Advertisement

ವಿಚಾರಣೆ ಎದುರಿಸಲು ಹೆದರಿಕೆ ಏಕೆ?

11:09 PM Nov 25, 2019 | Lakshmi GovindaRaj |

ಬೆಂಗಳೂರು: “ಅವ್ಯವಹಾರ ನಡೆದಿಲ್ಲ; ತಪ್ಪು ಮಾಡಿಲ್ಲ’ ಎಂದಾದರೆ ಸ್ವಾಮೀಜಿಗಳಿಗೆ ವಿಚಾರಣೆ ಎದುರಿಸಲು ಸಮಸ್ಯೆಯೇನು? ಆರೋಪಗಳಲ್ಲಿ ಸತ್ಯಾಂಶಗಳಿಲ್ಲ ಎನ್ನುವುದಾದರೆ ಸ್ವಾಮೀಜಿಗಳು ವಿಚಾರಣೆ ಎದುರಿಸಿ ಆರೋಪ ಮುಕ್ತರಾಗಿ ಹೊರಬರಬಹುದಲ್ಲವೇ, ಯಾವುದೇ ಅಪರಾಧ ಮಾಡಿಲ್ಲ ಎಂದಾದರೆ ವಿಚಾರಣೆಗೆ ಹೆದರುವುದೇಕೆ?’.

Advertisement

ಹೀಗೆಂದು ಹೊಸನಗರ ರಾಮಚಂದ್ರಾಪುರ ಮಠಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ಪ್ರಶ್ನಿಸಿದೆ. “ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಪೀಠಾಧಿಪತಿ ಸ್ಥಾನದಿಂದ ರಾಘವೇಶ್ವರ ಭಾರತೀ ಶ್ರೀಗಳನ್ನು ಕೆಳಗಿಳಿಸಲು ಮತ್ತು ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ’ ಕುರಿತ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ

ಹಾಗೂ ಮಠದ ದುರಾಡಳಿತದ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸ್ವಾಮೀಜಿ ಪರ ವಕೀಲರಿಗೆ ಈ ರೀತಿ ಪ್ರಶ್ನಿಸಿತು. ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ಅರ್ಜಿದಾರ ರಾದ ಈಶ್ವರ್‌ ಭಟ್‌ ಹಾಗೂ ಜಯಕೃಷ್ಣ ಪರ ವಕೀಲರು, ಮೇಲ್ಮನವಿಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಮಠಾಧಿಪತಿಗಳು ಏಕೆ ಭಯಪಡಬೇಕು: ಆಗ, ಅರ್ಜಿದಾರರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶ ಇಲ್ಲವಾದರೆ ಸ್ವಾಮೀಜಿಗಳು ವಿಚಾರಣೆ ಎದುರಿಸಬಹುದಲ್ಲವೇ? ಮಠಾಧಿಪತಿ ಆದವರು ಯಾವುದೇ ಅಪರಾಧ ಮಾಡಿಲ್ಲ ಎಂದಾದರೆ ವಿಚಾರಣೆ ಎದುರಿಸಲು ಏನು ಕಷ್ಟ? ಏಕೆ ಹೆದರುತ್ತೀರಿ? ಆರೋಪಗಳಿಂದ ಮುಕ್ತರಾಗಿ ಬರಬಹು ದಲ್ಲವೇ? ಎಂದು ಮೌಖೀಕವಾಗಿ ಪ್ರಶ್ನಿಸಿತು. ಅಲ್ಲದೆ, ಅರ್ಜಿ ದಾರರು ಕೇಳುತ್ತಿರುವುದು ಸಂಸ್ಥೆಗೆ ಸಂಬಂಧಿಸಿದ ಪ್ರಶ್ನೆಯಲ್ಲ, ಪೀಠಾಧಿಪತಿಗೆ ಸಂಬಂಧಿಸಿದ್ದಲ್ಲವೇ? ರಾಜಕಾರಣಿಗಳು ವಿಚಾರಣೆಗೆ ಭಯ ಪಡಬಹುದು, ಮಠಾಧಿಪತಿಗಳು ಏಕೆ ಭಯಪಡುವುದು?

ಸ್ವಾಮೀಜಿಗಳ ವಿರುದ್ಧ ಗುರುತರ ಆರೋಪಗಳಿರುವಾಗ ಸ್ವತಃ ಹೈಕೋರ್ಟ್‌ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿ ಏಕೆ ವಿಚಾರಣೆ ನಡೆಸಬಾರದು?ಎಂದು ಮರುಪ್ರಶ್ನೆ ಮಾಡಿತು. ಸರ್ಕಾರಿ ವಕೀಲರು ವಾದಿಸಿ, ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠದ ಆದೇಶದ ಅನುಸಾರ ಮುಖ್ಯ ಕಾರ್ಯದರ್ಶಿ ಅವರು ಮುಜರಾಯಿ ಇಲಾಖೆಗೆ ಮಠದ ವಿರುದ್ಧದ ಆರೋಪಗಳ ವಿಚಾರಣೆಗೆ ನಿರ್ದೇಶನ ನೀಡಿದ್ದಾರೆಂದು ವಿವರಿಸಿದರು. ವಾದ ಹಾಗೂ ಪ್ರತಿವಾದ ಆಲಿಸಿದ ನ್ಯಾಯಪೀಠ, ಡಿ.16ರಂದು ಮೇಲ್ಮನವಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಅಜಿಯನ್ನೂ ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿತು.

Advertisement

ಪ್ರಕರಣದ ಹಿನ್ನೆಲೆ: ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ಕೋರಿದ್ದ ಮನವಿ ಪತ್ರವನ್ನು ಆಲಿಸಿ ಇತ್ಯರ್ಥಪಡಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿದ್ದ ಸುಭಾಷ್‌ ಸಿ.ಕುಂಟಿಯಾ ಅವರು ಮುಜರಾಯಿ ಇಲಾಖೆಗೆ ಆದೇಶಿಸಿದ್ದರು. ಅದರಂತೆ ಮುಜರಾಯಿ ಆಯುಕ್ತರು, ಮೂವರು ಸದಸ್ಯರ ಸಮಿತಿ ರಚಿಸಿ, ಮಠದ ವಿರುದ್ಧದ ದುರಾಡಳಿತ ಆರೋಪಗಳ ಕುರಿತು ವಿಚಾರಣೆ ನಡೆಸಲು ಆದೇಶಿಸಿದ್ದರು.

ಈ ಆದೇಶ ಪ್ರಶ್ನಿಸಿ ಮಠ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ತ್ರಿಸದಸ್ಯ ಸಮಿತಿ ವಿಚಾರಣೆಗೆ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಿತ್ತು. ಆ ಆದೇಶ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮಧ್ಯೆ ಮಠದಲ್ಲಿ ಅವ್ಯವಹಾರ ನಡೆದಿದ್ದು, ಅದರ ವಿರುದ್ಧ ತನಿಖೆಗೆ ಆದೇಶಿಸಬೇಕು ಹಾಗೂ ರಾಘವೇಶ್ವರ ಭಾರತಿ ಶ್ರೀಗಳನ್ನು ಮಠದ ಪೀಠಾಧಿಪತಿ ಸ್ಥಾನದಿಂದ ಕೆಳಗಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಮಠಕ್ಕೆ ಕೆಟ್ಟ ಹೆಸರು: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ ಪರ ವಕೀಲರು, ಅರ್ಜಿದಾರರು ಮಠದ ಸ್ವಯಂ ಘೋಷಿತ ಭಕ್ತರು. ದುರುದ್ದೇಶಪೂರ್ವಕವಾಗಿ ಸ್ವಾಮೀಜಿಯವರ ಗೌರವಕ್ಕೆ ಧಕ್ಕೆ ತರಲು ದೂರು ಸಲ್ಲಿಸಿದ್ದಾರೆ. ಇಂತಹ ದೂರು ಪರಿಗಣಿಸಿ ವಿಚಾರಣೆಗೆ ಅವಕಾಶ ಕಲ್ಪಿಸಿದರೆ, ಇಂತಹದ್ದೇ ಮತ್ತಷ್ಟು ಅರ್ಜಿ ಸಲ್ಲಿಕೆಯಾಗುತ್ತವೆ. ಇದರಿಂದ ಸಂಸ್ಥೆಗೆ (ಮಠ) ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next