ಕಾರವಾರ: ಕರ್ನಾಟಕ-ಗೋವಾ ರಾಜ್ಯಗಳ ಗಡಿಭಾಗದಲ್ಲಿ ಸಮುದಾಯ ಚೆಕ್ ಪೋಸ್ಟ್ ಪ್ರಾರಂಭವಾಗಿದೆಯಾದರೂ ಈ ಸಮುದಾಯ ಚೆಕ್‌ಪೋಸ್ಟ್‌ನಿಂದ ಆರ್‌ಟಿಒ ಇಲಾಖೆ ಮಾತ್ರ ಹೊರಗೆ ಉಳಿದಿರುವುದು ಹಲವು ಸಂಶಯ ಹುಟ್ಟುಹಾಕಿದೆ. ರಾಷ್ಟ್ರೀಯ ಹೆದ್ದಾರಿ-66 ಚತುಷ್ಪಥ ಅಗಲೀಕರಣ ಕಾಮಗಾರಿ ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ಪೂರ್ಣವಾಗಿದೆ. ಅಬಕಾರಿ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಒಂದೇ ಸೂರಿನಡಿ ಕಮ್ಯುನಿಟಿ ಚೆಕ್‌ಪೋಸ್ಟ್ (ಸಮುದಾಯ ಚೆಕ್ ಪೋಸ್ಟ್) ಅಡಿ ಕೆಲಸ ಮಾಡುತ್ತಿವೆ. ಇದಕ್ಕಾಗಿ ಹೊಸ ಕಟ್ಟಡ ಸಹ ನಿರ್ಮಿಸಲಾಗಿದೆ. ಆದರೆ ಈ ಕಟ್ಟಡದಲ್ಲಿ ಸ್ಥಳಾವಾಕಾಶ ಇದ್ದರೂ ಆರ್‌ಟಿಒ ಇಲಾಖೆ ಮಾತ್ರ ತನ್ನ ಸಿಬ್ಬಂದಿಯನ್ನು ಹೊರ ರಾಜ್ಯಗಳ ಪರ್ಮಿಟ್ ಪರಿಶೀಲನೆ ಮತ್ತು ಪರ್ಮಿಟ್ ನೀಡುವ ಕಾರ್ಯವನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ತಪ್ಪಿಹೋಗುತ್ತಿದೆ.
ಪಕ್ಕದ ಗಡಿ ಗೋವಾ ರಾಜ್ಯದ ತಪಾಸಣಾ ಕೇಂದ್ರದಲ್ಲಿ ಆರ್‌ಟಿಒ ಅಧಿಕಾರಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಾಹನಗಳನ್ನು ತಪಾಸಣೆ ಮಾಡಿ, ಪರ್ಮಿಟ್ ನೀಡಿಯೇ ವಾಹನಗಳು ಗೋವಾ ಪ್ರವೇಶಕ್ಕೆ ಅನುಮತಿ ನೀಡುತ್ತಾರೆ. ಆದರೆ ಇದೇ ಪ್ರಕ್ರಿಯೆಯನ್ನು ಕರ್ನಾಟಕದ, ಅದು ಕಾರವಾರದ ಆರ್‌ಟಿಒ ಅಧಿಕಾರಿಗಳು ಮಾಡುತ್ತಿಲ್ಲ. ಗೋವಾ ಪ್ರವಾಸಿ ಟ್ಯಾಕ್ಸಿಯವರು ಕಾರವಾರಕ್ಕೆ ಬಂದೇ ವಾಹನ ಪರ್ಮಿಟ್ ಮಾಡಿಕೊಂಡು ಗೋಕರ್ಣ ಸೇರಿದಂತೆ ಇತರೆಡೆಗೆ ಸಾಗುತ್ತಾರೆ. ಇದರಿಂದ ಗೋವಾ ಸೇರಿದಂತೆ ಇತರೆ ರಾಜ್ಯಗಳ ಟ್ಯಾಕ್ಸಿಗಳು ಕರ್ನಾಟಕದ ಪರ್ಮಿಟ್ ಪಡೆಯದೇ ಜಿಲ್ಲೆಯಲ್ಲಿ ಚಲಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಸಹ ತಪ್ಪಿಹೋಗುತ್ತಿದೆ ಎಂಬ ಆರೋಪ ಕರ್ನಾಟಕದ ಟ್ಯಾಕ್ಸಿ ಚಾಲಕ ಮಾಲೀಕರಿಂದ ಕೇಳಿ ಬಂದಿದೆ. ಅಲ್ಲದೇ ಕರ್ನಾಟಕದ ಗಡಿಯ ಕಮ್ಯೂನಿಟಿ ಚೆಕ್ ಪೋಸ್ಟ್‌ನಲ್ಲಿ ಆರ್ ಟಿಒ ತಪಾಸಣಾ ಮತ್ತು ಪರ್ಮಿಟ್ ಕೊಡುವ ಕೆಲಸ ಪ್ರಾರಂಭಿಸಬೇಕು ಎಂಬುದು ಟ್ಯಾಕ್ಸಿ ಮಾಲೀಕರ ಬೇಡಿಕೆಯೂ ಆಗಿದೆ.
ಸಮುದಾಯ ಚೆಕ್ ಪೋಸ್ಟ್ ಕಲ್ಪನೆ: ಸಮುದಾಯ ಚೆಕ್ ಪೋಸ್ಟ್ ಕಲ್ಪನೆ ರಾಜ್ಯಕ್ಕೆ ಹೊಸದೇನೂ ಅಲ್ಲ. ಇದು ರಾಜ್ಯದ ಹಲವು ಗಡಿಭಾಗಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಬೇಲೇಕೇರಿ ಅದಿರು ಹಗರಣದ ಪ್ರಕರಣ ಹೊರ ಬಂದಾಗ ಸರ್ಕಾರ ಲೋಕಾಯುಕ್ತದ ಸೂಚನೆಯ ಮೇರೆಗೆ ಸಂಯುಕ್ತ ಯಾನೆ ಸಮುದಾಯ ಚೆಕ್ ಪೋಸ್ಟ್ ಆರಂಭಿಸಿತು. ಬೇಲೇಕೇರಿ ಬಂದರಿನಲ್ಲಿ ಸಹ ಇಂಥಹ ಚೆಕ್ ಪೋಸ್ಟ್ ಇತ್ತು. ಆದರೆ ಕರ್ನಾಟಕ ಗೋವಾ ರಾಜ್ಯದ ಗಡಿಭಾಗ ಮಾಜಾಳಿಯಲ್ಲಿ ಮಾತ್ರ ಈ ಮಾದರಿಯ ಚೆಕ್ ಪೋಸ್ಟ್ ಪ್ರಾರಂಭವಾಗಿರಲಿಲ್ಲ, ಈಗ ಪ್ರಾರಂಭವಾದರೂ ಇದರಿಂದ ಸಿಬ್ಬಂದಿ ಕೊರತೆಯ ನೆಪ ಹೇಳಿ ಕಮ್ಯೂನಿಟಿ ಚೆಕ್ ಪೋಸ್ಟ್ ಕಚೇರಿಯಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸಿಲ್ಲ. ಈ ವಿಳಂಬದಿಂದ ಲಕ್ಷಾಂತರ ರೂ. ನಷ್ಟ ಪ್ರತಿ ತಿಂಗಳು ಆಗುತ್ತಿರುವುದು ಸ್ಪಷ್ಟ. ಪ್ರತಿದಿನ ಗೋವಾದಿಂದ ಕನಿಷ್ಠ ಸಾವಿರ ವಾಹನಗಳು ಕಾರವಾರ ಮತ್ತು ಕರ್ನಾಟಕ ಪ್ರವೇಶಿಸುತ್ತಿವೆ. ಅದರಲ್ಲೂ ಪ್ರವಾಸಿ ಟ್ಯಾಕ್ಸಿಗಳು ಕಾರವಾರ ಮೂಲಕವೇ ರಾಜ್ಯದ ಇತರೆ ಭಾಗಗಳಿಗೆ ತೆರಳುತ್ತಿವೆ. ಅವರ ಪರ್ಮಿಟ್ ಪರೀಕ್ಷಿಸುವವರೇ ಇಲ್ಲವಾಗಿದೆ.
ಸಿಬ್ಬಂದಿ ಕೊರತೆ: ಅನೇಕ ವರ್ಷಗಳಿಂದ ಕಾರವಾರಕ್ಕೆ ಪೂರ್ಣ ಪ್ರಮಾಣದ ಆರ್‌ಟಿಒ ಅಧಿಕಾರಿಯಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಆರ್‌ಟಿಒಗಳು ಅಥವಾ ಹಾವೇರಿ ಜಿಲ್ಲೆಯ ಪ್ರಭಾರ ಹೊಂದಿರುವವರು ಕಾರವಾರಕ್ಕೆ ವಾರದಲ್ಲಿ ಎರಡರಿಂದ ಮೂರು ದಿನ ಇದ್ದು ಹೋಗುವ ಸಂಪ್ರದಾಯವಿದೆ. ಅಲ್ಲದೇ ಬಹುತೇಕ ಹೊರಗುತ್ತಿಗೆ ಸಿಬ್ಬಂದಿ ಮೇಲೆ ಆರ್‌ಟಿಒದಂಥ ಆದಾಯ ತರುವ ಕಚೇರಿ ನಡೆಯುತ್ತಿದೆ. ಇದು ಸಾಕಷ್ಟು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಲು ಹೊಸ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಡ ಹೆಚ್ಚುತ್ತಿದೆ. ಪೂರ್ಣ ಪ್ರಮಾಣದ ಆರ್‌ಟಿಒ ಜೊತೆಗೆ ಕಾರವಾರ ಹಾಗೂ ಚೆಕ್ ಪೋಸ್ಟ್‌ಗೆ ಸಿಬ್ಬಂದಿ ನೇಮಕ ಮಾಡಬೇಕಿದೆ.
ಕರ್ನಾಟಕ-ಗೋವಾ ಗಡಿ ಭಾಗದ ಮಾಜಾಳಿ ಬಳಿ ಇರುವ ಸಮುದಾಯ ಚೆಕ್ ಪೋಸ್ಟ್ ನಲ್ಲಿ ತಕ್ಷಣ ಸರ್ಕಾರ ಆರ್‌ಟಿಒ ವಿಭಾಗ ಪ್ರಾರಂಭಿಸಬೇಕು. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರಲಿದೆ. ಇತರೆ ರಾಜ್ಯಗಳ ವಾಹನ ಹಾಗೂ ಪ್ರವಾಸಿ ಟ್ಯಾಕ್ಸಿಗಳ ಮೇಲೆ ಸರ್ಕಾರಕ್ಕೆ ಹಿಡಿತ ಬರಲಿದೆ.
ಗಿರೀಶ್, ಕಾರವಾರ