Advertisement

ನಿಮ್‌ ಮೆಮೊರಿ ಕಾರ್ಡು ಸರಿ ಇದ್ಯಾ? ನೋಟಿಫಿಕೇಷನ್‌ಗಳ ಆತ್ಮಕತೆ

03:45 AM Jan 17, 2017 | |

ಬಾಲ್ಯದ ಹುಟ್ಟುಹಬ್ಬದ ದಿನಾಚರಣೆಗಳನ್ನು ಆಚರಿಸಿದ ನೆನಪುಗಳು ತುಂಬಾ ಕಡಿಮೆ. ಅವಕ್ಕೆ ಕಾರಣಗಳೂ ಹಲವು. ಬಡತನ ತನ್ನ ಸವಾರಿಯನ್ನು ಸದಾ ಜಾರಿಯಲ್ಲಿಟ್ಟಿತ್ತು.  ಆದರೆ ನನಗೆ ಬುದ್ಧಿ ಬಂದಾಗಿನಿಂದ ಗೆಳೆಯರ ಜೊತೆ ನನ್ನ ಹುಟ್ಟುಹಬ್ಬವನ್ನು ಆಚರಿಸದ ವರ್ಷವಿಲ್ಲ. 

Advertisement

ಗೆಳೆಯರಿಗೆ ಹುಟ್ಟುಹಬ್ಬವೆಂದರೆ ಹಾಗೆ, ತಮ್ಮ ಹುಚ್ಚಾಟವನ್ನು ಮೆರೆಯಲು, ಮೋಜು ಮಸ್ತಿಗಾಗಿ, ಹುಟ್ಟು ಹಬ್ಬ ಆಚರಿಸುವವನ ಬೆನ್ನು ಮೂಳೆ ಮುರಿದು ಹೋಗುವಷ್ಟು ಹೊಡೆಯಲು, ಇನ್ನೂ ಹಲವು ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸದಾ ಹುಟ್ಟು ಹಬ್ಬದ ತಿಂಗಳನ್ನು ಯಾವಾಗಲೂ ಎದುರು ನೋಡುವ ಎಷ್ಟೋ ಮಂದಿಗಳಲ್ಲಿ  ನಾನೂ ಒಬ್ಬ. 

ಕಳೆದ ನನ್ನ ಎಲ್ಲಾ ಹುಟ್ಟುಹಬ್ಬವನ್ನು ಅವಿಸ್ಮರಣೀಯಗೊಳಿಸಿದ ಕೀರ್ತಿ ನನ್ನ ಗೆಳೆಯರದ್ದು. ಪ್ರತಿ ವರ್ಷದ ನನ್ನ ಹುಟ್ಟು ಹಬ್ಬ ಮುಂದಿನ ವರ್ಷದ ಜನ್ಮ ದಿನದ ಆಚರಣೆಯನ್ನು ಸದಾ ಎದುರು ನೋಡುವಂತೆ ಮಾಡಿತ್ತು. ಕೊನೆ ಕ್ಷಣದವರೆಗೂ ಗುಟ್ಟನ್ನು ಬಿಟ್ಟು ಕೊಡದ ನನ್ನ ಗೆಳೆಯರೂ, ಅಂತಿಮದಲ್ಲಿ ನನಗೆ ದೊಡ್ಡ ಆಶ್ಚರ್ಯದೊಡನೆ, ನೂರ್ಕಾಲ ನೆನಪಿಡುವ ಉಡುಗೊರೆಯನ್ನು ನೀಡಿ ಸಂತೋಷಗೊಳಿಸುತ್ತಿದ್ದರು. ಹೀಗೆ ವರ್ಷಗಳು ಉರುಳಿದವು. ಪಿಯುಸಿ, ಡಿಗ್ರಿ ದಿನಗಳಲ್ಲಿ ಬಂದ ಅವೆಷ್ಟೋ ಗೆಳೆಯ ಗೆಳತಿಯರು ನನ್ನ ಸ್ಮತಿ ಪಟಲದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. 

ಕಾಲೇಜು ದಿನಗಳಲ್ಲಿ ಸದಾ ಅವರಿವರ ಹುಟ್ಟುಹಬ್ಬವನ್ನು ಆಚರಿಸುತ್ತಾ, ತಿಂಗಳು, ವಾರ, ದಿನಗಳನ್ನು ನೆನಪಿನಲ್ಲಿಡುತ್ತಾ, ಸಂತೋಷದ ಸಂಭ್ರಮಗಳನ್ನು ಕಳೆದ ಕ್ಷಣಗಳಿಗೆ ಅಂಕಿ ಸಂಖ್ಯೆಗಳ ಲೆಕ್ಕವಿಲ್ಲ. ಅದಕ್ಕೇ ಇರಬೇಕು ಕಾಲೇಜ್‌ ಲೈಫ್ ಇಸ್‌ ಗೋಲ್ಡನ್‌ ಲೈಫ್ ಎಂದಿದ್ದು. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಎಲ್ಲೋ ನಮ್ಮ ಅನ್ವೇಷಣೆಗಳೇ ನಮ್ಮ ಸಂಬಂದಕ್ಕೆ ಅಡ್ಡಿಯಾಗಿವೆ ಅನ್ನಿಸ ತೊಡಗಿದೆ. 

ಇಂದಿನ ಆಚರಣೆಗಳೆಲ್ಲವೂ, ಮೊಬೈಲ್‌ ನೋಟಿಫಿಕೇಶನ್‌ ಅಲರ್ಟ್‌ಗಳಿಂದಲೇ ನಮ್ಮನ್ನು ಎಚ್ಚರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಮಾತನ್ನು ಹೇಳಲೂ ಕಾರಣವಿದೆ. ಇಂದು ನಮ್ಮ ಎಷ್ಟೋ ಗೆಳೆಯ ಗೆಳತಿಯರ ಹುಟ್ಟು ಹಬ್ಬದ ದಿನವನ್ನು ನಮಗೆ ತಿಳಿಸುವುದು ನಮ್ಮ ಮೊಬೈಲೋ, ವಾಟ್ಸಾಪ್‌, ಫೇಸಬುಕ್‌ನಂತಹ ಆ್ಯಪ್‌ಗ್ಳು. ಅವು ತಿಳಿಸಿದ ದಿನದಂದೇ ನಾವು ನಮ್ಮ ಗೆಳೆಯ-ಗೆಳತಿಯರಿಗೆ ವಿಷ್‌ ಮಾಡುತ್ತೇವೆ. 

Advertisement

ಒಂದು ವೇಳೆ ಅವು ನಮಗೆ ತಿಳಿಸದೇ ಹೋದರೆ, ವಿಷ್‌ನ ಉಸಾಬರಿಗೆ ಹೋಗದ ಎಷ್ಟೋ ಜನರನ್ನು ನಮ್ಮ ನಡುವೆ ನೋಡಬಹುದು. ವರ್ಷದಲ್ಲಿ ಸ್ವಲ್ಪ ಹಿರಿಯನಾದ ನಾನು, ನನ್ನ ಡೇಟ್‌ ಆಫ್ ಬರ್ತ್‌ ಅನ್ನು ನನ್ನ ಫೇಸಬುಕ್‌ ಅಕೌಂಟಿನಲ್ಲಿ ಹೈಡ್‌ ಮಾಡಿ, ನನ್ನ ವರ್ಷ ಯಾರಿಗೂ ತಿಳಿಯ ಬಾರದೆಂಬ ದುರಾಸೆಯಿಂದ ಇದ್ದ ನನಗೆ, ಈ ವರ್ಷದ ಹುಟ್ಟುಹಬ್ಬ ಇಷ್ಟೂ ವರ್ಷ ಆಚರಿಸಿದ ಎಲ್ಲಾ ಹುಟ್ಟುಹಬ್ಬಕ್ಕಿಂತ ಭಿನ್ನ ವಾಗಿತ್ತು. 

ನನ್ನ ಹುಟ್ಟುಹಬ್ಬದ ದಿನದ ರಾತ್ರಿ ನನ್ನ ಜಂಗಮವಾಣಿಯ ರಿಂಗಣಕ್ಕೆ ಕಾಯುತ್ತಿದ್ದರೆ, ಕರೆ ಮಾಡಿ ವಿಷ್‌ ಮಾಡಿದ ವ್ಯಕ್ತಿಗಳಿಲ್ಲ. ನಂತರ ಎರಡು ದಿನ ಕಳೆದು ನಾನೇ ಕರೆ ಮಾಡಿದ ನಂತರ, ಸಾರಿ ಮಗಾ, ಬಿಲೇಟೆಡ್‌ ವಿಷಸ್‌ ಮಗಾ. ಆ್ಯಕುcವಲೀ ಏನಾಯ್ತು ಗೊತ್ತಾ. ನನ್ನ ಮೊಬೈಲ್‌ ನೋಟಿಫಿಕೇಶನಲ್ಲಿ ತೋರಿಸಲೇ ಇಲ್ಲ ಮಗಾ ಎಂಬ ಉದ್ಗಾರ. ಅವರಿಗೆಲ್ಲಿ ಗೊತ್ತು ನಮ್ಮ ಹಿಡನ್‌ ಅಜೆಂಡಾ. ಆದರೆ ಗೆಳಯರೆ, ತಂತ್ರಜ್ಞಾನ ನಮ್ಮ ಅಡಿಯಾಳಾಗಬೇಕೇ ಹೊರತು, ನಾವು ಅದರ ಗುಲಾಮರಾಗಬಾರದು. ಯಾವುದೇ ಕಾರಣಕ್ಕೂ ನೋಟಿಫಿಕೇಶನ್‌ ಅನ್ನು ನಂಬಿ ವಿಷ್‌ ಮಾಡದೇ ಇರಬೇಡಿ ಅಥವಾ ನೋಟಿಫಿಕೇಶನನ್ನೆ ನಂಬಿ ವಿಷ್‌ ಮಾಡಬೇಡಿ. ಸ್ಮತಿಪಟಲದ ಒಳಾಂಗಣದ ದುಡಿತಕ್ಕೆ ಬೆಲೆ ಇರಲಿ. 

– ಕರನ್‌ ಕಂಬಾರ್‌
ಪತ್ರಿಕೋದ್ಯಮ ವಿಭಾಗ,
ಆಳ್ವಾಸ್‌ ಕಾಲೇಜು, ಮೂಡಬಿದಿರೆ.

Advertisement

Udayavani is now on Telegram. Click here to join our channel and stay updated with the latest news.

Next