Advertisement

ಶುದ್ಧ ಕುಡಿವ ನೀರು ಘಟಕ ನಿರ್ವಹಣೆಗೆ ನಿರ್ಲಕ್ಷ್ಯವೇಕೆ?

09:08 AM Jun 20, 2020 | Suhan S |

ಮೊಳಕಾಲ್ಮೂರು: ತಾಲೂಕಿನಲ್ಲಿನ ಶುದ್ಧ ನೀರು ಘಟಕಗಳ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರುವ ಏಜೆನ್ಸಿಗಳನ್ನು ಬ್ಲಾಕ್‌ ಲಿಸ್ಟ್‌ ಗೆ ಸೇರಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರೇಷ್ಮೆ ವೀರೇಶ್‌ ಆಗ್ರಹಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಮಾರಮ್ಮನಹಳ್ಳಿ ಜನರಿಗೆ ಕುಡಿಯಲು ನೀರಿಗಾಗಿ ಕೊಳವೆಬಾವಿ ಕೊರೆಸಲು ತುಂಬಾ ತಡವಾಗಿದ್ದು, ಜನಸಾಮಾನ್ಯರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಆದರೆ ತಾಲೂಕಿನಲ್ಲಿ ಬಹುತೇಕ ಘಟಕಗಳು ಕೆಟ್ಟು ನಿಂತಿರುವುದನ್ನು ರಿಪೇರಿ ಮಾಡದ ಏಜೆನ್ಸಿ ಪಡೆದ ಕಂಪನಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕಾಗಿದೆ. ಇಲಾಖೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಸದಸ್ಯರ ಗಮನಕ್ಕೆ ತರುತ್ತಿಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸುಕುಮಾರ್‌ ಪವಾರ್‌ ಮತ್ತು ಸಹಾಯಕ ಇಂಜಿನಿಯರ್‌ ಪವನ್‌, ಕೋವಿಡ್ ಮತ್ತಿತರ ಕಾರಣ  ಗಳಿಂದ ಕೊಳವೆಬಾವಿ, ಪಂಪ್‌ಮತ್ತು ಮೋಟಾರ್‌ ಅಳವಡಿಕೆ, ನೀರು ಶುದ್ಧೀಕರಣ ಘಟಕಗಳ ರಿಪೇರಿ ಮಾಡುವುದು ವಿಳಂಬವಾಗಿದೆ. ತಾಲೂಕಿನಲ್ಲಿ 75 ಶುದ್ಧೀಕರಣ ಘಟಕಗಳಲ್ಲಿ 57 ಘಟಕಗಳು ಚಾಲ್ತಿಯಲ್ಲಿದ್ದು, 27 ಘಟಕಗಳು ಸ್ಥಗಿತಗೊಂಡಿವೆ. ಈ ಬಗ್ಗೆ ಏಜೆನ್ಸಿಗಳಿಗೆ ಪತ್ರದ ಮೂಲಕ ರಿಪೇರಿ ಮಾಡಲು ತಿಳಿಸಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ಇಂತಹ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ತಿಳಿಸಿದರು.

ತಾಪಂ ಸದಸ್ಯ ಟಿ. ರೇವಣ್ಣ ಮಾತನಾಡಿ, ತಾಲೂಕಿನಲ್ಲಿ ಅನಾರೋಗ್ಯಕ್ಕೀಡಾದ ಹೆಣ್ಣುಮಕ್ಕಳು ಮತ್ತಿತರರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ ಕೊರತೆಯಿದ್ದು, ಕೂಡಲೇ ಈ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗದಂತೆ ಗಮನಹರಿಸ  ಬೇಕಾಗಿದೆ. ಕೋನಸಾಗರದ ಮೂಲಕ ಆಂಧ್ರದವರು ಹೆಚ್ಚು ಬರುತ್ತಿದ್ದು, ಕೋವಿಡ್ ಭೀತಿ ಕಾಡುತ್ತಿರುವುದರಿಂದ ಕೂಡಲೇ ಚೆಕ್‌ಪೋಸ್ಟ್‌ ಸ್ಥಾಪಿಸಬೇಕು ಎಂದರು.

ತಾಪಂ ಇಒ ಪ್ರಕಾಶ್‌ ಮಾತನಾಡಿ, ಕೋವಿಡ್ ಇರುವುದರಿಂದ ಆದ್ಯತೆ ಮೇರೆಗೆ ಕಾರ್ಯನಿರ್ವಹಿಸಲಾಗುವುದು. ತಾಲೂಕಿನಲ್ಲಿ ಯಾವುದೇ ಇಲಾಖೆಯಿಂದ ನರೇಗಾ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಯಲ್ಲಿ ಕಡ್ಡಾಯವಾಗಿ ಕೂಲಿಕಾರರಿಗೆ ಕೆಲಸ ನೀಡಬೇಕು. ಜೆಸಿಬಿಯಿಂದ ಕಾಮಗಾರಿ ಕೈಗೊಂಡ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.

Advertisement

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ್‌, ಜಿಪಂ ಪಂಚಾಯತ್‌ರಾಜ್‌ ಇಲಾಖೆಯ ಸಹಾಯಕ ಅಭಿಯಂತರ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪ್ರಗತಿಯ ವರದಿ ಮಂಡಿಸಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಚನ್ನಮ್ಮ, ಸದಸ್ಯರಾದ ಟಿ.ಜಿ. ಬಸಣ್ಣ, ಎ.ಕೆ. ಮಂಜುನಾಥ, ಬಾಬು, ಎಚ್‌. ಲತಮ್ಮ, ಬಸಮ್ಮ, ತಿಮ್ಮಕ್ಕ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next