Advertisement

94ಸಿ ಅರ್ಜಿ ತಹಶೀಲ್ದಾರ್‌ ಕಚೇರಿಯಲ್ಲೇ ಏಕೆ ಬಾಕಿ?

12:54 PM Jan 17, 2018 | |

ಪುತ್ತೂರು: ಕಡತ ವಿಲೇವಾರಿ ದೃಷ್ಟಿಯಿಂದ ಪುತ್ತೂರು ತುಂಬಾ ಹಿಂದುಳಿದಿದೆ. 94ಸಿ ಸಹಿತ ಎಲ್ಲ ಕಡತಗಳು ತಹಶೀಲ್ದಾರ್‌ ಕೊಠಡಿಯಲ್ಲೇ ಬಾಕಿ ಆಗುವುದೇಕೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಪ್ರಶ್ನಿಸಿದರು.

Advertisement

ಪುತ್ತೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿಟ್ಲದಲ್ಲಿ ದಿನಕ್ಕೆ 100-150 ಫೈಲ್‌ ವಿಲೇವಾರಿಯಾದರೆ, ಪುತ್ತೂರಿನಲ್ಲಿ 5ರಿಂದ 10 ಕಡತಗಳಷ್ಟೇ ವಿಲೇವಾರಿ ಆಗುತ್ತಿವೆ. ಕಡತಗಳು ತಹಶೀಲ್ದಾರ್‌ ಕಚೇರಿಯಲ್ಲಿ ಬಾಕಿ ಆಗುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಪುತ್ತೂರಿನ ಕೆಲಸಗಳು ಎಷ್ಟು ನಿಧಾನ ಆಗುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ. ವಿಎ, ಆರ್‌ಐ ಸರಿಯಿಲ್ಲವೋ ಅಥವಾ ಕಚೇರಿ ಒಳಗಿರುವ ಉಪತಹಶೀಲ್ದಾರ್‌, ತಹಶೀಲ್ದಾರ್‌ ಸರಿಯಿಲ್ಲವೋ? ತಾವು ಹೇಳಿದರೂ 94ಸಿ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂದರೆ ಏನರ್ಥ? ಈ ತಿಂಗಳ ಕೊನೆಯೊಳಗೆ ಎಲ್ಲ ಕಡತಗಳು ವಿಲೇವಾರಿ ಆಗಿರಬೇಕು. ತಪ್ಪಿದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿದ ಉಪತಹಶೀಲ್ದಾರ್‌ ಶ್ರೀಧರ್‌, ತಾಂತ್ರಿಕ ಕಾರಣಗಳಿಂದಾಗಿ ಕೆಲಸ ವಿಳಂಬವಾಗಿರಬಹುದು. ಇನ್ನಷ್ಟು ವೇಗ ನೀಡಲು ಪ್ರಯತ್ನಿಸಲಾಗುವುದು ಎಂದರು.

ಕೆಡಿಪಿ ಸದಸ್ಯ ಅಶೋಕ್‌ ಮಾತನಾಡಿ, ನೇರವಾಗಿ ಇಲಾಖೆಗೆ ಹೋದರೆ ಕೆಲಸ ಆಗುತ್ತಿಲ್ಲ. ಮದ್ಯವರ್ತಿಗಳಿಗೆ ಮಣೆ ಹಾಕಲಾಗುತ್ತಿದೆ ಎಂದರು. ಪ್ರತಿಕ್ರಿಯಿಸಿದ ಶಾಸಕಿ, ತಹಶೀಲ್ದಾರ್‌ ನೇರವಾಗಿದ್ದರೆ ಸರಿ. ಆದರೆ ಕೆಲಸಗಳೇ ಆಗುತ್ತಿಲ್ಲ. ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಅಂಗವಿಕಲರ ಮನೆಗೆ ರಸ್ತೆಯಿಲ್ಲ
ಕೋಡಿಂಬಾಡಿಯ ಶಿವಪ್ಪ ಗೌಡ ಎಂಬವರ ಮನೆಯಲ್ಲಿ ಮೂವರು ಅಂಗವಿಕಲ ಮಕ್ಕಳಿದ್ದಾರೆ. ಅವರಿಗೆ ಮನೆಯಿಂದ ಹೋಗಲು ಕಾಲು ದಾರಿಯೂ ಇಲ್ಲ. ಈ ದಾರಿಗಾಗಿ 2014ರಿಂದ ಕಂದಾಯ ಇಲಾಖೆಗೆ ಅರ್ಜಿ ನೀಡುತ್ತಲೇ ಇದ್ದಾರೆ ಎಂದು ಅಶ್ರಫ್‌ ಬಸ್ತಿಕಾರ್‌ ಆಕ್ರೋಶ ವ್ಯಕ್ತಪಡಿಸಿದರು. ಅಶೋಕ್‌, ಕೃಷ್ಣಪ್ರಸಾದ್‌ ಆಳ್ವ ದನಿಗೂಡಿಸಿದರು. ಪ್ರತಿಕ್ರಿಯಿಸಿದ ಶಾಸಕಿ, ಅಂಗವಿಕಲರ ಮನೆಗೆ ರಸ್ತೆ ನಿರ್ಮಿಸುವುದು ಕಂದಾಯ ಇಲಾಖೆಯ ಜವಾಬ್ದಾರಿ. ಕಾನೂನಿನ ಜತೆಗೆ ಮಾನವೀಯತೆಯೂ ಇರಬೇಕು. ಹಿರೇಬಂಡಾಡಿಯಲ್ಲೂ ಇಂತಹದೇ ಸಮಸ್ಯೆ ಇದೆ. ತಕ್ಷಣ ಈ ಮನೆಗಳಿಗೆ ರಸ್ತೆ ಸೌಲಭ್ಯ ಒದಗಿಸುವಂತೆ ಉಪತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಅವರಿಗೆ ಸೂಚನೆ ನೀಡಿದರು.

Advertisement

ಸಿಎಂ ಪಿಎ ಯಾರು?
ಪುತ್ತೂರಿನಲ್ಲಿ ಮುಖ್ಯಮಂತ್ರಿಗಳ ಪಿಎ ಇದ್ದಾರೆ. ಅವರಲ್ಲಿ ಹೇಳಿದರೆ ಕೆಲಸ ಆಗುತ್ತದೆ ಎಂಬ ವದಂತಿ ಇದೆ. ಇಂಥ ಗಾಳಿ ಸುದ್ದಿಗೆ ಕಿವಿಗೊಡುವ ಅಗತ್ಯವಿಲ್ಲ. ಪುತ್ತೂರಲ್ಲಿ ಯಾರೂ ಮುಖ್ಯಮಂತ್ರಿಗಳ ಪಿಎ ಇಲ್ಲ. ಇಂತಹ ಪಿಎಗಳ ಫೋನ್‌ ಬಂದರೆ ಅಧಿಕಾರಿಗಳು ಅವರ ಬಳಿ ಮಾತನಾಡುವ ಅಗತ್ಯವಿಲ್ಲ ಎಂದು ಶಾಸಕಿ ತಿಳಿಸಿದರು.

ಸರಕಾರಿ ಜಾಗ ಅತಿಕ್ರಮಣ
ಬಜತ್ತೂರಿನ ಸರಕಾರಿ ಭೂಮಿ ಅತಿಕ್ರಮಣ ನಡೆಯುತ್ತಿದೆ. ಕಂದಾಯ ಇಲಾಖೆಗೆ ದೂರಿತ್ತರೂ ಸ್ಪಂದನೆ ಇಲ್ಲ ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಹೇಳಿದರು. ಸರಕಾರಿ ಭೂಮಿ ಅತಿಕ್ರಮಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಾಸಕಿ ಸೂಚಿಸಿದರು. ಉತ್ತರಿಸಿದ ಉಪತಹಶೀ ಲ್ದಾರ್‌, ಗ್ರಾಮಗಳಲ್ಲಿ ಸರಕಾರಿ ಭೂಮಿ ಅತಿಕ್ರಮಣ ತಡೆಯುವ ಜವಾಬ್ದಾರಿ ಅಲ್ಲಿನ ಕಂದಾಯ ನಿರೀಕ್ಷಕ ಹಾಗೂ ಗ್ರಾಮಕರಣಿಕರದ್ದು. ಅವರಿಗೆ ಮತ್ತೆ ಲಿಖೀತ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಒಂದೇ ದಿನ 30 ಹೆರಿಗೆ!
ಖಾಸಗಿ ವೈದ್ಯರ ಮುಷ್ಕರ ಸಂದರ್ಭ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ| ಪ್ರದೀಪ್‌ ಒಂದೇ ದಿನ 30 ಹೆರಿಗೆ ಮಾಡಿಸಿದ್ದಾರೆ. ರಾತ್ರಿ- ಹಗಲು ದುಡಿದಿದ್ದಾರೆ. ಬಳಿಕ ಅವರಿಗೆ ಸಮ್ಮಾನ ಮಾಡಲಾಗಿದೆ ಎಂದ ಶೆಟ್ಟಿ, ಡಾ| ಪ್ರದೀಪ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಶಯನಾ ಜಯಾನಂದ್‌, ಅನಿತಾ ಹೇಮನಾಥ ಶೆಟ್ಟಿ, ಪ್ರಮೀಳಾ ಜನಾರ್ದನ್‌, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಬಜತ್ತೂರು, ತಾ.ಪಂ. ಇಒ ಎಸ್‌. ಜಗದೀಶ್‌, ಯೋಜನಾಧಿಕಾರಿ ಗಣಪತಿ ಭಟ್‌, ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ಉಪಸ್ಥಿತರಿದ್ದರು.

ಸವಣೂರನ್ನು ಪುತ್ತೂರಿಗೆ ಸೇರಿಸಿ
ಸವಣೂರು, ಕಾಣಿಯೂರನ್ನು ಕಡಬ ತಾಲೂಕಿಗೆ ಸೇರಿಸಿದರೆ ಜನರಿಗೆ ತುಂಬಾ ಸಮಸ್ಯೆ ಎದುರಾಗಲಿದೆ ಎಂದು ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್‌ ಹೇಳಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸವಣೂರು, ಕಾಣಿಯೂರು ಪುತ್ತೂರಿಗೆ ಸಮೀಪದಲ್ಲಿದೆ. ಕಾಯಿಮಣ, ಬೆಳಂದೂರು, ಕಾಣಿಯೂರು, ಚಾರ್ವಾಕ, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡು, ಕುದ್ಮಾರು ಗ್ರಾಮಗಳನ್ನು ಪುತ್ತೂರಿಗೆ ಸೇರಿಸಿ ಎಂದು ಒತ್ತಾಯಿ ಸಿದರು. ಪ್ರತಿಕ್ರಿಯಿಸಿದ ಶಾಸಕಿ, ತಾಲೂಕಿನ ಬಗ್ಗೆ ನೋಟಿಸಿಕೇಷನ್‌ಗೆಸಿದ್ಧವಾಗಿದೆ. ಬದಲಾವಣೆ ಮಾಡುವುದು ಕಷ್ಟ. ಈ ಮೊದಲು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ಉತ್ತರಿಸಿದ ಪ್ರಮೀಳಾ, ಈ ಹಿಂದಿನ ಜಿಲ್ಲಾಧಿಕಾರಿ ಸಭೆಗೆ ನಮ್ಮನ್ನು ಕರೆದೇ ಇಲ್ಲ. ನೋಟಿಸಿಕೇಷನ್‌ ಆಗಿದೆ ಎಂದು ಸುಮ್ಮನೆ ಕೂತರೆ ಮುಂದಿನ ದಿನಗಳಲ್ಲಿ ಕಷ್ಟವಾದೀತು ಎಂದರು. ಶಾಸಕಿ ಮಾತನಾಡಿ, ಬಜತ್ತೂರನ್ನು ಪುತ್ತೂರಿಗೆ ಸೇರಿಸಿಯಾಗಿದೆ. ಸವಣೂರು ಭಾಗದ ಗ್ರಾಮಗಳನ್ನು ಪುತ್ತೂರಿಗೆ ಸೇರಿಸುವುದು ಸ್ವಲ್ಪ ಕಷ್ಟ ಎಂದರು. ಕೆಡಿಪಿ ಸದಸ್ಯ ಕೃಷ್ಣಪ್ರಸಾದ್‌ ಆಳ್ವ ಮಾತನಾಡಿ, ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸೋಣ ಎಂದು ಚರ್ಚೆಗೆ ತೆರೆ ಎಳೆದರು.

ನನ್ನ ಹೆಸರು ಉಂಟಲ್ವಾ !
ಪ್ರತಿ ಚುನಾವಣೆ ಸಂದರ್ಭ ಮತದಾರ ಪಟ್ಟಿಯ ಗೊಂದಲ ಎದುರಾಗುತ್ತದೆ. ಈಗಲೇ ಮತದಾರರ ಪಟ್ಟಿಯನ್ನು ಸಮರ್ಪಕಗೊಳಿಸಿ, ಗೊಂದಲವಾಗದಂತೆ ನೋಡಿಕೊಳ್ಳಿ. ಮತದಾರ ಪಟ್ಟಿಯಲ್ಲಿ ಎಷ್ಟೋ ಜನರ ಹೆಸರು ಬಿಟ್ಟುಹೋಗುತ್ತವೆ. ಅಂದ ಹಾಗೇ ನನ್ನ ಹೆಸರು ಪಟ್ಟಿಯಲ್ಲಿ ಉಂಟಲ್ವಾ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಅಧಿ ಕಾರಿಗಳಲ್ಲಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next