ಸಾಕುಪ್ರಾಣಿಗಳು ಎಂದಾಗ ಮೊದಲಿಗೆ ನೆನಪಾಗುವುದು ನಾಯಿ. ನಾಯಿ ಸ್ವಾಭಾವಿಕವಾಗಿ ಸ್ನೇಹಿ ಮತ್ತು ನಿಷ್ಠಾವಂತ ಪ್ರಾಣಿ. ಇದನ್ನು ಬಾಕಿ ಪ್ರಾಣಿಗಳ ಹೋಲಿಕೆಯಲ್ಲಿ ಅತ್ಯಂತ ನಿಷ್ಠಾವಂತ ಎಂದು ಕೊಂಡಾಡುವುದಿದೆ. ನಾಯಿಗಳು ಒಂದು ರೀತಿಯಲ್ಲಿ ಸಂಘ ಜೀವಿಯಾಗಿದ್ದು, ಇವು ಇತರೆ ಪ್ರಾಣಿಗಳು ಹಾಗೂ ಮನುಷ್ಯರ ಸಹವಾಸವನ್ನು ಇಷ್ಟಪಡುತ್ತವೆ. ನಾಯಿಗಳು ತನ್ನನ್ನು ಸಾಕಿ ಸಲುಹಿದ ಮಾಲಕನ ಜತೆ ಉತ್ತಮ ಒಡನಾಟವನ್ನು ಹೊಂದುತ್ತವೆ ಮತ್ತು ಇವು ಯಾವುದೇ ಸಂದರ್ಭದಲ್ಲೂ ಮಾಲಕನಿಗೆ ನಿಷ್ಠರಾಗಿಯೇ ಉಳಿಯುತ್ತದೆ ಎಂದರೆ ತಪ್ಪಾಗಲಾರದು.
ಜವಾಬ್ದಾರಿಗೆ ಅನ್ವರ್ಥನಾಮ ನಾಯಿ ಎಂದೇ ಹೇಳಬಹುದು. ಅವುಗಳು ತನ್ನ ಮಾಲಕನ ಮತ್ತು ಆತನ ಆಸ್ತಿಯನ್ನು ನಿಷ್ಠೆಯಿಂದ ರಕ್ಷಿಸುತ್ತದೆ. ಅಪಾಯದ ಮುನ್ಸೂಚನೆ ಲಭಿಸಿದ ಕೂಡಲೇ ಬೊಗಳಿ ಸೂಕ್ತ ಕ್ರಮ ತೆಗೆದುಕೊಳ್ಳಲು ತನ್ನ ಮಾಲಕನನನ್ನು ಎಚ್ಚರಿಸುತ್ತದೆ. ಇಷ್ಟೊಂದು ನಿಷ್ಠೆ, ನಿಯತ್ತನ್ನು ಹೊಂದಿರುವ ನಾಯಿಗಳನ್ನು ಬೀದಿ ಹಾವಳಿಗಳಾಗಿಸುತ್ತಿರುವುದೇ ಬೇಸರದ ಸಂಗತಿ.
ಮನೆ ಕಾವಲಾಗಿರುವವನ್ನು ಬೀದಿಯಲ್ಲಿ ಬಿಟ್ಟರೆ ಹೇಗಿರಬಹುದು ಯೋಚಿಸಿ. ಬೀದಿಯಲ್ಲಿ ಸಿಗುವ ಎಲ್ಲರನ್ನೂ ಕೋಪದಿಂದಲೇ ದಿಟ್ಟಿಸಿ ನೋಡುತ್ತದೆ. ಮೂಕ ಜೀವಿಯಾಗಿರುವುದರಿಂದ ಯಾರೊಂದಿಗೂ ಹೊಟ್ಟೆ ಹಸಿವು ಎಂದು ಎನ್ನಲಾಗದ ಪರಿಸ್ಥಿತಿ. ಕಂಡ ಕಂಡಲ್ಲಿ ಅಲೆದಾಡುವುದನ್ನು ರೂಢಿಯಾಗಿಸಿಕೊಂಡು ಬಿಡುತ್ತದೆ. ಮನುಜರು ವಾಹನ ಚಲಾಯಿಸುವಾಗ ಇವುಗಳ ಕಡೆ ಕಣ್ಣಾಯಿಸುವುದೇ ಇಲ್ಲ. ಇದರಿಂದ ಅದೆಷ್ಟೋ ನಾಯಿಗಳು ವಾಹನ ಢಿಕ್ಕಿ ಹೊಡೆದು ಬಲಿಯಾಗುತ್ತವೆ. ಇವೆಲ್ಲವನ್ನೂ ಯೋಚಿಸಿದರೆ ಮಾನವ ಎಷ್ಟರ ಮಟ್ಟಿಗೆ ಕ್ರೂರಿಯಾಗಿದ್ದಾನೆ ಎಂದು ಅನ್ನಿಸುವುದುಂಟು.
ಮನೆಯವರೊಂದಿಗೆ ನಗುತ್ತಾ ಖುಷಿಯಾಗಿದ್ದ ಜೀವಿಗಳು ಎಲ್ಲೆಲ್ಲೊ ಅಲೆದಾಡಬೇಕಾ? ಮನುಷ್ಯರು ಮಾಡುವ ತಪ್ಪಿಗೆ ಕ್ಷಮೆ ಇರುವಾಗ ಮೂಕ ಜೀವಿಗಳು ಮಾಡುವ ತಪ್ಪಿಗೆ ಕ್ಷಮೆ ಯಾಕಿಲ್ಲ. ಎಲ್ಲೋ ಒಂದು ಸಣ್ಣ ತಪ್ಪು ಮಾಡಿದರೆ ಅದನ್ನು ಯಾವುದೋ ಊರಲ್ಲಿಯೋ, ಹರಿಯುವ ಹೊಳೆಗಳಲ್ಲಿ ಬಿಡುವ ನಾವು ಮನುಷ್ಯರನ್ನು ಶಿಕ್ಷಿಸುವುದಿಲ್ಲ ಯಾಕೆ?
ಒಂದು ವೇಳೆ ನಮ್ಮ ಮನೆಯ ಮಕ್ಕಳು ತಪ್ಪು ಮಾಡಿದರೆ ಬೀದಿ ಪಾಲು ಮಾಡುತ್ತಿದ್ದೆವಾ? ಇನ್ನೊಬ್ಬರ ಬಾಯಿಯ ಎಂಜಲಿಗೆ ಕೈ ಹಾಕಲು ಬಿಟ್ಟಿರುತ್ತಿದ್ದೆವಾ?
ನಾಯಿಯನ್ನು ಪ್ರೀತಿ ಕೊಟ್ಟು ಮನೆ ಮಕ್ಕಳಂತೆ ಸಾಕಿದರೆ ಕಳ್ಳರ ಉಪಟಳ ಕ್ಷೀಣವಾಗಬಹುದು. ಅದರೊಂದಿಗೆ ನಮ್ಮ ಮನೆಯ ಮಕ್ಕಳ ರಕ್ಷಣೆಯೂ ಸಾಧ್ಯ.
ಇನ್ನಾದರೂ ಅವುಗಳ ಜೀವ ಉಳಿಸಲು ಮನುಷ್ಯರು ಯೋಚಿಸಬೇಕಾಗಿದೆ. ಯಾಕೆಂದರೆ ಒಂದು ನಾಯಿ ಎನ್ನುವ ಪ್ರಾಣಿ ಇಲ್ಲದೆ ಹೋಗಿದ್ದರೆ ನಾವಿಂದು ಬದುಕುತ್ತಿದ್ದೇವಾ ? ನಮ್ಮ ಆಸ್ತಿ ಪಾಸ್ತಿ ಉಳಿಯುತ್ತಿತ್ತಾ? ಮನುಷ್ಯರೇ ರಕ್ಷಿಸದಿದ್ದರೆ ಇವುಗಳ ರಕ್ಷಣೆ ಯಾರು ಮಾಡಬೇಕು.
-ಅನನ್ಯ ಎಚ್. ಸುಬ್ರಹ್ಮಣ್ಯ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು