Advertisement

PSI scandal ಆದಾಗ ಬಿಜೆಪಿ ಸಚಿವರು ರಾಜೀನಾಮೆ ನೀಡಿಲ್ಲವೇಕೆ: ಡಿಕೆಶಿ ಪ್ರಶ್ನೆ-1

01:14 AM Aug 04, 2024 | Team Udayavani |

ರಾಮನಗರ: “ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪಿಎಸ್‌ಐ ಹಗರಣ ನಡೆದಿತ್ತಲ್ಲವೇ? ಆಗ ಸಚಿವರು ಏಕೆ ರಾಜೀನಾಮೆ ನೀಡಿರಲಿಲ್ಲ?’ಇದು ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ಪಾದಯಾತ್ರೆ ಆರಂಭಿಸಿರುವ ಬಿಜೆಪಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಕಿರುವ ಪ್ರಶ್ನೆ.

Advertisement

ಶನಿವಾರ ರಾಮನಗರದ ಹಳೇ ಬಸ್‌ ನಿಲ್ದಾಣದ ವೃತ್ತದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ವಿರುದ್ಧ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯಲ್ಲಿ ಮಾತ ನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಭ್ರಷ್ಟಾಚಾರವೇ ಬಿಜೆಪಿ-ಜೆಡಿಎಸ್‌ನ ತಂದೆ-ತಾಯಿ, ಭ್ರಷ್ಟಾಚಾರವೇ ಅವರ ಬಂಧು-ಬಳಗ ಎಂದು ದೋಸ್ತಿ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು.

ನಾನು ಪೆನ್‌ಡ್ರೈವ್‌ ಹಂಚುವಷ್ಟು ನೀಚನಲ್ಲ ಎಂದು ರಾಜ್ಯದ ಜನತೆಗೆ ತಿಳಿದಿದೆ. ಈಗ ಪೆನ್‌ ಡ್ರೈವ್‌ ಬಿಟ್ಟಿದ್ದು ಯಾರು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಬಿಜೆಪಿಯವರು ಏಕೆ ಪೆನ್‌ಡ್ರೈವ್‌ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಕಣ್ಣೀರಿಟ್ಟು ವಿಧಾನಸೌಧದಿಂದ ಹೊರಗೆ ಹೋದದ್ದು, ಜೈಲಿಗೆ ಹೋದದ್ದಕ್ಕೆ ಕುಮಾರಸ್ವಾಮಿಯೇ ಕಾರಣ ಎಂಬುದನ್ನು ಸ್ಮರಿಸಿಕೊಳ್ಳಬೇಕು. ಕುಮಾರಸ್ವಾಮಿ ನನ್ನ ಮೇಲೆ ಹಾಕಿಸಿದ್ದ ಕೇಸ್‌, ತಿಹಾರ್‌ ಜೈಲನ್ನು ನಾನು ನೋಡಿದ್ದೇನೆ. ಎಚ್‌.ಡಿ. ಕುಮಾರಸ್ವಾಮಿ ಅವರ ಹಿಂದಿನ ಆಸ್ತಿ, ಈಗ ಹೆಚ್ಚಳವಾಗಿರುವ ಆಸ್ತಿ ಬಗ್ಗೆ ಮೊದಲು ಮಾತನಾಡಲಿ ಎಂದು ಸವಾಲು ಹಾಕಿದರು.

ಎಚ್‌ಡಿಕೆ ಬ್ರಹ್ಮಾಂಡ ಭ್ರಷ್ಟಾಚಾರ
ಮುಡಾ ನಿವೇಶನಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರದ್ದು ಏನೂ ತಪ್ಪಿಲ್ಲ. ಅವರು ಮುಡಾಗೆ ನಿವೇಶನ ನೀಡಿ ಪರಿಹಾರ ಪಡೆದಿದ್ದಾರೆ. ರಾಜ್ಯಪಾಲರ ಬಳಿ ಇರುವ ದಾಖಲೆ, ಮೈನಿಂಗ್‌ ಬಗ್ಗೆ ಈಗ ನಾನು ಕೇಳುವುದಿಲ್ಲ, ಕೇತಗಾನಹಳ್ಳಿ ಆಸ್ತಿಯ ಬಗ್ಗೆಯೂ ನಿಧಾನವಾಗಿ ಮಾತನಾಡುತ್ತೇನೆ. ಅದಕ್ಕೂ ಮೊದಲು ಬೆಂಗಳೂರು ನಗರ ಪ್ರದೇಶದ ಅವರ ಆಸ್ತಿಗಳ ಬಗ್ಗೆ ಮಾಹಿತಿ ನೀಡಲಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನಾವು ಹೆಣ್ಣು, ನೀನೇ ಗಂಡಸು
“ರಾಮನಗರದಲ್ಲಿ ಯಾರಪ್ಪ ಗಂಡಸು ಎಂದಿದ್ದೆಯಲ್ಲ ಅಶ್ವತ್ಥನಾರಾಯಣ, ನೀನು ಬಹಳ ದೊಡ್ಡ ಗಂಡಸು, ನಾವೆಲ್ಲ ಹೆಂಗಸರು. ನಮ್ಮ ಜಿಲ್ಲೆಯಲ್ಲಿ ಮೂವರು ಯುವಕರು ಜಮೀನು ಮಾರಿ ಪಿಎಸ್‌ಐ ಹುದ್ದೆಗೆ ಹಣ ನೀಡಿದ್ದರಲ್ಲ, ಅವರಿಗೆ ಏನು ಮಾಡಿದೆ? ಅಶ್ವತ್ಥನಾರಾಯಣ ಮಾಹಿತಿ ನೀಡಪ್ಪ’ ಎಂದು ಮಾಜಿ ಡಿಸಿಎಂಗೆ ಕಿಚಾಯಿಸಿದರು. ಅಲ್ಲದೆ ಪಿಎಸ್‌ಐ ಹಗರಣದ ಬಗ್ಗೆ ಮೊದಲು ಉತ್ತರಿಸಿ ಎಂದು ಬಿಜೆಪಿಗೆ ಸವಾಲು ಹಾಕಿದರು.

ಎಚ್‌ಡಿಕೆಯದ್ದು ತಿರುಕನ ಕನಸು
ನಮ್ಮ ಸರಕಾರವನ್ನು 10 ತಿಂಗಳುಗಳಲ್ಲಿ ಬೀಳಿಸುತ್ತೇನೆಂದು ಕುಮಾರಸ್ವಾಮಿ ಹೇಳಿದ್ದಾರೆ. ಅದು ತಿರುಕನ ಕನಸು. ಮುಂದಿನ ಅವಧಿಯಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಹಿಟ್‌ ಆ್ಯಂಡ್‌ ರನ್‌’
ಹಿಟ್‌ ಆ್ಯಂಡ್‌ ರನ್‌’ಗೆ ಕುಮಾರಸ್ವಾಮಿ ಪ್ರತ್ಯಕ್ಷ ಸಾಕ್ಷಿ. ಕಾವೇರಿ ನೀರು, ಮೇಕೆದಾಟುವಿಗೆ ಹೆಜ್ಜೆ ಹಾಕದ ನೀವು ರೈತರ ಬದುಕನ್ನು ಹಸನುಗೊಳಿಸಿಲ್ಲ. ನಿಮ್ಮ ನಿಜಬಣ್ಣ ಜನತೆಗೆ ತಿಳಿದಿದೆ ಎಂದು ಎಚ್‌ಡಿಕೆ ವಿರುದ್ಧ ಕಿಡಿಕಾರಿದರು.

ಡಿಕೆಶಿ ಪ್ರಶ್ನೆಗಳ ಬಾಣ
1ಪಿಎಸ್‌ಐ ಹಗರಣದಲ್ಲಿ ಭಾಗಿ ಯಾದ ಬಿಜೆಪಿಗೆ ಪಾದಯಾತ್ರೆ ಮಾಡುವ ನೈತಿಕತೆ ಇದೆಯಾ?
2ಯಡಿಯೂರಪ್ಪನವರ
ಆಪ್ತ ಉಮೇಶ್‌ ಮನೆಯಲ್ಲಿ ಸಿಕ್ಕಿದ 750 ಕೋಟಿ ರೂ. ಯಾರ ಬೇನಾಮಿ ಹಣ? ಉತ್ತರಿಸುವ ತಾಕತ್ತು ಬಿಜೆಪಿಗೆ ಇದೆಯೇ?
3ಮಿಸ್ಟರ್‌ ವಿಜಯೇಂದ್ರ, ನಿಮ್ಮ ತಂದೆ ಏನು ತಪ್ಪು ಮಾಡಿದ್ದರು? ನಿಮ್ಮ ತಂದೆ ಕಣ್ಣೀರು ಹಾಕುತ್ತ ರಾಜೀನಾಮೆ ಕೊಟ್ಟದ್ದು ಯಾಕೆ?
4ಬಿಜೆಪಿಯವರು ಮುಡಾದಲ್ಲಿ ಎಚ್‌.ಡಿ. ದೇವೇಗೌಡರ ಕುಟುಂಬದ ಭೂಕಬಳಿಕೆ ಎಂದು ಪತ್ರಿಕೆಗಳಿಗೆ ಜಾಹೀರಾತು ನೀಡಿ ದ್ದರು. ಈ ಬಗ್ಗೆ ಉತ್ತರ ನೀಡುವಿರಾ ಯಡಿಯೂರಪ್ಪ ಅವರೇ?

Advertisement

Udayavani is now on Telegram. Click here to join our channel and stay updated with the latest news.

Next