Advertisement

ನಮಗೇಕೆ ಮೊದಲು ತಿಳಿಸಿಲ್ಲ?

07:30 AM Mar 21, 2018 | |

ಹೊಸದಿಲ್ಲಿ: ಇರಾಕ್‌ನಲ್ಲಿ 39 ಭಾರತೀಯರು ಸಾವನ್ನಪ್ಪಿದ್ದಾರೆ ಎಂಬುದನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಘೋಷಿಸುತ್ತಿದ್ದಂತೆಯೇ ಸಂತ್ರಸ್ತ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು. ತಮ್ಮವರ ಸಾವಿನ ಬಗ್ಗೆ ತಮಗೆ ಮೊದಲು ತಿಳಿಸದೇ ಟಿವಿಯಲ್ಲಿ ನೋಡುವಂತಾದದ್ದರ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಆರೋಪವನ್ನು ತಳ್ಳಿಹಾಕಿರುವ ಸುಷ್ಮಾ ಸ್ವರಾಜ್‌ ಮೃತರ ಬಗ್ಗೆ ಕುಟುಂಬ ಹಾಗೂ ಇತರರಿಗೆ ಮಾಹಿತಿ ನೀಡುವುದಕ್ಕೂ ಮೊದಲು ಸಂಸತ್ತಿಗೆ ತಿಳಿಸುವುದು ನನ್ನ ಕರ್ತವ್ಯವಾಗಿತ್ತು. ಈ ಹಿಂದೆಯೂ ಅವರು ಬದುಕಿದ್ದಾರೆ ಎಂಬುದಕ್ಕಾಗಲೀ ಅಥವಾ ಸಾವನ್ನಪ್ಪಿದ್ದಾರೆ ಎಂಬುದಕ್ಕಾಗಲೀ ನಮ್ಮ ಬಳಿ ಸಾಕ್ಷ್ಯವಿಲ್ಲ ಎಂದು ಹೇಳಿದ್ದೇವೆ. ಕುಟುಂಬದವರ ಆಕ್ರೋಶ ನನಗೆ ಅರ್ಥವಾಗುತ್ತದೆ ಎಂದು ಸುಷ್ಮಾ ಸ್ವರಾಜ್‌ ಹೇಳಿದ್ದಾರೆ. ಆದರೆ, ವಿದೇಶಾಂಗ ಸಚಿವಾಲಯ ನಮಗೆ ಈ ಬಗ್ಗೆ ಮಾಹಿತಿ ನೀಡಲೇ ಇಲ್ಲ. ಇದನ್ನು ನಾನು ನಂಬುವುದಿಲ್ಲ ಎಂದು ಮೃತ ಮಂಜಿಂದರ್‌ ಸಿಂಗ್‌ನ ಸೋದರಿ ಗುರ್ಪಿಂದರ್‌ ಕೌರ್‌ ಹೇಳಿದ್ದಾರೆ.

ಔತಣ ಕೂಟ ರದ್ದು: ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕರೆಯಲಾಗಿದ್ದ ರಾಜ್ಯ ಸಭೆ ಸದಸ್ಯರ ಔತಣ ಕೂಟವನ್ನು ಸಭಾಪತಿ ವೆಂಕಯ್ಯ ನಾಯ್ಡು ರದ್ದು ಗೊಳಿಸಿದ್ದಾರೆ. 

ಮಾಹಿತಿ ಪಡೆಯಲು ಕುಟುಂಬದ ಸಂಕಷ್ಟ: ಮೃತರ ಕುಟುಂಬದವರು ಕಳೆದ ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಲ್ಲಿಗೆ ಮಾಹಿತಿಗಾಗಿ ಅಲೆದಾಡಿದ ಕಥೆಗಳನ್ನು ನೆನಪಿಸಿಕೊಂಡಿದ್ದಾರೆ. ಅಮೃತಸರ ಮತ್ತು ತರ್ನ್ ತರನ್‌ ಜಿಲ್ಲೆಯ ಎಂಟು ಜನರ ಕುಟುಂಬದವರು ಮಾಹಿತಿಗಾಗಿ ವಿಪರೀತ ಅಲೆದಾಡಿದ್ದರು. ಇಷ್ಟು ದಿನವೂ ಕುಟುಂಬ ಸದಸ್ಯರು ಬದುಕಿದ್ದಾರೆ ಎಂಬ ಭರವಸೆಯಲ್ಲೇ ಇದ್ದವರಿಗೆ ಈಗ ಹಠಾತ್ತನೆ ಅವರ ಶವ ಸಿಕ್ಕಿರುವ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ.

330 ಪಾಕಿಸ್ಥಾನೀಯರ ಗಡಿಪಾರು: ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ 330 ಪಾಕಿಸ್ಥಾನೀಯರು, 1770 ಬಾಂಗ್ಲಾದೇಶೀಯರನ್ನು ಗಡೀಪಾರು ಮಾಡಲಾಗಿದೆ ಎಂದು ಲೋಕಸಭೆಗೆ ಗೃಹ ರಾಜ್ಯ ಖಾತೆ ಸಚಿವ ಕಿರಣ್‌ ರಿಜಿಜು ಮಾಹಿತಿ ನೀಡಿದ್ದಾರೆ.

Advertisement

ಅವಿಶ್ವಾಸ ಗೊತ್ತುವಳಿ ವಿಳಂಬ 
ಇರಾಕ್‌ನಲ್ಲಿ ಮೃತರ ಬಗ್ಗೆ ಸುಷ್ಮಾ ಸ್ವರಾಜ್‌ ಲೋಕಸಭೆಗೆ ತಿಳಿಸಿದರೂ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸಂಸದರು ಗಲಭೆ ನಿಲ್ಲಿಸಲಿಲ್ಲ. ಮೊದಲು ಲೋಕಸಭೆಯನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಆದರೆ ಪುನಃ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರಿದಿದ್ದರಿಂದ ಬುಧವಾರಕ್ಕೆ ಕಲಾಪ ಮುಂದೂಡಲಾಯಿತು.

ಸತತ 12ನೇ ದಿನವೂ ಕಲಾಪ ಗದ್ದಲಕ್ಕೆ ಬಲಿಯಾಗಿದ್ದರಿಂದಾಗಿ, ತೆಲುಗುದೇಶಂ ಪಕ್ಷ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಮಂಡಿಸಲು ನಿರ್ಧರಿಸಿರುವ ಅವಿಶ್ವಾಸ ಗೊತ್ತುವಳಿ ನಿಲುವಳಿ ಕೈಗೆತ್ತಿಕೊಳ್ಳಲು ಅವಕಾಶವಾಗಲಿಲ್ಲ. ಗದ್ದಲದ ಸ್ಥಿತಿಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗದು ಎಂದು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.

ಬ್ಯಾಂಕ್‌ಗಳಲ್ಲಿ ನಡೆದ ಅವ್ಯವಹಾರ ನಿರ್ವಹಣೆ ವಿಷಯದಲ್ಲಿ ಎಲ್ಲ ಪಕ್ಷಗಳನ್ನೂ ಕೇಂದ್ರ ಸರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ಕಾಂಗ್ರೆಸ್‌ ಮುಖಂಡ ಗುಲಾಮ್‌ ನಬಿ ಆಜಾದ್‌ ಆಕ್ಷೇಪಿಸುತ್ತಿದ್ದಂತೆಯೇ ಡಿಎಂಕೆ, ಎಐಎಡಿಎಂಕೆ ಮತ್ತು ಇತರ ಪಕ್ಷಗಳ ಸಂಸದರು ಕಾವೇರಿ ನದಿ ನೀರು ಹಂಚಿಕೆಗೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಸ್ಪೀಕರ್‌ ಎದುರು ಪ್ರತಿಭಟನೆ ನಡೆಸಿದರು.

ತಪ್ಪಿಸಿಕೊಂಡು ಬಂದವನ ಕಥೆ 
ಈಗ ಮೃತರೆಂದು ಘೋಷಿಸಲ್ಪಟ್ಟವರ ಜತೆಗಿದ್ದ, ತಪ್ಪಿಸಿಕೊಂಡು ಬಂದಿದ್ದ ಹರ್ಜಿತ್‌ ಮಸೀಹ್‌ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.  ಇತರ ಎಲ್ಲರನ್ನು ಹತ್ಯೆಗೈಯಲಾಗಿದೆ ಎಂದು ಹೇಳುತ್ತಲೇ ಬಂದಿದ್ದ ಹರ್ಜಿತ್‌, ನಾನು ನಿಜ ಹೇಳಿದ್ದೆ. ಆದರೆ ಯಾರೂ ನಂಬಲಿಲ್ಲ ಎಂದಿದ್ದಾರೆ.

ಮೊಸುಲ್‌ನಲ್ಲಿ ಸಾವಿಗೀಡಾದವರ ಬಗ್ಗೆ ಪ್ರತಿ ಭಾರತೀಯನ ಮನ ಮಿಡಿ ಯುತ್ತಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. 
ನರೇಂದ್ರ ಮೋದಿ, ಪ್ರಧಾನಿ

ಕಳೆದ ವರ್ಷ, ಅಪಹೃತರೆಲ್ಲರೂ ಸುರಕ್ಷಿತ ವಾಗಿದ್ದಾರೆ ಎಂದಿದ್ದ ಕೇಂದ್ರ ಇದೀಗ, ಅವರೆಲ್ಲರೂ ಮೃತರಾಗಿದ್ದಾರೆ ಎಂದಿರುವುದು ದುರದೃಷ್ಟಕರ. 
ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next