ಬೆಂಗಳೂರು: ನೆರೆ ಪೀಡಿತ ಪ್ರದೇಶದಲ್ಲಿ ಸಿದ್ದರಾಮಯ್ಯ ಬೋಟ್ ಪ್ರಯಾಣದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ಮಹದೇವಪುರಕ್ಕೆ ಹೋಗಿದ್ದೆ, ಅಲ್ಲಿ ಬೋಟ್ ನಲ್ಲೇ ತಿರುಗಾಡಬೇಕು ಎಂಬ ಹೇಳಿಕೆ ಚರ್ಚೆಗೆ ಕಾರಣವಾಯಿತು.
ಸಿದ್ದರಾಮಯ್ಯ ಈ ಹೇಳಿಕೆ ಬಳಸಿ ಕಾಲೆಳೆದ ಶಾಸಕ ಅರವಿಂದ ಲಿಂಬಾವಳಿ, ರಸ್ತೆ ಇತ್ತು. ಆದರೆ ನೀವು ಏಕೆ ಬೋಟ್ ನಲ್ಲಿ ಹೋಗಿದ್ದಿರಿ? ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಬೇರೆ ರಸ್ತೆ ಇತ್ತಾ ಎಂದು ಮರು ಪ್ರಶ್ನೆ ಹಾಕಿದ ಸಿದ್ದರಾಮಯ್ಯ, ನಾನು ಬರುವುದು ಗೊತ್ತಿದ್ದು ನೀವು ಬಂದಿದ್ದರೆ ಬೇರೆ ರಸ್ತೆಯಲ್ಲಿ ಹೋಗಬಹುದಿತ್ತು ಎಂದು ತಿರುಗೇಟು ನೀಡಿದರು.
ನೀವು ಬರುತ್ತೀರಿ ಎಂದು ಗೊತ್ತಿದ್ದರೆ ನಾವು ಸ್ವಾಗತ ಮಾಡುತ್ತಿದ್ದೆವು. ಆದರೆ ನಿಮ್ಮನ್ನು ಹಿಂದಿನಿಂದ ಕರೆದುಕೊಂಡು ಹೋಗಿದ್ದಾರೆ. ಮಿಸ್ ಗೈಡ್ ಮಾಡುವವರು ಬಹಳ ಜನ ಇದ್ದಾರೆ ನಿಮ್ಮ ಸುತ್ತ ಎಂದು ಲಿಂಬಾವಳಿ ಕಾಲೆಳೆದರು.
ಈ ವೇಳೆ ಸಿದ್ದರಾಮಯ್ಯ ಪರವಾಗಿ ರಾಮಲಿಂಗ ರೆಡ್ಡಿ ಮಾತನಾಡಿ, ಸಿಎಂ ಎಲ್ಲಿ ಹೋಗಿದ್ದರು ಅದೇ ರಸ್ತೆಯಲ್ಲಿ ನಾವು ಹೋಗಿದ್ದೆವು ಎಂದರು.
ಇದನ್ನೂ ಓದಿ:ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಲು ನಿರಾಕರಣೆ: ಯುವಕರಿಗೆ ಕೈಕಾಲು ಕಟ್ಟಿ ಥಳಿತ
ಈ ವೇಳೆ ಸಿಎಂ ಪ್ರತಿಕ್ರಿಯೆ ನೀಡಿ, ಒಂದೂವರೆ ಫೀಟ್ ನೀರಿನಲ್ಲಿ ನಮ್ಮ ನಾಯಕರನ್ನು ಬೋಟ್ ನಲ್ಲಿ ಕರೆದುಕೊಂಡು ಹೋದರಲ್ಲ ಪುಣ್ಮಾತ್ಮರು ಯಾರಪ್ಪಾ? ಎಂದು ಕಾಲೆಳೆದರು.