Advertisement
ತಡೆಕಜೆಯ ಗೌರಿ ಹೊಳೆಯಿಂದ ಆಚೆ ಬದಿಯಲ್ಲಿ ಅನೇಕ ಮನೆಗಳಿವೆ. ಸುಮಾರು 50 ವರ್ಷಗಳಷ್ಟು ಹಳೆಯದಾದ ಈ ಹೊಳೆಯ ಕಾಲು ಸಂಕ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದರಿಂದ ಈ ಭಾಗದ ಜನರು ಅಪಾಯದಲ್ಲಿಯೇ ಕಾಲು ಸಂಕ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕು ಸರಂಜಾಮುಗಳನ್ನು ತಡೆಕಜೆ ಕಾಲು ಸಂಕದ ತನಕ ವಾಹನದಲ್ಲಿ ಸಾಗಾಟ ಮಾಡಬಹುದು. ಈ ರಸ್ತೆಯೂ ದುರಸ್ತಿಯಿಲ್ಲದ ಪರಿಣಾಮ ಜೀಪು ಬಿಟ್ಟರೆ ಉಳಿದ ಯಾವುದೇ ವಾಹನ ಸಂಚರಿಸುವುದು ಕಷ್ಟ ಸಾಧ್ಯ. ಕಾಲು ಸಂಕದ ಪಕ್ಕದ ಹೊಳೆಯಿಂದ ಇನ್ನೊಂದು ಬದಿಗೆ ಕೃಷಿ ಉತ್ಪನ್ನಗಳನ್ನು, ದಿನಬಳಕೆ ಸಾಮಾನುಗಳನ್ನು ಸಾಗಾಟ ಮಾಡಲು ತಲೆ ಹೊರೆಯೇ ಗತಿ. ಅಶಕ್ತರು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಬೇಕಿದ್ದರೆ, ಅಥವಾ ವಾಹನದಲ್ಲೇ ಸಾಮಗ್ರಿಗಳನ್ನು ಒಯ್ಯಬೇಕಾದರೆ ಪಂಜಿಗಾರು – ಕಲ್ಲಪನೆ ಮುಖಾಂತರ 8 ಕಿ.ಮೀ. ಸುತ್ತುಬಳಸಿನ ದಾರಿಯಿದೆ. ಬೆಳ್ಳಾರೆ-ತಡೆಕಜೆ ಮಾರ್ಗದ ಮುಖಾಂತರ ಪ್ರಯಾಣ ಬೆಳೆಸುವುದಾದರೆ 1.5 ಕಿ.ಮೀ. ದೂರ ಅಷ್ಟೆ. ತಡೆಕಜೆ ಕಾಲು ಸಂಕದ ಕುಂದ ಕುಸಿದಿರುವ ಬಗ್ಗೆ ಹಾಗೂ ತಡೆ ಕಜೆ-ಕೊಡಿಯಾಲಕ್ಕೆ ಸರ್ವ ಋತು ರಸ್ತೆ ನಿರ್ಮಾಣ ಮಾಡಲು ತಡೆಕಜೆ ಎಂಬಲ್ಲಿ ಗೌರಿ ಹೊಳೆಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯ ಜನರು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಸಂಬಂಧಪಟ್ಟ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು. ಸೇತುವೆ ನಿರ್ಮಾಣ ಮಾಡಿಕೊಡುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿಗೆ ಭರವಸೆಯನ್ನೂ ನೀಡಿದ್ದರು.
Related Articles
Advertisement
ಈ ಹಿನ್ನೆಲೆಯಲ್ಲಿ 2015ರಲ್ಲಿ ಉಪ ಲೋಕಾಯುಕ್ತರಾದ ನ್ಯಾ| ಸುಭಾಶ್ ಬಿ. ಆಡಿ ಅವರು ಬೆಳ್ಳಾರೆ ತಡೆಕಜೆ ಎಂಬಲ್ಲಿಯ ಕುಸಿದ ಸೇತುವೆಯನ್ನು ವೀಕ್ಷಿಸಿ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡು, ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಬಗ್ಗೆ ಎಸ್ಟಿಮೇಟ್ ಮಾಡಿ ಜಿ.ಪಂ.ಗೆ ಪತ್ರ ಬರೆಯಲು ಸೂಚಿಸಿದ್ದರು. ಅದೇ ವರ್ಷ ಸೇತುವೆ ನಿರ್ಮಾಣಕ್ಕೆ 85 ಲಕ್ಷ ರೂ. ಹಾಗೂ ರಸ್ತೆ ಅಭಿವೃದ್ಧಿಗೆ 1 ಕೋಟಿ – ಹೀಗೆ ಒಟ್ಟು 1.85 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಿ ಜಿ.ಪಂ.ಗೆ ಸಲ್ಲಿಸಲಾಯಿತು. ಜಿ.ಪಂ. ಅದನ್ನು ಬೆಂಗಳೂರಿನ ಪಂಚಾಯತ್ ರಾಜ್ಇಲಾಖೆಗೆ ಕಳುಹಿಸಿದ್ದರೂ, ಅಲ್ಲಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. 2015ರಲ್ಲಿ ಉಪಲೋಕಾಯಕ್ತರ ಹೇಳಿಕೆ ಮೇರೆಗೆ ಜಿಲ್ಲಾ ಪಂಚಾಯತ್‌ಗೆ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಕುರಿತಾದ ಎಸ್ಟಿಮೇಟ್ ಮಾಡಿ, ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈ ಮನವಿಯ ಪ್ರತಿಯನ್ನು ವಾರದ ಹಿಂದೆ ಉಪಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಜಿ.ಪಂ. ಎಂಜಿನಿಯರ್ ಸಂಗಪ್ಪ ಹುಕ್ಕೇರಿ ಪ್ರತಿಕ್ರಿಯಿಸಿದ್ದಾರೆ. ಲೋಕಾಯುಕ್ತರಿಂದ ನೋಟಿಸ್
ಉಪಲೋಕಾಯುಕ್ತರು ಕಳೆದ ವಾರ ಪುತ್ತೂರಿಗೆ ಬಂದಿದ್ದ ಸಂದರ್ಭದಲ್ಲಿ ಸ್ಥಳೀಯರು 2015ರಲ್ಲಿ ಪಂಚಾಯತ್ ರಾಜ್ ಇಲಾಖೆ ಕಳುಹಿಸಿಕೊಟ್ಟ ಎಸ್ಟಿಮೇಟ್ ಮತ್ತು ಮನವಿಯ ಪ್ರತಿಯನ್ನು ನೀಡಿ ದೂರು ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿದ ಲೋಕಾಯುಕ್ತರು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಮಾಡಿದ್ದಾರೆ.