಾಮುಖಿ ಡಿಕ್ಕಿ ಹೊಡೆದು ಸೂಪರ್‌ ಫಾಸ್ಟ್ ಪ್ಯಾಸೆಂಜರ್ ರೈಲಿನ ನಾಲ್ಕು ಕೋಚ್‌ಗಳು ಹಳಿ ತಪ್ಪಿತು ಎಂದು ಆರಂಭಿಕ ವರದಿಗಳು ಸೂಚಿಸಿದ್ದರೂ, ರೈಲ್ವೆ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ರೈಲು ನಂ. 12864 SMVT ಬೆಂಗಳೂರು – ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಳಿತಪ್ಪಿತು. ಈ ವೇಳೆ ಪಕ್ಕದ ಟ್ರ್ಯಾಕ್ ನಲ್ಲಿ ಹಾದು ಹೋಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಮೇಲೆ ಬಿತ್ತು.

ಎಲ್ಲಾ ರೈಲುಗಳು ಹಳಿತಪ್ಪಿದ ಕಾರಣ, ಅಂತಹ ಸಂದರ್ಭಗಳಲ್ಲಿ ಕವಚ್ ತಂತ್ರಜ್ಞಾನವು ಕಾರ್ಯನಿರ್ವಹಿಸಲಿಲ್ಲ. ಕವಚ್ ತಂತ್ರಜ್ಞಾನವು ಎರಡು ರೈಲುಗಳ ಇಂಜಿನ್‌ ಗಳ ನಡುವಿನ ಘರ್ಷಣೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮತ್ತೊಂದು ವಿಚಾರವೆಂದರೆ ಈ ಆಧುನಿಕ ತಂತ್ರಜ್ಞಾನವನ್ನು ಎಲ್ಲಾ ರೈಲ್ವೇ ನೆಟ್‌ ವರ್ಕ್‌ ನಲ್ಲಿ ಸ್ಥಾಪಿಸಲಾಗಿಲ್ಲ. ಈ ವಿಭಾಗದಲ್ಲೂ ಕವಚ್ ತಂತ್ರಜ್ಞಾನವಿರಲಿಲ್ಲ.

Advertisement

2022 ರ ಬಜೆಟ್ ಸಮಯದಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾರತದಲ್ಲಿ 2,000 ಕಿಮೀ ರೈಲ್ವೆ ಜಾಲವನ್ನು ಕವಚ್ ತಂತ್ರಜ್ಞಾನದಿಂದ ರಕ್ಷಿಸುವುದಾಗಿ ಘೋಷಿಸಿದ್ದರು.

ಕವಚ್ ಎಂದರೇನು?

ರೈಲ್ವೇ ತಯಾರಿಸಿರುವ ನೂತನ ತಂತ್ರಜ್ಞಾನದ ನೆರವಿನಿಂದ, ಎರಡು ರೈಲುಗಳು ವಿರುದ್ಧ ದಿಕ್ಕಿನಿಂದ ಬಂದರೂ, ಎರಡರ ವೇಗ ಏನೇ ಇದ್ದರೂ ಸಹ ಎರಡೂ ರೈಲುಗಳು ‘ರಕ್ಷಾಕವಚ’ದಿಂದ ಡಿಕ್ಕಿಯಾಗದೆ ಉಳಿಯಲಿದೆ. ಹೈ ಫ್ರೀಕ್ವೆನ್ಸಿ ರೇಡಿಯೋ ಸಂವಹನವನ್ನು ‘ಕವಚ’ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಈ ಕವಚ್ ರೇಡಿಯೋ ಸಂವಹನ, ಮೈಕ್ರೊಪ್ರೊಸೆಸರ್, ಗ್ಲೋಬ್ ಪೊಸಿಷನಿಂಗ್ ಸಿಸ್ಟಮ್ ತಂತ್ರಜ್ಞಾನವು ಆಂಟಿ ಕೊಲಿಶನ್‌ ಟೆಕ್‌ (Anti Collision Tech) ಸಾಧನ ಜಾಲವಾಗಿದೆ. ಈ ತಂತ್ರಜ್ಞಾನದ ಅಡಿಯಲ್ಲಿ ‘ಕವಚ್ʼನ್ನು ಎರಡು ಮುಖಾಮುಖಿಯಾಗುವ ರೈಲುಗಳಲ್ಲಿ ಅಳವಡಿಸಿದಾಗ, ಈ ತಂತ್ರಜ್ಞಾನವು ಸ್ವಯಂಚಾಲಿತ ಬ್ರೇಕಿಂಗ್ ಕ್ರಿಯೆಯನ್ನು ಪ್ರಾರಂಭಿಸುತ್ತದೆ ಮತ್ತು ಪರಸ್ಪರ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ರೈಲುಗಳು ಡಿಕ್ಕಿಯಾಗುವುದನ್ನು ತಡೆಯುತ್ತದೆ.

ಪ್ರಮುಖವಾಗಿ ಈ ತಂತ್ರಜ್ಞಾನವು ಎದುರಿನಿಂದ ಬರುವ ರೈಲಿನ ಬಗ್ಗೆ ಲೋಕೋ ಪೈಲಟ್‌ ಗಳಿಗೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ ತುರ್ತು ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ರೈಲನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ. ಒಂದೇ ಹಳಿಯಲ್ಲಿ ಎರಡು ರೈಲುಗಳು ಪರಸ್ಪರ ಸಮೀಪಿಸಿದಾಗ ಇದು ಕೆಲಸ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next