ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವವರನ್ನು ಪ್ರಧಾನಿ ನರೇಂದ್ರ ಮೋದಿಯವರು ನಗರ ನಕ್ಸಲರು ಎಂದು ಕರೆಯುತ್ತಿದ್ದು, ಯುವಕರೇ ಏಕೆ ಸುಮ್ಮನೆ ಕುಳಿತಿದ್ದೀರಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ “ಸಂವಿಧಾನ ರಕ್ಷಿಸಿ- ಭಾರತ ಉಳಿಸಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು, ಯುವಕರ ಮತ ಪಡೆದು 300ಕ್ಕೂ ಹೆಚ್ಚು ಲೋಕಸಭಾ ಸ್ಥಾನವನ್ನು ಬಿಜೆಪಿಯವರು ಗೆದ್ದಿದ್ದಾರೆ. ಇದೀಗ ಅವರ ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕೆ ಅವರನ್ನೇ ನಗರ ನಕ್ಸಲರು ಎಂದು ಕರೆಯುತ್ತಿದ್ದಾರೆ. ಅವರಿಗೆ ಕ್ಷಮೆ ಇಲ್ಲ ಎಂದು ಕಿಡಿ ಕಾರಿದರು.
ಸಾವರ್ಕರ್ ಹೆಸರಿಗೆ ವೀರ ಎಂಬ ಪದವೇ ಇರಲಿಲ್ಲ. ಆರ್‌ಎಸ್‌ಎಸ್‌ನವರು ಆ ಹೆಸರು ಸೇರಿಸಿದ್ದಾರೆ. ಬ್ರಿಟಿಷರು ಬಂಧಿಸಲಿದ್ದಾರೆ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದವರು ಸಾವರ್ಕರ್. ಇತ್ತೀಚೆಗೆ ರಾಹುಲ್ ಗಾಂಧಿಯವರು, “ನಾನು ರಾಹುಲ್ ಗಾಂಧಿ, ಸಾವರ್ಕರ್ ಅಲ್ಲ’ ಎಂದಿದ್ದರು. ಸಾವರ್ಕರ್ ಪತ್ರ ಬರೆದು ಪ್ರತಿಭಟನಾ ಚಳವಳಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದರು. ನೆಹರೂ ಅವರು 9 ವರ್ಷ ಜೈಲಿನಲ್ಲಿದ್ದರು. ಸಾವಿರಾರು ಮಂದಿ ಜೈಲು ವಾಸ ಅನುಭವಿಸಿದರು. ಆದರೂ, ಎಂದೂ ಈ ರೀತಿ ಹೇಳಿರಲಿಲ್ಲ. ಆದರೂ ಸಾವರ್ಕರ್‌ಗೆ ವೀರ ಎನ್ನುತ್ತಾರೆ.
-ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ.