ಮೊಳಕಾಲ್ಮೂರು: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಲವಾರು ದಶಕಗಳಿಂದಲೂ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಹಕ್ಕು ಸಮಿತಿ ಸಾಗುವಳಿ ಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಬುಧವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಫರ್ ಷರೀಫ್ ಮಾತನಾಡಿ, ತಾಲೂಕಿನ ರಾಂಪುರ ಗ್ರಾಮದ ಸ.ನಂ 47, ಬಸಾಪುರ ಸ.ನಂ 14, ದಡಗೂರು ಸ.ನಂ 23 ಹಾಗೂ ಇನ್ನಿತರ ಗ್ರಾಮಗಳಲ್ಲಿನ ಜಮೀನುಗಳಲ್ಲಿ 150ಕ್ಕೂ ಹೆಚ್ಚಿನ ರೈತರು ಸುಮಾರು 50 ವರ್ಷಗಳ ಕಾಲ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಾಗುವಳಿದಾರರಿಗೆ ಸಾಗುವಳಿ ಹಕ್ಕು ಪತ್ರ ನೀಡದೆ ವಿಳಂಬ ಮಾಡುತ್ತಿರುವುದು ಬಡ ಕುಟುಂಬಗಳ ವಿರೋ ಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಸಾಗುವಳಿ ಹಕ್ಕು ಪತ್ರ ನೀಡಲು ಕೋರಿ 2005 ರಿಂದ 2016 ರವರೆಗೆ ಅರ್ಜಿಗಳನ್ನು ಸಲ್ಲಿಸಿ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಕಾರ್ಯ ಮುಗಿಸಿ ವರದಿ ಸಲ್ಲಿಸಿವೆ. ಸಂಬಂಧಪಟ್ಟ ಆಯಾ ಗ್ರಾಪಂ ಮಟ್ಟದಿಂದ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಮನವಿ ಸಲ್ಲಿಸಲು ರೈತರಿಗೆ ಸೂಚಿಸಲಾಗಿತ್ತು. ಗ್ರಾಪಂ ಹಿಂಬರಹಗಳ ಆಧಾರದ ಮೇರೆಗೆ ಅರ್ಹ ರೈತರು ಮೇಲ್ಮನವಿಯನ್ನು ಸಲ್ಲಿಸಿದ್ದರು.
ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಪರಿಶಿಷ್ಟ ವರ್ಗಗಳ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಅರ್ಜಿಗಳನ್ನು ಮರುಪರಿಶೀಲಿಸಲು ಸೂಚಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಸಮಸ್ಯೆಯನ್ನು ಪರಿಶೀಲಿಸಿ ರೈತರಿಗೆ ಸಾಗುವಳಿ ಹಕ್ಕುಪತ್ರವನ್ನು ನೀಡಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ್ ಎಂ. ಬಸವರಾಜ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಟಿ.ಗುರು ಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ ಮುಖಂಡರಾದ ಕಾಮಯ್ಯ, ಬೋರಯ್ಯ, ಅಂಜಿನಿ, ಮಹಾದೇವಿ, ಪದ್ಮಾವತಿ, ಕರಿಮುತ್ತಯ್ಯ, ಮಲ್ಲಯ್ಯ, ಯಲ್ಲಪ್ಪ, ರುದ್ರೇಸ್ವಾಮಿ, ಬಸಣ್ಣ, ಮೂರ್ತಿ, ವೆಂಕಟೇಶ್, ಹೂಲೆಪ್ಪ ಇದ್ದರು.