ಕೆಲ ದಿನಗಳ ಹಿಂದೆ ವಿಂಬಲ್ಡನ್ ಗೆದ್ದ 20ರ ಹರೆಯದ ಕಾರ್ಲೋಸ್ ಅಲ್ಕರಾಜ್ ಈಗ ಟೆನ್ನಿಸ್ ಜಗತ್ತಿನ ಕಣ್ಮಣಿ. ಯುವ ಹುರುಪಿನ ಆಟಗಾರ ಪುರುಷರ ಟೆನ್ನಿಸ್ ನಲ್ಲಿ ಭವಿಷ್ಯದ ಸ್ಟಾರ್ ಎಂದು ಗುರುತಿಸಿಕೊಳ್ಳುತ್ತಿದ್ದಾನೆ. ಅದಕ್ಕೂ ಹೆಚ್ಚು ಆತನ ಗೆಲುವು ಸುದ್ದಿಯಾಗಿದ್ದು ಆತ ಎದುರಿಸಿದ ಆಟಗಾರನ ಕಾರಣದಿಂದ. ಆತನೇ ಪ್ರತಿ ಟೆನ್ನಿಸ್ ಆಟಗಾರ ಕಾಣುವ ಕನಸನ್ನು ನನಸಾಗಿಸಿದ ಸರ್ಬಿಯಾದ ಬಲಾಢ್ಯ ಆಟಗಾರ ನೊವಾಕ್ ಜೊಕೊವಿಕ್.
ಕ್ಯಾಬಿನೆಟ್ ನಲ್ಲಿ 23 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು ಸೇರಿದಂತೆ 94 ಟ್ರೋಫಿಗಳು ಮತ್ತು ಬ್ಯಾಂಕ್ ನಲ್ಲಿ $171,254,424 ಬಹುಮಾನದ ಮೊತ್ತವನ್ನೇ ಪಡೆದಿರುವ ನೊವಾಕ್, ಓಪನ್ ಯುಗದಲ್ಲಿ ಟೆನಿಸ್ ಅಂಕಣದಲ್ಲಿ ಕಾಲಿಟ್ಟ ಅತ್ಯಂತ ಯಶಸ್ವಿ ಕ್ರೀಡಾಪಟುವಾಗಿ ಉಳಿದಿದ್ದಾರೆ. ಅವರ ದೊಡ್ಡ ಪ್ರತಿಸ್ಪರ್ಧಿಗಳಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಸೇರಿದಂತೆ ನೊವಾಕ್ ಎಲ್ಲರನ್ನೂ ಮೀರಿ ಬೆಳೆದಿದ್ದಾರೆ.
ದಾಖಲೆಯ 389 ವಾರಗಳ ಕಾಲ ಜೊಕೊವಿಕ್ ಅವರು ಎಟಿಪಿ ರ್ಯಾಂಕಿಂಗ್ ನಲ್ಲಿ ವಿಶ್ವದ ನಂಬರ್ 1 ಆಟಗಾರನಾಗಿ ಮೆರೆದಾಡಿದವರು. ಇದರಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್ 310 ವಾರಗಳ ಕಾಲ ಮೊದಲ ಸ್ಥಾನದಲ್ಲಿದ್ದರು. ಮತ್ತೊಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ ರಾಫೆಲ್ ನಡಾಲ್ ಅವರು ಅಗ್ರ ಶ್ರೇಯಾಂಕದ ಆಟಗಾರನಾಗಿ ಇದ್ದಿದ್ದು 209 ವಾರಗಳು ಮಾತ್ರ. ಅಲ್ಲದೆ ಫೆಡರರ್ ಮತ್ತು ರಾಫಾ ವಿರುದ್ದ ನೊವಾಕ್ ಮುಖಾಮುಖಿ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಫೆಡರರ್ ವಿರುದ್ಧ 50 ಪಂದ್ಯಗಳಲ್ಲಿ 27 ಬಾರಿ ಗೆದ್ದಿದ್ದರೆ, ನಡಾಲ್ ವಿರುದ್ಧ 59 ಪಂದ್ಯಗಳಲ್ಲಿ 30 ಸಲ ಗೆಲುವು ಕಂಡಿದ್ದಾರೆ.
ಫ್ರೆಂಚ್ ಓಪನ್ ನಲ್ಲಿ ಫೆಡರರ್ ರ ಬ್ಯಾಕ್ ಹ್ಯಾಂಡ್ ಅಥವಾ ಚಾಂಪಿಯನ್ ಶಿಪ್ ನಲ್ಲಿ ನಡಾಲ್ ರ ಟಾಪ್ ಸ್ಪಿನ್ ಮೇಲೆ ಹೆಚ್ಚಿನವರು ಬೆಟ್ ಕಟ್ಟುವುದಿಲ್ಲ. ಮತ್ತೊಂದೆಡೆ, ಜೊಕೊವಿಕ್ ಪ್ರತಿ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಲ್ಲಿ ಅಗ್ರ ಸ್ಪರ್ಧಿಯಾಗಿ ಪ್ರವೇಶಿಸುತ್ತಾರೆ. ನೋವಾಕ್ ರ ದಾಖಲೆಯು ಅವರ ಬಹುಮುಖತೆಯ ಪರಿಮಾಣವನ್ನು ಹೇಳುತ್ತದೆ. ಪ್ರತಿ ಮೇಜರ್ ಟ್ರೋಫಿಯನ್ನು ಕನಿಷ್ಠ ಮೂರು ಬಾರಿ ಗೆದ್ದಿರುವ ಏಕೈಕ ವ್ಯಕ್ತಿ ಈ ಸರ್ಬಿಯಾದ ಆಟಗಾರ.
ಇಷ್ಟೆಲ್ಲಾ ಇದ್ದರೂ ಸ್ವಿಜರ್ ಲ್ಯಾಂಡ್ ಆಟಗಾರ ರೋಜರ್ ಫೆಡರರ್ ಮತ್ತು ಸ್ಪೇನ್ ನ ಅಗ್ರಗಣ್ಯ ಆಟಗಾರ ರಫೆಲ್ ನಡಾಲ್ ಗೆ ಇರುವಂತೆ ಅಭಿಮಾನಿ ಬಳಗ ನೊವಾಕ್ ಜೋಕೊವಿಕ್ ಗೆ ಇಲ್ಲ. ಇದಕ್ಕೆ ಕಾರಣ ಹಲವು.
ನೊವಾಕ್ ಜೊಕೊವಿಕ್ ಟೆನ್ನಿಸ್ ಅಂಗಳಕ್ಕೆ ಕಾಲಿಟ್ಟಾಗ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು, ಫೆಡರರ್ ಮತ್ತು ನಡಾಲ್ ಬಿಟ್ಟರೆ ಟೆನ್ನಿಸ್ ಕೋರ್ಟ್ ನಲ್ಲಿ ಬೇರೆ ಯಾವ ಸೂಪರ್ ಸ್ಟಾರ್ ಇಲ್ಲವೆಂದು ತೀರ್ಮಾನಕ್ಕೆ ಬಂದಿದ್ದರು. 2008ರಲ್ಲಿ ಮೊದಲ ಬಾರಿ ಜೊಕೊವಿಕ್ ಆಸ್ಟ್ರೇಲಿಯಾ ಓಪನ್ ಗೆದ್ದರು, ಆದರೆ ಆ ವೇಳೆ ರೋಜರ್ ಫೆಡರರ್ 12 ಬಾರಿ ಮೆಲ್ಬರ್ನ್ ನಲ್ಲಿ ಕಪ್ ಗೆದ್ದು ಬೀಗಿದ್ದರು. ಬಳಿಕ ಕೆಲವು ವರ್ಷಗಳಲ್ಲಿ ನೊವಾಕ್ ಸ್ವಲ್ಪ ಹಿನ್ನಡೆ ಅನುಭವಿಸಿದ್ದರು, ಆ ಸಮಯದಲ್ಲಿ ನಡಾಲ್ ಒಂದಾದ ಮೇಲೆ ಒಂದು ಕಪ್ ಗೆದ್ದು ಸಾಗಿದ್ದರು.
ಆದರೆ 2011ರ ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ಜೋಕೋ ಟೆನ್ನಿಸ್ ವಿಶ್ವದಲ್ಲಿ ತನ್ನ ಪ್ರಾಮುಖ್ಯತೆ ಸಾರಿದರು. ಸತತ ಮೂರು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಗಳಲ್ಲಿ ಅವರು ನಡಾಲ್ ರನ್ನು ಸೋಲಿಸಿದರು. ಅಲ್ಲದೆ ಫೆಡರರ್ ಹಿಂದೆ ಬಿದ್ದ ಜೋಕೋ ಕೆಲವು ಸೆಮಿ ಫೈನಲ್ ಗಳಲ್ಲಿ ಸೋಲಿನ ರುಚಿ ತೋರಿಸಿದರು. 2014ರ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಫೆಡರರ್ ರನ್ನು ಸೋಲಿಸಿದ ಜೋಕೋ, ನಡಾಲ್- ಫೆಡರರ್ ಅಭಿಮಾನಿಗಳ ವಿರೋಧ ಕಟ್ಟಿಕೊಂಡರು.
ಇಷ್ಟೇ ಅಲ್ಲದೆ ನಡಾಲ್ ಮತ್ತು ಫೆಡರರ್ ಅಂಗಳದಲ್ಲಿ ಎಷ್ಟೇ ಸೆಣಸಾಡಿದರೂ ಹೊರಗೆ ಆತ್ಮೀಯರಾಗಿದ್ದರು. ಅವರ ಗೆಳೆತನದ ಕಾರಣದಿಂದ ಅಭಿಮಾನಿ ವರ್ಗವೂ ಹೆಚ್ಚಿತ್ತು. ಆದರೆ ಈ ಅಭಿಮಾನಿಗಳಿಗೆ ಜೋಕೋ ಮೂರನೇಯವನಾಗಿಯೇ ಕಂಡರು. ಇದು ಹಲವು ಬಾರಿ ಮೈದಾನದಲ್ಲಿ ಪ್ರದರ್ಶನವಾಗಿದೆ ಕೂಡಾ. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಂಡವನಲ್ಲ ಜೋಕೋ. ಎಲ್ಲೆಲ್ಲಾ ಪ್ರೇಕ್ಷಕರ ನಿಂದನೆ ಎದುರಾಗಿತ್ತೋ ಅಲ್ಲೆಲ್ಲಾ ಪ್ರತಿ ಪಾಯಿಂಟ್ ಗೆದ್ದಾಗಲೆಲ್ಲಾ ಜನರತ್ತ ನೋಡಿ ಫ್ಲೈಯಿಂಗ್ ಕಿಸ್ ಕೋಡುತ್ತಾನೆ ಸರ್ಬಿಯಾದ ಆಟಗಾರ.
ನೊವಾಕ್ ಜೊಕೊವಿಕ್ ಸೊಬಗು ಮತ್ತು ಶಕ್ತಿಯ ವಿಲಕ್ಷಣ ಮಿಶ್ರಣವಾಗಿದೆ. ಸರ್ಬ್ ಆಟಗಾರ ರೋಜರ್ ಫೆಡರರ್ ನಂತೆ ಅಂಗಳದಲ್ಲಿ ಸುಲಲಿತವಾಗಿಲ್ಲ ಅಥವಾ ರಾಫೆಲ್ ನಡಾಲ್ ನಂತೆ ಬಲವನ್ನು ನೆಚ್ಚಿಕೊಂಡಿಲ್ಲ. 36 ವರ್ಷದ ಆಟಗಾರನ ಆಟದ ಶೈಲಿಯು ಪ್ರೇಕ್ಷಕರನ್ನು ವಿಸ್ಮಯಗೊಳಿಸುವಷ್ಟು ಅನನ್ಯವಾಗಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಸರ್ಬಿಯಾದ ಜೋಕೋ ಬತ್ತಳಿಕೆಯಲ್ಲಿರುವ ಟ್ರೋಫಿಗಳನ್ನು ನೋಡಿದಾಗ ಮಾತ್ರ ಎಲ್ಲರೂ ಬೆರಗಾಗುತ್ತಾರೆ.
*ಕೀರ್ತನ್ ಶೆಟ್ಟಿ ಬೋಳ