Advertisement
ಗೆಳತಿ,ನನ್ನನ್ನು ಬಿಟ್ಟು ಹೋದ ಕಾಲ ಮರೆಯಾಗಿ ನೀ ಮತ್ತೆ ಬರಬಹುದೆಂಬ ಆಸೆ ಮೂಡುತ್ತಿದೆ. ನಿನ್ನ ಬರುವಿಕೆಗಾಗಿ ಕಾಯುತ್ತಿರುವ ಮನಸ್ಸು ಪದೇಪದೆ ಆಸೆಯ ಆಕಾಶಕ್ಕೆ ಕೈ ಚಾಚುತ್ತಲೇ ಇದೆ. ನೀನು ಹೋದ ಕ್ಷಣದಿಂದ, ನನ್ನ ಪ್ರತಿದಿನದ ಬದುಕು ನಿನ್ನ ನೆನಪುಗಳಿಂದ ಆರಂಭವಾಗಿ, ನಿನ್ನ ನೆನಪಿನೊಂದಿಗೇ ಮುಕ್ತಾಯವಾಗುತ್ತಿದೆ.
Related Articles
ಸೆಮಿಸ್ಟರ್ ಪರೀಕ್ಷೆ ಮುಗಿಸಿ ನೀನು ಮನೆಗೆ ಹೋದಾಗ ಅನುಕ್ಷಣವೂ ನಿನ್ನ ಸಂದೇಶಕ್ಕಾಗಿ, ತಾಯಿಗಾಗಿ ಹಂಬಲಿಸುವ ಮಗುವಿನಂತೆ ಕಾದಿರುತ್ತಿದ್ದೆ. ಮನೆಯಿಂದ ಬರುವಾಗ ನೀನು ತರುತ್ತಿದ್ದ ತುಪ್ಪ, ಅಪ್ಪೆ ಮಿಡಿಯ ಉಪ್ಪಿನ ಕಾಯಿ, ಕೆಂಪು ಬಾಳೆ ಹಣ್ಣು ನನಗೆ ಮತ್ತೆ ಸಿಗಲಿಕ್ಕಿಲ್ಲ ಅಲ್ವಾ? ಇವೆಲ್ಲವೂ ನಿನ್ನೆ ಮೊನ್ನೆಯಷ್ಟೆ ಕಳೆದು ಹೋದಂತೆ ಕಾಡುತ್ತಿದೆ.
Advertisement
ಪದವಿಯ ಕೊನೆಯ ಪರೀಕ್ಷೆ ಮುಗಿಸಿ, “ನಾಳೆ ಊರಿಗೆ ಹೊರಡುವೆ’ ಎಂದಾಗ ಮನಸ್ಸಿಲ್ಲದ ಮನಸ್ಸಿನಲ್ಲಿ ನಿನ್ನನ್ನು ಬಸ್ ಹತ್ತಿಸಿದೆ. ಬಸ್ ಹೊರಡುವಾಗ ಕಿಟಕಿಯಲ್ಲಿ ನೀನು ಒಂದು ಪತ್ರ ಕೊಟ್ಟು ಟಾಟಾ ಮಾಡಿದಾಗ ನನ್ನ ಪಾಲಿಗೆ ಅಂದು ದೀಪಾವಳಿ. ಆದರೆ, ಅದು ಕ್ಷಣಿಕ, ಆ ಪತ್ರದಲ್ಲಿ “ನಮ್ಮಿಬ್ಬರದು ಬೇರೆ ಬೇರೆ ಜಾತಿ ಕಣೋ, ಸಾರಿ ಕಣೋ ನನ್ನನ್ನು ಕ್ಷಮಿಸು’ ಎಂಬ ಸಾಲುಗಳನ್ನು ಓದಿದಾಗ ಮನಸ್ಸೆಂಬ ಸಮುದ್ರಕ್ಕೆ ದೊಡ್ಡ ಅಲೆಯೊಂದು ಅಪ್ಪಳಿಸಿ ನನ್ನನ್ನು ಹಿಂಡಿ ಹಿಪ್ಪೆ ಮಾಡಿದವು.
ಅಂದು ರಾತ್ರಿ ಮನೆಗೆ ಬಂದಾಗ, ನನ್ನ ದುಃಖ, ನೋವು, ಸಂಕಟಗಳ ಆಳ ಎಷ್ಟು ಎನ್ನುವುದು ಗೊತ್ತಿದ್ದಿದ್ದು, ನಾ ಮಲಗುವ ಹಾಸಿಗೆಗೆ, ತಲೆ ದಿಂಬಿಗೆ ಮಾತ್ರ. ಬಾಡಿಹೋದ ಪ್ರೀತಿ ಬಳ್ಳಿಯ ಮುಳ್ಳೊಂದು ಮನಸ್ಸಿನಲ್ಲಿ ನಾಟಿ ಚುಚ್ಚುತ್ತಲಿದೆ. ಮುಳ್ಳಿನ ಮೇಲೆ ಅರಳಿದ ಹೂಗಳ ಸೌಂದರ್ಯ, ಆ ಸುವಾಸನೆ, ನೀನು ಉಳಿಸಿಹೋದ ನೆನಪುಗಳು, ಮನ ಕೆರಳಿಸುವ ಭಾವನೆಗಳು ಬದುಕಲು ಬಿಡಲಾರೆಯೆನ್ನುತ್ತಲಿವೆ.
ಇಷ್ಟೆಲ್ಲಾ ಸೆಳೆತಕ್ಕೆ ಕಾರಣವಾಗಿ ಈಗ ಹೇಗಾದರೂ ದೂರಾದೆ ಗೆಳತಿ? ಬಹುಶಃ ನೆನಪುಗಳೇ ಹೀಗೆ ಅನಿಸುತ್ತದೆ. ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತವೆ. ಇನ್ನು ಮುಂದೆ ನನ್ನೊಂದಿಗೆ ಇರುವುದು ನನ್ನ ಏಕಾಂತ ಮತ್ತು ನಿನ್ನ ನೆನಪುಗಳು ಮಾತ್ರ.ಮಿಸ್ ಯು ಗೆಳತಿ ಹರೀಶ ಟಿ. ಗೌಡ, ಅಂಕೋಲಾ