Advertisement

ತಮಿಳುನಾಡಿನಲ್ಲೇಕೆ ಹಿಂದಿ ಮೇಲೆ ಸಿಟ್ಟು? ಇಲ್ಲಿದೆ ಮಾಹಿತಿ…

12:05 AM Oct 19, 2022 | Team Udayavani |

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಹಿಂದಿ ಭಾಷಿಕ ರಾಜ್ಯಗಳ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಹಿಂದಿಯನ್ನೇ ಬಳಕೆ ಮಾಡಬೇಕು ಎಂಬ ವಿಚಾರ ಸಂಬಂಧ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಸಿಎಂ ಎಂ.ಕೆ.ಸ್ಟಾಲಿನ್‌, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಹಿಂದಿ ವಿರುದ್ಧದ ತಮಿಳು ನಾಡಿನ ವಿರೋಧ ಯಾವಾಗಿನಿಂದ ಆರಂಭವಾಯಿತು? ಏಕೆ ಹೀಗೆ? ಇಲ್ಲಿದೆ ಮಾಹಿತಿ…

Advertisement

ಏನಿದು ವಿರೋಧ?
ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದ ಸಂಸದೀಯ ಸಮಿತಿಯೊಂದು ಹಿಂದಿ ಭಾಷಿಕ ರಾಜ್ಯಗಳ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಹಿಂದಿ ಮತ್ತು ಇತರ ಭಾಷೆಗಳ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನೇ ಕಚೇರಿಗಳಲ್ಲಿ ಕಡ್ಡಾಯವಾಗಿ ಬಳಕೆ ಮಾಡಬೇಕು. ಈ ಮೂಲಕ ಇಂಗ್ಲಿಷ್‌ ಮೇಲಿನ ಅವಲಂಬನೆ ಕೈಬಿಡಬೇಕು ಎಂದು ಶಿಫಾರಸು ಮಾಡಿತ್ತು.

ಸ್ಟಾಲಿನ್‌ ವಿರೋಧವೇನು?
ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನೇ ಕಡ್ಡಾಯ ಮಾಡುವುದರಿಂದ ಬೇರೆ ಭಾಷೆಯವರು ಅಲ್ಲಿಗೆ ಹೋಗಿ ಕೆಲಸ ಮಾಡಲು ಆಗುವುದಿಲ್ಲ. ಅಲ್ಲದೇ ಈ ಮೂಲಕ ಹಿಂದಿಯನ್ನು ಎಲ್ಲರ ಮೇಲೆ ಹೇರಿಕೆ ಮಾಡಲಾಗುತ್ತಿದೆ ಎಂಬುದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ವಿರೋಧ. ಅಲ್ಲದೆ ಎಲ್ಲ ಭಾಷೆಗಳಿಗೂ ಸಮಾನ ಮಾನ್ಯತೆ ನೀಡಬೇಕು ಎಂಬುದು ಸ್ಟಾಲಿನ್‌ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ವಾದ.

ಹಿಂದಿ ವಿರೋಧದ ಇತಿಹಾಸ
ತಮಿಳುನಾಡಿನ ಹಿಂದಿ ವಿರೋಧಿ ಆಂದೋಲನಕ್ಕೆ ಸುದೀರ್ಘ‌ ಇತಿಹಾಸವಿದೆ. 1937ರಲ್ಲಿ ಮದ್ರಾಸ್‌ ಪ್ರಸಿಡೆನ್ಸಿಯ ಮುಖ್ಯಸ್ಥರಾಗಿದ್ದ ಸಿ.ರಾಜಗೋಪಾಲಚಾರಿ ಅಥವಾ ರಾಜಾಜಿ ಅವರು ಪ್ರೌಢಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕು ನಿರ್ಧಾರ ಮಾಡಿದ್ದರು. ಆಗ ಪೆರಿಯಾರ್‌ ಎಂದೇ ಪ್ರಸಿದ್ಧರಾಗಿದ್ದ ಇ.ವಿ.ರಾಮಸ್ವಾಮಿ ಅವರು ಈ ನಿರ್ಧಾರಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಆದರೆ 1940ರಲ್ಲಿ ಬ್ರಿಟಿಷ್‌ ಆಳ್ವಿಕೆಯಲ್ಲಿ ಹಿಂದಿಯನ್ನು ಕಡ್ಡಾಯ ಮಾಡಲಾಗಿತ್ತು.

ನೆಹರೂ ಕಾಲದಲ್ಲೂ ವಿರೋಧ
ಸ್ವಾತಂತ್ರ್ಯ ಅನಂತರದಲ್ಲಿ ದೇಶದಲ್ಲಿ ಅಧಿಕೃತ ಭಾಷೆಯಾಗಿ ಯಾವುದನ್ನು ಬಳಕೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಶುರುವಾಯಿತು. ಆಗ ಹಿಂದಿಯನ್ನೇ ಬಳಕೆ ಮಾಡಬಹುದು ಎಂಬ ತೀರ್ಮಾನವಾಗಿತ್ತು. ಆದರೆ ಮುಂದಿನ 15 ವರ್ಷಗಳ ಕಾಲ ಹಿಂದಿ ಜತೆಗೆ ಇಂಗ್ಲಿಷ್‌ ಬಳಕೆ ಮಾಡುವುದು, ಅನಂತರದಲ್ಲಿ ಇಂಗ್ಲಿಷ್‌ ಅನ್ನು ಕೈಬಿಡುವ ನಿರ್ಧಾರವಾಗಿತ್ತು. ಅದರಂತೆ 1965ರಲ್ಲಿ ಹಿಂದಿಯನ್ನು ಕಡ್ಡಾಯ ಮಾಡಲು ಹೊರಟಾಗ ಮತ್ತೆ ತಮಿಳುನಾಡಿನಲ್ಲಿ ದೊಡ್ಡ ಹೋರಾಟಗಳೇ ಆರಂಭವಾಗಿದ್ದವು. ವಿಶೇಷವೆಂದರೆ 1959ರಲ್ಲೇ ನೆಹರೂ ಅವರು, ಹಿಂದಿ ಭಾಷಿಕ ರಾಜ್ಯಗಳ ಹೊರತಾಗಿ ಬೇರೆಡೆ ಇಂಗ್ಲಿಷ್‌ ಅನ್ನೇ ಬಳಕೆ ಮಾಡಬಹುದು ಎಂಬ ಭರವಸೆ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next