Advertisement

ಅನ್ನದಾತರೆಂದರೆ ಸರ್ಕಾರಕ್ಕೆ ತಾತ್ಸಾರವೇಕೆ?

10:40 AM Mar 07, 2019 | Team Udayavani |

ಚಿತ್ರದುರ್ಗ: ಕೇಂದ್ರ ಸರ್ಕಾರದ ಭೂಸ್ವಾಧೀನ, ಸ್ಥಳಾಂತರ ಮತ್ತು ಪುನರ್‌ ವಸತಿಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಪರಿಹಾರದ ಹಕ್ಕು ಅಧಿನಿಯಮ 2013ಕ್ಕೆ ಕರ್ನಾಟಕ ಸರ್ಕಾರ ಪಾಸ್‌ ಮಾಡಿರುವ ತಿದ್ದುಪಡಿ ಬಿಲ್‌ 2019ಕ್ಕೆ ಅಂಗೀಕಾರ ನೀಡಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ರೈತ ದಯಾನಂದಮೂರ್ತಿ, ಕೇಂದ್ರ ಸರ್ಕಾರ ರೈತರನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತ ಶೋಷಣೆ ಮಾಡುತ್ತಿದೆ. ಮಳೆಯಿಲ್ಲದೆ ರೈತನಿಗೆ ಬೆಳೆ ಇಲ್ಲ. ಅಲ್ಪ ಸ್ವಲ್ಪ ಬೆಳೆ ಕೈಗೆ ಬಂದರೂ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತನನ್ನು ದೇಶದ ಬೆನ್ನಲುಬು ಎಂದು ಬರೀ ಬಾಯಿ ಮಾತಿನಲ್ಲಿ ಹೇಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿರುವುದು ದುಃಖದ ಸಂಗತಿ. ಹಾಗಾಗಿ ರೈತರೆಲ್ಲರೂ ಸಂಘಟಿತರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋ ಧಿ ನೀತಿಯನ್ನು
ಖಂಡಿಸಬೇಕಾಗಿದೆ ಎಂದು ಹೇಳಿದರು. 

ರೈತ ಮುಖಂಡ ರವಿಕುಮಾರ್‌ ಮಾತನಾಡಿ, ಕೇಂದ್ರದ ಭೂಸ್ವಾಧೀನ ಪ್ರಕ್ರಿಯೆ ಮೊದಲು ನಿಲ್ಲಬೇಕು. ರೈತನಿಗೆ ಸಾಲ ಮನ್ನಾ ಮಾಡುವುದು ಬೇಕಿಲ್ಲ. ಸಮಯಕ್ಕೆ ಸರಿಯಾಗಿ ವಿದ್ಯುತ್‌ ನೀರು ಕೊಟ್ಟರೆ ರೈತ ಸ್ವಾವಲಂಬಿಯಾಗಿ ಬದುಕುತ್ತಾನೆ ಎಂದು ಅಭಿಪ್ರಾಯಪಟ್ಟರು.

ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶಂಕರಪ್ಪ ಮಾತನಾಡಿ, ಸತತ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ತುಂಬಿರುವ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರದ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಇನ್‌ಪುಟ್‌ ಸಬ್ಸಿಡಿ ಸಹ ರೈತರಿಗೆ ತಲುಪಿಲ್ಲ ಎಂದು ಆರೋಪಿಸಿದರು. 

ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ರೈತರ ಜೀವನಾಡಿಯಾಗಬೇಕಾಗಿರುವ ಭದ್ರಾಮೇಲ್ದಂಡೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಈ ಎರಡು ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಜಿಲ್ಲೆಯ ರೈತರ ಬದುಕನ್ನು ಹಸನುಗೊಳಿಸಬೇಕು ಎಂದು ಮನವಿ ಮಾಡಿದರು.

Advertisement

ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಮಾತನಾಡಿ, ಹೊಸ ಆರ್ಥಿಕ ನೀತಿ, ಉದಾರೀಕರಣ ನೀತಿ ಹಾಗೂ ಮುಕ್ತ ಮಾರುಕಟ್ಟೆ ನೀತಿ ಜಾರಿಗೆ ಬಂದ ಮೇಲೆ ದೇಶಾದ್ಯಂತ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದರ ವಿರುದ್ಧ ದೇಶಾದ್ಯಂತ ರೈತರು ಮತ್ತು ಜನಪರ ಸಂಘಟನೆಗಳು ಹೋರಾಟ ಮಾಡಿದರು. ಇದರ ಫಲವಾಗಿ ಬ್ರಿಟಿಷ್‌ ಸರ್ಕಾರ ರೂಪಿಸಿದ್ದ 1894ರ ಭೂಸ್ವಾಧೀನ ಕಾಯ್ದೆಯನ್ನು ಡಾ| ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರ ರದ್ದುಪಡಿಸಿತು. 

ಆದರೆ ಹೊಸದಾಗಿ 2013 ರಲ್ಲಿ ಅಧಿನಿಯಮ ಸಂಖ್ಯೆ 30ರ ರೀತಿ ಹೊಸ ಕಾಯ್ದೆಯನ್ನು ರೂಪಿಸಿ 1-1-2014 ರಿಂದ ಜಾರಿಗೆ ತರಲಾಗಿದೆ. ಈ ಹೊಸ ಕಾಯ್ದೆಯಿಂದ ಕೈಗಾರೀಕರಣ, ಅತ್ಯವಶ್ಯಕ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ನಗರೀಕರಣಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು
ವಶಪಡಿಸಿಕೊಳ್ಳಲಾಗುವುದು. ಇದರಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಅನ್ನದಾತ ರೈತನ ಬದುಕು ಸಂಕಷ್ಟಕ್ಕೀಡಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರ ಪಾಸು ಮಾಡಿರುವ ತಿದ್ದುಪಡಿ ಬಿಲ್‌ 2019 ಕ್ಕೆ ಅಂಗೀಕಾರ ನೀಡಬಾರದು.

ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ರೈತ ಮುಂಡರಾದ ಸಿ.ಆರ್‌. ತಿಮ್ಮಣ್ಣ, ಕೆ.ಸಿ. ಹೊರಕೇರಪ್ಪ, ಕುರುಬರಹಳ್ಳಿ ಅಂಗಡಿ ರುದ್ರಣ್ಣ, ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಎಂ.ಆರ್‌. ಪುಟ್ಟಸ್ವಾಮಿ, ಬಿ.ಟಿ. ಹನುಮಂತಪ್ಪ, ಎಸ್‌.
ರೇವಣ್ಣ, ಎಂ. ನಾಗರಾಜ್‌, ಟಿ. ಹಂಪಣ್ಣ, ಬಿ.ಟಿ. ಹನುಮಂತಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ರೈತರನ್ನು ಸಾಲದಿಂದ ಋಣಮುಕ್ತರಾಗಿಸಿ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳನ್ನು ಅಳತೆ ಮಾಡಿಸಿ ಹೂಳು ತೆಗೆಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಬೇಕು. ಹೋಬಳಿಗೊಂದರಂತೆ ಗೋಶಾಲೆ ತೆರೆದು ಮೇವು ನೀರು ಪೂರೈಕೆ ಮಾಡಿ ಗೋವುಗಳನ್ನು ರಕ್ಷಿಸಬೇಕು. ಮುಖ್ಯಮಂತ್ರಿಗಳೇ ಘೋಷಿಸಿರುವಂತೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲದ ವಿಚಾರದಲ್ಲಿ ರೈತರಿಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಹೊಸ ಸಾಲ ಪಡೆಯಲು ಆಗುತ್ತಿಲ್ಲ. ಕೂಡಲೆ ಪೂರ್ಣ ಮೊತ್ತವನ್ನು ಬ್ಯಾಂಕುಗಳಿಗೆ ಬಿಡುಗಡೆಗೊಳಿಸಿ ರೈತರನ್ನು ಸಾಲದಿಂದ ಋಣಮುಕ್ತರನ್ನಾಗಿ
ಮಾಡಬೇಕು ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶಂಕರಪ್ಪ ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next