ಬೇನಾಮಿ ಆಸ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ಗುಡುಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಹಾಗೆಂದು ಬೇನಾಮಿ ಆಸ್ತಿ ವಿರುದ್ಧ ಅವರು ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಎಲ್ಲ ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ. ಇದು ಈ ದೇಶದ ಆಸ್ತಿ, ಬಡವರಿಗೆ ಸೇರಿದ ಆಸ್ತಿ ಎಂದು ಹೇಳಿದ್ದರು. ಆದರೆ ಮಾತು ಇನ್ನೂ ಕೃತಿಗಿಳಿದಿಲ್ಲ. ಇದೀಗ ಪ್ರಧಾನಿ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ ಚುನಾವಣೆಯ ಹಿನ್ನೆಲೆಯಲ್ಲಿ ಬೇನಾಮಿ ಆಸ್ತಿ ವಿರುದ್ಧ ಕ್ರಮ ಕೈಗೊಳ್ಳುವ ಮಾತನ್ನಾಡಿದ್ದರೂ ಕಪ್ಪುಹಣವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಇದು ಆಗಲೇ ಬೇಕಾದ ಕೆಲಸ. ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿಯೇ ಕಳೆದ ವರ್ಷ ಹಳೇ ಕಾಯಿದೆಗೆ ತಿದ್ದುಪಡಿ ಹೊಸ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಕಾಯಿದೆ ಜಾರಿಯಾಗಿ ಒಂದು ವರ್ಷವಾಗಿದ್ದರೂ ಇನ್ನೂ ಬೇನಾಮಿ ಆಸ್ತಿ ವಿರುದ್ಧ ಕ್ರಮ ಕೈಗೊಂಡಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ. ಬೇನಾಮಿ ವಿರುದ್ಧ ಕ್ರಮ ಕೈಗೊಳ್ಳಲು ಇನ್ನೂ ಏಕೆ ಸರಕಾರ ಮೀನಾಮೇಷ ಎಣಿಸುತ್ತಿದೆ ಎನ್ನುವುದು ಅರ್ಥವಾಗದ ವಿಚಾರ. ಮೋದಿ ಸರಕಾರವೂ ಚುನಾವಣೆ ಸಂದರ್ಭದಲ್ಲಿ ಬೇನಾಮಿ ಗುಮ್ಮನನ್ನು ಛೂ ಬಿಟ್ಟು ಮತ್ತೆ ಮರೆತು ಬಿಡುವ ತಂತ್ರವನ್ನು ಅನುಸರಿಸುವ ಅಗತ್ಯವಿದೆಯೇ? ಸ್ಪಷ್ಟ ಬಹುಮತವಿರುವ ಸರಕಾರಕ್ಕೆ ಬೇನಾಮಿ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಬೇರೆ ಯಾರಿಂದ ಸಾಧ್ಯ? ಚುನಾವಣೆ ಪ್ರಚಾರ ಸಭೆಯಲ್ಲಿ ಮೋದಿ ಕಾಂಗ್ರೆಸ್‌ನ್ನು ಗುರಿ ಮಾಡಿಕೊಂಡು ಬೇನಾಮಿ ಅಸ್ತ್ರ ಪ್ರಯೋಗ ಮಾಡುತ್ತೇವೆ ಎಂದು ಹೇಳಿದ್ದರೂ ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ಪಕ್ಷಗಳಲ್ಲೂ ಬೇನಾಮಿ ಆಸ್ತಿ ಹೊಂದಿರುವ ಜನರಿದ್ದಾರೆ ಎನ್ನುವುದು ವಾಸ್ತವ ವಿಚಾರ. ಬಹುತೇಕ ಬೇನಾಮಿ ಸೊತ್ತುಗಳ ಒಡೆಯರು ರಾಜಕಾರಣಿಗಳು.
ಕಪ್ಪುಹಣವನ್ನು ಬಿಳಿ ಮಾಡುವ ತಂತ್ರವೇ ಬೇನಾಮಿ ಸೊತ್ತು ಖರೀದಿ. ಹೀಗಾಗಿ ಕಪ್ಪುಹಣದ ವಿರುದ್ಧ ಪ್ರಾರಂಭವಾಗಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಾದರೆ ಬೇನಾಮಿ ಸೊತ್ತುಗಳು ಬಯಲಾಗಲೇ ಬೇಕು. ದೇಶದಲ್ಲಿ ಪ್ರಸ್ತುತ ಎಷ್ಟು ಬೇನಾಮಿ ಸೊತ್ತು ಇದೆ ಎನ್ನುವ ಅಂದಾಜು ಯಾರಿಗೂ ಇಲ್ಲ. ಆದರೆ ಇದು ಹಲವು ಲಕ್ಷಕೋಟಿಗಳಲ್ಲಿ ಇದೆ ಎನ್ನುವುದಂತೂ ಸತ್ಯ. ಬಹುತೇಕ ಬೇನಾಮಿ ಸೊತ್ತು ಇರುವುದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ. ಹೆಚ್ಚಿನವರು ಅಕ್ರಮ ಗಳಿಕೆಯನ್ನು ಹೂಡಿಕೆ ಮಾಡುವುದು ಭೂಮಿ, ಕಟ್ಟಡ, ಮನೆ ಇತ್ಯಾದಿ ಸ್ಥಿರಾಸ್ತಿಗಳಲ್ಲಿ. ಚಿನ್ನ, ಶೇರುಗಳು ಮತ್ತು ಬ್ಯಾಂಕ್ ಠೇವಣಿ ರೂಪದಲ್ಲೂ ಬೇನಾಮಿ ಸೊತ್ತುಗಳಿವೆ. ಇನ್ನೊಬ್ಬರ ಹೆಸರಿನಲ್ಲಿ ಸೊತ್ತು ಖರೀದಿಸುವುದು ಅಥವ ಹೂಡಿಕೆ ಮಾಡುವುದೇ ಬೇನಾಮಿ ಆಸ್ತಿ. ಬಹುತೇಕ ಸಂದರ್ಭದಲ್ಲಿ ದೂರದ ಬಂಧುಗಳು, ಸ್ನೇಹಿತರು ಇಲ್ಲವೇ ಚಾಲಕ, ಅಡುಗೆಯವ , ಮನೆಯ ನೌಕರ ಈ ಮುಂತಾದ ಮೂರನೇ ವ್ಯಕ್ತಿಗಳ ಹೆಸರಲ್ಲಿ ಆಸ್ತಿ ಖರೀದಿ ಮಾಡುತ್ತಾರೆ.
ಹೊಸ ಕಾಯಿದೆಯಲ್ಲಿ ಬೇನಾಮಿ ಸೊತ್ತು ಹೊಂದಿದವರ ಕ್ರಮ ಕೈಗೊಳ್ಳಲು ವಿರುದ್ಧ ಹಲವು ಕಠಿಣ ನಿಯಮಗಳನ್ನು ರಚಿಸಲಾಗಿದೆ. ಬೇನಾಮಿ ಸೊತ್ತು ಹೊಂದಿದವರಿಗೆ 7 ವರ್ಷದ ತನಕ ಕಠಿಣ ಕಾರಾಗೃಹ ಶಾಸದ ಶಿಕ್ಷೆ ವಿಧಿಸಲು ಮತ್ತು ಸೊತ್ತಿನ ಮಾರುಕಟ್ಟೆ ಮೌಲ್ಯದ ಶೇ. 25ರಷ್ಟು ದಂಡ ವಸೂಲು ಮಾಡಲು ಅವಕಾಶವಿದೆ. ಅಲ್ಲದೆ ಬೇನಾಮಿ ಸೊತ್ತುಗಳ ಕುರಿತು ಸುಳ್ಳು ಮಾಹಿತಿ ಕೊಟ್ಟರೂ ಶಿಕ್ಷೆಯಾಗುತ್ತದೆ. ಅಂತೆಯೇ ಮುಟ್ಟುಗೋಲು ಹಾಕಿಕೊಂಡ ಬೇನಾಮಿ ಸೊತ್ತುಗಳು ಕೇಂದ್ರ ಸರಕಾರದ ವಶಕ್ಕೆ ಹೋಗುತ್ತದೆ. ಸರಕಾರ ಈ ಸೊತ್ತುಗಳನ್ನು ಬಡವರ ಕಲ್ಯಾಣಕ್ಕೆ ಉಪಯೋಗಿಸಿಕೊಳ್ಳಬಹುದು. ಬೇನಾಮಿ ಸೊತ್ತುಗಳಿಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥಪಡಿಸಲು ನ್ಯಾಯಮಂಡಳಿ ಸ್ಥಾಪಿಸುವ ಅಂಶವೂ ಇದೆ. ಹಿಂದು ಅವಿಭಜಿತ ಕುಟುಂಬ ಅಥವ ಟ್ರಸ್ಟಿಗಳಿಗೆ ಮಾತ್ರ ಬೇನಾಮಿ ಆಸ್ತಿ ಖರೀದಿಸಲು ಅವಕಾಶ ನೀಡಲಾಗಿದೆ. ಆದರೆ ಅದಕ್ಕೂ ಅವರು ಸಮರ್ಪಕ ದಾಖಲೆಗಳನ್ನು ಒದಗಿಸಬೇಕು ಹಾಗೂ ಜತೆಗೆ ಹಣದ ಮೂಲವನ್ನು ಬಹಿರಂಗಪಡಿಸಬೇಕು. ಅಪಾರ ಪ್ರಮಾಣದಲ್ಲಿರುವ ಬೇನಾಮಿ ಸೊತ್ತುಗಳನ್ನು ಬಯಲಿಗೆಳೆಯಲು ಇಂತಹ ಕಠಿಣ ಕಾನೂನಿನ ಅಗತ್ಯ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಬಲ ಕಾಯಿದೆ ಅಧಿಕಾರಿಗಳಿಗೆ ಅತಿ ಹೆಚ್ಚಿನ ಅಧಿಕಾರ ನೀಡುವುದರಿಂದ ಜನರಿಗೆ ಕಾಟ ಕೊಡಲು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಹೇಗೆ ಎಲ್ಲ ಶ್ರೀಮಂತರು ಅಪ್ರಾಮಾಣಿಕರಲ್ಲವೋ ಹಾಗೆಯೇ ಶ್ರೀಮಂತರ ಬಳಿಯಿರುವ ಎಲ್ಲ ಸೊತ್ತುಗಳು ಬೇನಾಮಿಯಲ್ಲ ಎಂಬ ಅರಿವು ಇರಬೇಕು.