Advertisement
“ದೇಶದಲ್ಲಿ ಪ್ರಜಾಸತ್ತೆ ಉಳಿದಿದ್ದರೆ ಬಿಜೆಪಿ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸ್ವಾಗತಿಸಿ, 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸುವುದಾಗಿ ಬಿಜೆಪಿ ಘೋಷಣೆ ಮಾಡಬೇಕಿತ್ತು’ ಎಂದು ಶಿವಸೇನೆ ತನ್ನ ಮುಖವಾಣಿಯಾದ “ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎನ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಹುಲ್ ಗಾಂಧಿ ಅವರು ತಾನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವುದು ಸರಿಯಲ್ಲ ಎಂಬ ಬಿಜೆಪಿ ನಾಯಕರ ಪ್ರತಿಕ್ರಿಯೆಗೂ ತುಸು ಖಾರವಾಗಿಯೇ ತಿರುಗೇಟು ನೀಡಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೀಗ ಮೈತ್ರಿ ಧರ್ಮದ ನೆನಪಾಗತೊಡಗಿದೆ. ಇದು ನಮಗೆ ಸಂತಸ ತಂದಿದೆ. ಒಂದೆಡೆಯಿಂದ ಕಾಂಗ್ರೆಸ್ ಮೈತ್ರಿಕೂಟ ರಚನೆಗೆ ಪ್ರಯತ್ನ ಆರಂಭಿಸಿದ್ದರೆ ಇನ್ನೊಂದೆಡೆಯಿಂದ ಬಿಜೆಪಿ ಏಕಪಕ್ಷೀಯವಾಗಿ ಪ್ರಧಾನಿ ಹುದ್ದೆಯ ಮೇಲೆ ಅಧಿಪತ್ಯವನ್ನು ಸ್ಥಾಪಿಸಿದೆ. ಇದನ್ನು ಸ್ವತಃ ಪ್ರಧಾನಿ ಮೋದಿ ಅವರ ಹೇಳಿಕೆಗಳೇ ಸಾಬೀತುಪಡಿಸುತ್ತವೆೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಮಿತ್ರಪಕ್ಷಗಳ ನಡುವೆ ಸಂವಹನ ಕೊರತೆ ಇದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಎನ್‌ಡಿಎಯಲ್ಲಿ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗದುಕೊಂಡು ಎಷ್ಟು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಸಂಪಾದಕೀಯದಲ್ಲಿ ಬಿಜೆಪಿ ಮತ್ತು ಪ್ರಧಾನಿಯವರನ್ನು ಪ್ರಶ್ನಿಸಲಾಗಿದೆ.