Advertisement

Desi Swara: ಕರ್ನಾಟಕ ಸಂಘ ಕತಾರ್‌: ಚೊಚ್ಚಲ ಶಿಕ್ಷಕರ ದಿನಾಚರಣೆ ಸಮಾರಂಭ

01:03 PM Sep 21, 2024 | Team Udayavani |

ದೋಹಾ: ಕರ್ನಾಟಕ ಸಂಘ ಕತಾರ್‌ ಶಿಕ್ಷಕರ ದಿನ ಕಾರ್ಯಕ್ರಮವವನ್ನು ದೋಹಾದ ವೈಬ್ರೆಂಟ್‌ ಇಂಡಸ್ಟ್ರಿಯಲ್‌ ಸೇಫ್ಟಿ ಸೆಂಟರ್‌ನಲ್ಲಿ ಆಯೋಜಿಸಿತ್ತು. ಶಿಕ್ಷಕರ ದಿನಾಚರಣೆಯನ್ನು ಸಂಘವು ಮೊದಲ ಬಾರಿಗೆ ಹಮ್ಮಿಕೊಂಡಿದ್ದು, ಸ್ಥಾಪನೆಯ ಇಪ್ಪತ್ತೈದನೆ ವರ್ಷಾಚರಣೆ ಸಂದರ್ಭದಲ್ಲಿ ಇಪ್ಪತ್ತೈದು ಸದಸ್ಯ ಶಿಕ್ಷಕರು ಗೌರವಕ್ಕೆ ಪಾತ್ರರಾಗಿರುವುದು ಸಂಘಕ್ಕೆ ಸಂತಸದ ಸಂಗತಿ.

Advertisement

ಶೈಕ್ಷಣಿಕ ಶಿಕ್ಷಕರೊಂದಿಗೆ, ಕರ್ನಾಟಕ ಸಂಘವು ಆಯೋಜಿಸಿದ ವಾರಾಂತ್ಯದ ಭಾಷಾ ತರಗತಿಗಳನ್ನು ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಕನ್ನಡ ಶಿಕ್ಷಕರನ್ನು ಸಹ ಸಮ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಡಿಯನ್‌ ಕಲ್ಚರಲ್‌ ಸೆಂಟರ್‌ನ ಅಧ್ಯಕ್ಷರಾದ ಮಣಿಕಂಠನ್‌ ಎ.ಪಿ., ಗೌರವಾನ್ವಿತ ಅತಿಥಿಗಳಾಗಿ ಬ್ರಿಲಿಯಂಟ್‌ ಇಂಡಿಯನ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನ ಪ್ರಾಂಶುಪಾಲರಾದ ಆಶಾ ಶಿಜು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾ ಗಿಲು, ಸಲಹಾ ಮಂಡಳಿ ಅಧ್ಯಕ್ಷರು ಮಹೇಶ್‌ ಗೌಡ, ಸಲಹಾ ಮಂಡಳಿ ಸದಸ್ಯರಾದ ಮನ್ನಂಗಿ, ಅರುಣ್‌, ದೀಪಕ್‌ ಶೆಟ್ಟಿ, ಮಧು, ಡಾ| ಸಂಜಯ್‌ ಕುದರಿ, ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕತಾರ್‌ನ ವಿವಿಧ ಅಂತಾರಾಷ್ಟ್ರೀಯ ಶಾಲೆಗಳ ಹೆಸರಾಂತ ಶಿಕ್ಷಕರು, ಕರ್ನಾಟಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅನಿಲ್‌ ಭಾಸಗಿ ಮತ್ತು ಸುಷ್ಮಾ ಹರೀಶ್‌ ಅವರು ಅತ್ಯುತ್ತಮವಾಗಿ ನಿರ್ದೇಶಿಸಿದ ಗುರುವಂದನ ಗೀತೆಯನ್ನು ಕರ್ನಾಟಕ ಸಂಘದ ಮಕ್ಕಳು ಹಾಡುವ ಮೂಲಕ ಪ್ರೇಕ್ಷಕರ ಮನಗೆದ್ದರು.

Advertisement

ಅಧ್ಯಕ್ಷರಾದ ರವಿ ಶೆಟ್ಟಿ ಸ್ವಾಗತಿಸಿ, ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ಪ್ರಾಮುಖ್ಯತೆಯ ಬಗ್ಗೆ ಸಂಸ್ಕೃತ ಉಲ್ಲೇಖವನ್ನು ವಿವರಿಸಿ ಅದನ್ನು ಎಲ್ಲ ಶಿಕ್ಷಕರಿಗೆ ಸಮರ್ಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಮಣಿಕಂಠನ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಐಸಿಸಿಯೊಂದಿಗೆ ಕೈಜೋಡಿಸಿದ್ದಕ್ಕಾಗಿ ಕರ್ನಾಟಕ ಸಂಘ ಕತಾರ್‌ಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಶಿಕ್ಷಕರನ್ನು ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಆಶಾ ಶಿಜು ಅವರು ತಮ್ಮ ಭಾಷಣದಲ್ಲಿ ಶಿಕ್ಷಕಿಯಾಗಿ ತಮ್ಮ ಜೀವಮಾನದ ಅನುಭವಗಳನ್ನು ಮತ್ತು ಆ ಅನುಭವಗಳು ಅವರಿಗೆ ಉತ್ತಮ ಶಿಕ್ಷಕಿಯಾಗಲು ಹೇಗೆ ಸಹಾಯ ಮಾಡಿದವು ಎಂಬುದನ್ನು ತಿಳಿಸಿದರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಾಹಿತ್ಯ ಕ್ಲಬ್‌ಗ ಕೊಡುಗೆ ನೀಡುವ ಅಂಗವಾಗಿ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಕನ್ನಡ ಪುಸ್ತಕಗಳ ಸಂಗ್ರಹವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್‌ ಮತ್ತು ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಹಸ್ತಾಂತರಿಸಿದರು.

ಕರ್ನಾಟಕ ಸಂಘ ಕತಾರ್‌ ವತಿಯಿಂದ 2022-2023ನೇ ಸಾಲಿನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಸಂಜನಾ ಜೀವನ್‌ ಅವರು ಭಾರತಕ್ಕೆ ಮರುಳುತ್ತಿರುವ ನಿಮಿತ್ತ, ಸಂಘದ ಅಧ್ಯಕ್ಷರು, ಸಲಹಾ ಸಮಿತಿ ಸದಸ್ಯರು, ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಅವರಿಗೆ ಸ್ಮರಣಿಕೆ ನೀಡುವ ಮೂಲಕ ಬೀಳ್ಕೊಡಲಾಯಿತು.

ಭುವನಾ ಸೂರಜ್‌ ನಿರ್ವಹಿಸಿ, ಭಾವನಾ ನವೀನ್‌ ವಂದಿಸಿದರು. ಅಧ್ಯಕ್ಷರೊಂದಿಗೆ ಎಲ್ಲ ಸಮಿತಿ ಸದಸ್ಯರು ಮತ್ತು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next