Advertisement

“ಸನ್ನಿಧಿ ರಸ್ತೆಯಲ್ಲಿ ಇರುವುದಾದರೂ ಯಾರ ಸಾನ್ನಿಧ್ಯ’?

04:33 PM Feb 25, 2017 | |

 ಬಸವನಗುಡಿಯ ಬ್ಯೂಗಲ್‌ರಾಕ್‌ ಮತ್ತು ಎನ್‌.ಆರ್‌ ಕಾಲನಿಗೆ ಸಂಪರ್ಕ ಸೇತುವಿನಂತೆ ಸನ್ನಿಧಿ ರಸ್ತೆಯಿದೆ. ಈ ರಸ್ತೆಗೆ ಆ ಹೆಸರು ಬಂದಿದ್ದಾದರೂ ಹೇಗೆ ಎಂದು ತಿಳಿಯಲು ಹೊರಟರೆ ಹಲವು ಸ್ವಾರಸ್ಯಕರ ಸಂಗತಿಗಳು ಬಿಚ್ಚಿಕೊಳ್ಳುತ್ತವೆ…

Advertisement

“ಗಾಂಧಿ ಬಜಾರ್‌’ ಅಂದರೆ ಕೆ.ಆರ್‌. ರಸ್ತೆಯ ಟ್ಯಾಗೋರ್‌ ವೃತ್ತದಿಂದ ವಿವೇಕಾನಂದ ವೃತ್ತ ತಲುಪುವ ಮುಖ್ಯರಸ್ತೆ ಎಂದು ಪರಿಗಣಿಸಬೇಕಾಗಿಲ್ಲ. ಪೂರ್ವಕ್ಕಿರುವ ಕೆ.ಆರ್‌. ರಸ್ತೆ, ಪಶ್ಚಿಮದಲ್ಲಿನ ಬಸವನಗುಡಿ ರಸ್ತೆ ಹಾಗೂ ಉತ್ತರಕ್ಕಿರುವ ನಾರ್ತ್‌ರೋಡ್‌ ಮತ್ತು ನೆಟ್ಟಕಲ್ಲಪ್ಪ ವೃತ್ತದಿಂದ ನರಸಿಂಹರಾಜ ಕಾಲೋನಿ ರಸ್ತೆಯ ಈ ಬಸವನಗುಡಿ ಪ್ರದೇಶಕ್ಕೆ ಕೇಂದ್ರ ಬಿಂದು ಗಾಂಧಿ ಬಜಾರ್‌ ಮತ್ತು ಡಿವಿಜಿ ರಸ್ತೆ. ಸುಮಾರು ನಾಲ್ಕು ಚದರ ಕಿಲೋಮೀಟರ್‌ ಈ ಪ್ರದೇಶದ ವ್ಯಾಪ್ತಿ ಇರಬಹುದು. ಇಂದು ಡಿವಿಜಿಯವರು ಇಲ್ಲದಿದ್ದರೂ ಕಹಳೆ ಬಂಡೆ ಉದ್ಯಾನವನದಲ್ಲಿ ಸ್ಥಾಪಿತವಾಗಿರುವ ಅವರ ಪ್ರತಿಮೆಯ ಮೂಲಕ ಡಿವಿಜಿಯವರು ಎಲ್ಲರ ಮನದಲ್ಲೂ ವಿರಾಜಮಾನರಾಗಿದ್ದಾರೆ.

ಗಾಂಧಿ ಬಜಾರ್‌ ಪ್ರದೇಶವನ್ನು ನೆನಪಿಸಿಕೊಡು ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌ರವರು ಹೀಗೆ ಹೇಳುತ್ತಾರೆ:

“ನನಗೆ ಪುನರ್ಜನ್ಮವೆಂಬುದೆಂದಿದ್ದರೆ ನಾನು ಗಾಂಧಿ ಬಜಾರಿನಲ್ಲಿಯೇ ಹುಟ್ಟ ಬಯಸುತ್ತೇನೆ” ಇದೇ ಗಾಂಧಿ ಬಜಾರಿನ ಅಥವಾ ಬಸವನಗುಡಿ ಪ್ರದೇಶದ ವಿಶೇಷ.

ಈ ಪ್ರದೇಶದ ಕಹಳೆ ಬಂಡೆ (ಬ್ಯೂಗಲ್‌ ರಾಕ್‌) ಉದ್ಯಾನವನದ ದಕ್ಷಿಣ ದ್ವಾರಕ್ಕೆ ತಾಗಿಕೊಂಡು ನ.ರಾ. ಕಲೋನಿಗೆ ಹೋಗುವ ರಸ್ತೆಗೆ “ಸನ್ನಿಧಿ ರಸ್ತೆ’ ಎಂದು ಹೆಸರಿಸಲಾಗಿದೆ. ಯಾವ ಸನ್ನಿಧಿ- ಯಾರ ಸನ್ನಿಧ್ಯ? ಈ ಹೆಸರು ಬರಲು ಕಾರಣವೇನು? ಎಂದು ತಿಳಿಯ ಹೊರಟರೆ ಅದೊಂದು ರೀತಿಯ ಉತVನನವೇ ಆದೀತು.

Advertisement

ಈ ಸನ್ನಿಧಿ ರಸ್ತೆಯ ಪಶ್ಚಿಮಕ್ಕೆ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನವಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿರುವ ಈ ದೇವಸ್ಥಾನವು ಹದಿನೇಳನೆಯ ಶತಮಾನದ್ದು ಎಂದು ಹೇಳಲಾಗಿದೆ. ಮೈಸೂರು ಸಂಸ್ಥಾನದ ಅರಸರಾದ ಚಿಕ್ಕದೇವರಾಜ ಒಡೆಯರ್‌ರವರ ಕಾಲದಲ್ಲಿ (ಕ್ರಿ.ಶ. 1704) ಈ ಪ್ರದೇಶದ ಶಾನುಭೋಗರಾಗಿದ್ದ ಅಚ್ಯುತರಾಯ ಎಂಬುವರು ಕ್ರಿ.ಶ. 1710ರಲ್ಲಿ ಈ ದೇವಸ್ಥಾನವನ್ನು ಕಟ್ಟಿಸಿದ್ದು ಕ್ರಿ.ಶ. 1799ರಲ್ಲಿ ಬ್ರಿಟಿಷ್‌ ಅಧಿಕಾರಿ ಹ್ಯಾರಿಸ್‌ ಎಂಬಾತ ಈ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಈ ಪ್ರದೇಶವು ನಿರ್ಜನವಾಯಿತು ಎಂಬುದು ಇತಿಹಾಸ. ಈ ಸಂದರ್ಭದಲ್ಲಿ ವಾರಸುದಾರರಿಲ್ಲದೆ ದೇವಾಲಯಗಳು ಶಿಥಿಲವಾದವು.

ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಬೆಂಗಳೂರು ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ತಾವು ಮನೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಈ ಪ್ರದೇಶವನ್ನು ಗುರುತಿಸಿ ದೇವಾಲಯಗಳ ಜೀರ್ಣೋದ್ಧಾರ ಮಾಡಿದರು. 1903ರಲ್ಲಿ ವಿದ್ಯುಕ್ತವಾಗಿ ಭಕ್ತಾಧಿಗಳು ಕೈಂಕರ್ಯಕ್ಕೆ ನಾಂದಿ ಹಾಡಿದರು.

ಈ ದೇವಸ್ಥಾನದ ಪ್ರಾಂಗಣದಲ್ಲಿ ಸಾಂಸ್ಕೃತಿಕ ದಿಗ್ಗಜರಾದ ಡಿವಿಜಿಯವರು ಮತ್ತು ಸಾಹಿತಿ ಕು.ರಾ. ಸೀತಾರಾಮ ಶಾಸಿŒಯವರು ಸಾಂಸ್ಕೃತಿಕ ಚಿಂತನ ಮಂಥನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಏಕಾಗ್ರತೆ ಮತ್ತು ಧಾರ್ಮಿಕ ಚಿಂತನೆಗೆ ಈ ಮಲ್ಲಿಕಾರ್ಜುನ ದೇವಸ್ಥಾನದ ಸಾನ್ನಿಧ್ಯದಲ್ಲಿ ಅವಕಾಶ ಮಾಡಿಕೊಟ್ಟ ಶ್ರೀ ಬೆಳ್ಳಾವೆ ವೆಂಕಟ ನಾರಾಯಣಪ್ಪನವನ್ನು ಸ್ಮರಿಸುತ್ತಾ ಈ ಪ್ರದೇಶದ ಮಹಾ ಜನತೆಯೇ “ಕಹಳೆ ಬಂಡೆ ಉದ್ಯಾನವನದ ದಕ್ಷಿಣ ದ್ವಾರದಿಂದ ನರಸಿಂಹರಾಜ ಕಾಲೋನಿಗೆ ಹೋಗುವ ರಸ್ತೆಗೆ “ಸನ್ನಿಧಿ ರಸ್ತೆ’ ಎಂದು ಕರೆದರು. ಕಾಲಾನಂತರದಲ್ಲಿ  ಬೆಂಗಳೂರು ಮಹಾನಗರ ಪಾಲಿಕೆಯು ಈ ರಸ್ತೆಗೆ “ಸನ್ನಿಧಿ ರಸ್ತೆ’ ಎಂದು ನಾಮಕರಣ ಮಾಡಿತು.

 ಅಂಜನಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next