ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಜ.31ರಂದು ಸೇವೆಯಿಂದ ನಿವೃತ್ತರಾಗಲಿದ್ದು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ ( ಡಿಜಿ-ಐಜಿ) ಯಾರಾಗಲಿದ್ದಾರೆಂಬ ಕುತೂಹಲ ಗರಿಗೆದರಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಅರ್ಹ ರೆನಿಸಿದ 8 ಅಧಿಕಾರಿಗಳ ಪಟ್ಟಿಯನ್ನು ರಾಜ್ಯಸರ್ಕಾರ ಕೇಂದ್ರ ಲೋಕ ಸೇವಾ ಆಯೋಗಕ್ಕೆ ಕಳುಹಿಸಿದ್ದು, ಈ ಪಟ್ಟಿಯಲ್ಲಿ 30 ವರ್ಷ ಸೇವಾವಧಿ ಪೂರ್ಣಗೊಳಿಸಿರುವ ಹಾಗೂ 6 ತಿಂಗಳಿಗಿಂತ ಹೆಚ್ಚು ಸೇವಾವಧಿ ಬಾಕಿಯಿರುವ 8 ಅಧಿಕಾರಿಗಳ ಹೆಸರಿದೆ. ಆದರೆ, ಅಂತಿಮವಾಗಿ ಯುಪಿ ಎಸ್‌ಸಿ ಯಾವ ಅಧಿಕಾರಿ ಹೆಸರನ್ನು ವಾಪಸ್ ಕಳುಹಿಸಲಿದೆ ಎಂಬುದು ಹಾಗೂ ರಾಜ್ಯ ಸರ್ಕಾರ ತೀರ್ಮಾನದ ಮೇಲೆ ನೂತನ ಡಿಜಿ-ಐಜಿ ನೇಮಕ ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಕಳುಹಿಸಿರುವ ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್, ಪದಮ್ ಕುಮಾರ್ ಗರ್ಗ್, ಪ್ರವೀಣ್ ಸೂದ್ ಹೆಸರಿದ್ದು ಈ ಮೂವರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಯಿದೆ. ಈ ಪೈಕಿ ಸಿಐಡಿಯ ಹಾಲಿ ಡಿಜಿ ಪ್ರವೀಣ್ ಸೂದ್ ಅವರಿಗೆ ಹುದ್ದೆ ದೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆಂತರಿಕ ಭದ್ರತಾ ದಳದ ಡಿಜಿಪಿ ಅಶಿತ್ ಮೋಹನ್ ಪ್ರಸಾದ್ ಅವರು ಪದಮ್ ಕುಮಾರ್ ಗರ್ಗ್ ಹಾಗೂ ಪ್ರವೀಣ್ ಸೂದ್ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಹೊಂದಿದ್ದು, 2020ರ ಅಕ್ಟೋಬರ್‌ಗೆ ಸೇವೆ ಯಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ, ಡಿಜಿ-ಐಜಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿ ದ್ದಾರೆ.ನೇಮಕಾತಿ ಹಾಗೂ ತರಬೇತಿ ವಿಭಾಗದ ಡಿಜಿಪಿ ಪದಮ್ ಕುಮಾರ್ ಗರ್ಗ್ ಅವರು 2021ರಲ್ಲಿ ಸೇವೆಯಿಂದ ನಿವೃತ್ತರಾ ಗಲಿದ್ದು ಅವರೂ ನೂತನ ಡಿಜಿ- ಐಜಿ ನೇಮಕಾತಿಯ ಅರ್ಹ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ.
ಈ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಸಿಐಡಿ ಡಿಜಿ ಪ್ರವೀಣ್ ಸೂದ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಸೇವಾ ನಿವೃತ್ತಿ 2023ರಲ್ಲಿದೆ. ಒಂದು ವೇಳೆ ಪ್ರವೀಣ್ ಸೂದ್ ನೇಮಕಗೊಂಡರೆ ಮುಂದಿನ ನಾಲ್ಕು ವರ್ಷ ಡಿಜಿ-ಐಜಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುಪಿಎಸ್‌ಸಿ ಹಾಗೂ ರಾಜ್ಯಸರ್ಕಾರ ಅಧಿಕಾರಿಗಳ ಸೇವಾ ಹಿರಿತನ, ದಕ್ಷತೆ, ಬಡ್ತಿ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.