Advertisement
ಯಾರಿಗೋಸ್ಕರವೋ ಕಷ್ಟಪಟ್ಟು ದುಡಿದು, ಅವರಿಗೆ ಲಾಭ ಮಾಡಿ ಕೊಡುವ ಬದಲು ನಮಗೋಸ್ಕರ ನಾವು ಕೆಲಸ ಮಾಡಿ ಲಾಭ ಮಾಡಿಕೊಳ್ಳುವುದು ಜಾಣತನವಲ್ವಾ?.. ಬೆಂಗಳೂರಿನಲ್ಲಿ ದುಡಿಯುವಾಗ, ನನಗೆ ನಾನೇ ಪದೇ ಪದೆ ಕೇಳಿಕೊಳ್ಳುತ್ತಿದ್ದ ಪ್ರಶ್ನೆ ಇದು. ಹೌದು ಅಂತ ಅರಿವಾಗೋಕೆ ಹನ್ನೊಂದು ವರ್ಷವೇ ಬೇಕಾಯ್ತು. ಅಷ್ಟೊತ್ತಿಗೆ, ಟೆನ್ಸ್ನ್, ಟಾರ್ಗೆಟ್, ಪ್ರಶರ್‌ಗಳನ್ನು ಮೈಮೇಲೆಳೆದುಕೊಂಡು ನಾಲ್ಕೈದು ಕಂಪನಿಗಳಲ್ಲಿ ದುಡಿದಿದ್ದೆ. ಎಲ್‌ಎಲ್‌ಬಿ, ಎಂಎಸ್‌ಡಬ್ಲ್ಯು ಓದಿದ್ದೇನೆ ಅಂತ ಇಷ್ಟು ವರ್ಷ ದುಡಿದದ್ದಾಗಿದೆ. ಇನ್ನೂ ಹೀಗೆ ಬದುಕುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಊರಿಗೆ ಹೊರಟುಬಿಟ್ಟೆ.
ನಾನು ಕೃಷಿ ಕುಟುಂಬದಿಂದ ಬಂದವನು. ತಲೆಮಾರುಗಳಿಂದ ಕಾಫಿ, ಅಡಕೆ, ಕಾಳುಮೆಣಸು ಬೆಳೆಯುತ್ತಿದ್ದೇವೆ. ಹಾಗಾಗಿ, ಕೃಷಿ ಕಷ್ಟ ಅಂತಾಗಲಿ, ಹಳ್ಳಿ ಜೀವನಕ್ಕೆ ಹೊಂದಿಕೊಳ್ಳುವುದಾಗಲಿ ಕಷ್ಟವಾಗಲಿಲ್ಲ. ನಿಜ ಹೇಳಬೇಕೆಂದರೆ, ಬೆಂಗಳೂರಿಗೆ ಹೊಂದಿಕೊಳ್ಳುವುದೇ ನಮ್ಮಂಥವರಿಗೆ ಕಷ್ಟ. ಕಂಪನಿ ಒಂದು ಕಡೆ, ಮನೆ ಒಂದು ಕಡೆ. ಮಧ್ಯದಲ್ಲಿ ಟ್ರಾಫಿಕ್ ಎಂಬ ಸಾಗರ. ಅದನ್ನು ಈಜಿಕೊಂಡು ಮನೆ ಸೇರುವಾಗ ರಾತ್ರಿಯಾಗಿರುತ್ತಿತ್ತು. ಮಾರನೇದಿನ ಮತ್ತದೇ ಓಟ. ಹೀಗೆ ವಾರವಿಡೀ ದುಡಿಯುತ್ತಿದ್ದುದು ತಿಂಗಳ ಕೊನೆಯಲ್ಲಿ ಸಿಗೋ ಸಂಬಳಕ್ಕಾಗಿ ಮಾತ್ರ! ಸಂಬಳಕ್ಕೆ ಅಡಿಕ್ಟ್ ಆಗಿರಲಿಲ್ಲ
ಕಾರ್ಪೋರೇಟ್ ನೌಕರಿಯಲ್ಲಿರುವವರನ್ನು ಕೇಳಿ ನೋಡಿ, ಅಯ್ಯೋ ಈ ಕೆಲಸ ಯಾರಿಗೆ ಬೇಕು. ಬಿಟ್ಟುಬಿಡೋಣ ಅನ್ನಿಸುತ್ತೆ ಅಂತಾರೆ. ಆದರೆ, ಯಾರೂ ಆ ಸಾಹಸಕ್ಕೆ ಕೈ ಹಾಕೋದಿಲ್ಲ. ಯಾಕಂದ್ರೆ ಅವರೆಲ್ಲ, ಅಲ್ಲಿ ಸಿಗುವ ಸಂಬಳಕ್ಕೆ ಅಡಿಕ್ಟ್ ಆಗಿರುತ್ತಾರೆ. ಅದಕ್ಕೆ ತಕ್ಕಂತೆ ಖರ್ಚು ಮಾಡುವ ಮನಸ್ಥಿತಿಗೆ ಒಗ್ಗಿಕೊಂಡಿರುತ್ತಾರೆ. ಆದರೆ, ನಾನು ಸಂಬಳಕ್ಕೆ ಅಡಿಕ್ಟ್ ಆದವನಲ್ಲ. ಕೃಷಿಯ ಬಗ್ಗೆ ಮೊದಲಿಂದಲೂ ಒಲವಿತ್ತು. ಧೃಡ ನಿರ್ಧಾರ ಮಾಡಿದ್ದು 2016ರಲ್ಲಿ. ಆಗ ಹೆಂಡತಿಯಾಗಲಿ, ಅಪ್ಪ-ಅಮ್ಮನಾಗಲಿ ತಡೆಯಲಿಲ್ಲ. ಏನೇ ಮಾಡಿದರೂ, ಕೃಷಿ ಬಿಡಬೇಡ ಅಂತ ಅಪ್ಪ ಮೊದಲಿಂದಲೂ ಹೇಳುತ್ತಿದ್ದರು.
Related Articles
ಕೃಷಿಯಲ್ಲಿ ಲಾಭ ಮಾಡೋಕೆ ಸಾಧ್ಯವಿಲ್ಲ ಅನ್ನೋದು ಎಲ್ಲರೂ ನಂಬಿಕೊಂಡಿರುವ ಸುಳ್ಳು. ಆದಾಯ ತಕ್ಷಣ ಕೈಗೆ ಬರುವುದಿಲ್ಲ ಅನ್ನೋದನ್ನು ಬಿಟ್ಟರೆ, ಇಲ್ಲಿಯೂ ಖಂಡಿತಾ ಲಾಭ ಮಾಡಬಹುದು. ಹೊಸ ಹೊಸ ತಂತ್ರಜ್ಞಾನಗಳನ್ನು ಸರಿಯಾಗಿ ಬಳಸಿಕೊಂಡರೆ ಕೃಷಿ ಕೆಲಸ ಕಷ್ಟವೂ ಅಲ್ಲ. ಕಾರ್ಪೋರೇಟ್‌ನಿಂದ ಕೃಷಿಗೆ ಬಂದರೆ ಮತ್ತೂಂದು ಲಾಭವಿದೆ. ಅದೇನಂದ್ರೆ, ಸಮಸ್ಯೆಯೊಂದನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿ ಪರಿಹಾರ ಕಂಡುಕೊಳ್ಳುವುದನ್ನು ಕಾರ್ಪೋರೇಟ್ ಕೆಲಸ ಕಲಿಸಿಕೊಡುತ್ತದೆ. ಈಗ ನಾನು, ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಕಾರ್ಪೋರೇಟ್ ದೃಷ್ಟಿಯಿಂದ ನೋಡಿ, ಪರಿಹಾರ ಕಂಡು ಹಿಡಿಯುತ್ತೇನೆ.
Advertisement
ಒಂದೇ ವ್ಯತ್ಯಾಸಮೊದಲೆಲ್ಲ, ಹಳ್ಳಿಗೂ ನಗರಕ್ಕೂ ದೊಡ್ಡ ಅಂತರವಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಹಳ್ಳಿಯಲ್ಲಿ ಮಾಲ್, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್‌ಗಳಿಲ್ಲ ಅನ್ನೋದನ್ನು ಬಿಟ್ಟರೆ, ಬೇರೆ ಯಾವ ದೊಡ್ಡ ವ್ಯತ್ಯಾಸವೂ ಇಲ್ಲ. ಮೊಬೈಲ್, ಇಂಟರ್‌ನೆಟ್, ಆನ್‌ಲೈನ್ ಶಾಪಿಂಗ್ ಹೀಗೆ ಹಳ್ಳಿಯಲ್ಲೇ ಕುಳಿತು ಎಲ್ಲವನ್ನೂ ದಕ್ಕಿಸಿಕೊಳ್ಳಬಹುದು. ಬೆಂಗಳೂರಿಗಿಂತ ಜಾಸ್ತಿ ಶಾಂತಿ, ನೆಮ್ಮದಿಯೂ ಇಲ್ಲಿದೆ. ಆದರೂ, ಬೆಂಗಳೂರೇ ಬೇಕು ಎಂಬ ಹುಚ್ಚು ವ್ಯಾಮೋಹ ಯಾಕೆ? ಅಲ್ಲಿದ್ದಾಗ ಟೈಮೇ ಇರುತ್ತಿರಲಿಲ್ಲ…
ನಾನು ಬೆಂಗಳೂರಿನಲ್ಲಿದ್ದಾಗ ಎಷ್ಟು ಬ್ಯುಸಿಯಾಗಿದ್ದೆ ಅಂದರೆ, ಮಾಲ್‌ಗೆ ಹೋಗಲು, ಮೂವಿ ನೋಡಲು ಸಮಯವೇ ಇರಲಿಲ್ಲ. ವಾರ ಪೂರ್ತಿ ಕೆಲಸ ಮಾಡಿ ಸುಸ್ತಾಗಿರುತ್ತಿತ್ತು. ವೀಕೆಂಡ್‌ನಲ್ಲಿ ಸುತ್ತಾಡೋಕೆ ಶಕ್ತಿಯೇ ಉಳಿದಿರುತ್ತಿರಲಿಲ್ಲ. ಆದರೆ, ಈಗ ಬೇಕೆನಿಸಿದಾಗ ಬೆಂಗಳೂರಿಗೆ ಹೋಗಿ ಬರುತ್ತೇನೆ. ಅಲ್ಲಿ ಸ್ವಂತ ಮನೆ ಇದೆ. ಮಕ್ಕಳಿಬ್ಬರೂ ಅಲ್ಲಿಯೇ ಓದುತ್ತಿದ್ದಾರೆ. ಎರಡು ದಿನ ಅಲ್ಲಿದ್ದು ಮತ್ತೆ ವಾಪಸಾಗುತ್ತೇನೆ. ರಜೆ ಇಲ್ಲ, ಟಾರ್ಗೆಟ್ ಅಚೀವ್ ಆಗ್ಲಿಲ್ಲ ಅಂತೆಲ್ಲಾ ಒತ್ತಡವೇ ಇಲ್ಲ. ನಮ್ಮಲ್ಲಿ ಅನೇಕರಿಗೆ ಸಿಟಿಯ ವ್ಯಾಮೋಹ ಹೆಚ್ಚು. ಯಾರಧ್ದೋ ಮಗ ಬೆಂಗಳೂರಿನಲ್ಲಿದ್ದಾನೆ, ವಿದೇಶದಲ್ಲಿದ್ದಾನೆ ಅಂತ, ತಮ್ಮ ಮಕ್ಕಳೂ ಹಾಗೇ ಆಗಲಿ ಎಂದು ಬಯಸುತ್ತಾರೆ. ನಿನಗೆ ಕೃಷಿ ಬೇಡ, ಉದ್ಯೋಗ ಮಾಡು ಅಂತ ಚಿಕ್ಕಂದಿನಿಂದ ತಲೆಗೆ ತುಂಬುತ್ತಾರೆ. ಮಕ್ಕಳೂ, ಅಪ್ಪ- ಅಮ್ಮನ ಆಸೆಯಂತೆ ಸಿಟಿ ಸೇರುತ್ತಾರೆ. ಯಾವುದೋ ಕಂಪನಿಯಲ್ಲಿ ವರ್ಷಾನುಗಟ್ಟಲೆ ದುಡಿದ ಮೇಲೆ, ತಾನೊಬ್ಬ ಕಾರ್ಪೋರೇಟ್ ಕೂಲಿ ಅಂತ ಅವರಿಗೆ ಅರ್ಥವಾಗಿರುತ್ತೆ. ಏನು ಮಾಡೋದು? ವಾಪಸ್ ಬರೋ ಹಾಗಿಲ್ಲ, ಅಲ್ಲಿ ಉಳಿದರೆ ನೆಮ್ಮದಿ ಇಲ್ಲ.
– ಎಚ್.ಎಸ್. ರಾಘವ ನಿರೂಪಣೆ: ಪ್ರಿಯಾಂಕ ಎನ್.