ಚೆನ್ನೈ : ನಟ, ರಾಜಕಾರಣಿ ಕಮಲಹಾಸನ್ ಅವರು ವಿವಾದದ ಜೇನುಗೂಡಿಗೆ ಕೈಹಾಕಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಭಾರತ ಸರಕಾರ ಯಾಕೆ ಜನಮತ ಗಣನೆ ನಡೆಸಬಾರದು ಎಂದವರು ಪ್ರಶ್ನಿಸಿದ್ದಾರೆ ಮಾತ್ರವಲ್ಲ ಪಾಕ್ ಆಕ್ರಮಿತ ಕಾಶ್ಮೀರವನ್ನು ಅವರು ಆಜಾದ್ ಕಾಶ್ಮೀರ್ ಎಂದು ಉಲ್ಲೇಖೀಸಿದ್ದಾರೆ.
ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನೂತನ ಎಂಎನ್‌ಎಂ ಪಕ್ಷದ ನಾಯಕ ಕಮಲಹಾಸನ್, ಜಮ್ಮು ಕಾಶ್ಮೀರದಲ್ಲಿ ಭಾರತ ಜನಮತ ಗಣನೆ ನಡೆಸಬೇಕು ಎಂದು ಹೇಳುವ ಮೂಲಕ ಪಾಕ್ ಆಗ್ರಹವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.
“ಆಜಾದ್ ಕಾಶ್ಮೀರದಲ್ಲಿ ಜಿಹಾದಿಗಳನ್ನು ಹೀರೋಗಳೆಂದು ಬಿಂಬಿಸಲು ಅವರ ಫೋಟೋಗಳನ್ನು ರೈಲುಗಳಲ್ಲಿ ಹಾಕುತ್ತಾರೆ; ಅದು ನಿಜಕ್ಕೂ ಮೂರ್ಖತನದ ಕೆಲಸ; ಆದರೆ ಭಾರತ ಕೂಡ ಅದಕ್ಕೆ ಸಮನಾದ ಮೂರ್ಖತನವನ್ನು ತೋರುತ್ತಿದೆ. ಇದು ಕೂಡ ಸರಿಯಲ್ಲ’ ಎಂದು ಕಮಲಹಾಸನ್ ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
“ಭಾರತವು ನೆರೆಯ ದೇಶಕ್ಕಿಂತ ಎಷ್ಟೋ ಉತ್ತಮ ದೇಶ ಎನ್ನುವುದನ್ನು ನೀವು ಸಾಬೀತು ಪಡಿಸಲು ಬಯಸುವಿರೆಂದಾದರೆ ನೀವು ಈ ರೀತಿಯಲ್ಲಿ ವರ್ತಿಸಬಾರದು; ಭಾರತ ಜಮ್ಮು ಕಾಶ್ಮೀರದಲ್ಲಿ ಯಾಕೆ ಜನಮತ ಗಣನೆ ನಡೆಸಬಾರದು ? ಇದಕ್ಕಾಗಿ ಭಾರತ ಯಾಕೆ ಹೆದರಬೇಕು ?ನಮ್ಮ ಸೈನಿಕರು ಯಾಕೆ ಸಾಯಬೇಕು ? ನಮ್ಮ ಮನೆಯ ವಾಚ್ ಮ್ಯಾನ್ ಯಾಕೆ ಸಾಯಬೇಕು ? ಭಾರತ ಮತ್ತು ಪಾಕಿಸ್ಥಾನದ ಎರಡೂ ಕಡೆಯ ರಾಜಕಾರಣಿಗಳು ಸರಿಯಾಗಿ ನಡೆದುಕೊಂಡರೆ ಎರಡೂ ಕಡೆಯ ಸೈನಿಕರು ಸಾಯುವ ಅಗತ್ಯವೇ ಇರುವುದಿಲ್ಲ; ಆಗ ನಿಯಂತ್ರ ರೇಖೆಯು ನಿಜವಾದ ನಿಯಂತ್ರಣದಲ್ಲಿರುತ್ತದೆ’ ಎಂದು ಕಮಲಹಾಸನ್ ಹೇಳಿದರು.