Advertisement
ಬಾಗಲಕೋಟೆ: ನಾಡಿನ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಜಿಲ್ಲೆಯ ಯಾವ ನಾಯಕರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಕುತೂಹಲ ಚರ್ಚೆ ನಿತ್ಯವೂ ನಡೆಯುತ್ತಿವೆ.
Related Articles
Advertisement
ಸಿಎಂ ಸ್ಥಾನ ತಪ್ಪಿದ್ದು ಹೇಗೆ?: ನಿರಾಣಿ ಅವರು ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೂ ಸಕ್ಕರೆ ಉದ್ಯಮ ವಿಸ್ತರಿಸಿ ಇಡೀ ದೇಶದಲ್ಲೇ ಯಶಸ್ವಿ ಉದ್ಯಮಿ ಎಂಬ ಹೆಸರೂ ಪಡೆದವರು. ಆ ಉದ್ಯಮದ ಮೂಲಕವೇ ಪಕ್ಷದ ರಾಷ್ಟ್ರೀಯ ನಾಯಕರಿಗೆ ಹತ್ತಿರವಾಗಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಲು ಕಾರಣವೂ ಆಗಿದೆ. ಕೇವಲ ಶಾಸಕರಾಗಿದ್ದುಕೊಂಡೇ ದೆಹಲಿ ಮಟ್ಟದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ನಿರಾಣಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು. ನಿರಾಣಿ ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತು ಅವರ ಮನೆತನ ಹಾಗೂ ಬೆಂಬಲಿಗರಲ್ಲಿದ್ದು, ಅದು ಹಲವು ಬಾರಿ ಉದ್ಯಮದಲ್ಲಿ ಯಶಸ್ವಿಯಾಗಿ ಕೇಳಿ ಬಂದಿದೆ. ಆದರೆ ಹಿಂದೆ ಯಡಿಯೂರಪ್ಪ ಅವರ ಮಾನಸಪುತ್ರನಂತಿದ್ದ ನಿರಾಣಿ ಅವರು ಕಳೆದ 2013ರ ಚುನಾವಣೆ ವೇಳೆ ಅವರೊಂದಿಗೆ ಕೆಜೆಪಿ ಸೇರದ ಹಿನ್ನೆಲೆಯಲ್ಲಿ ಈಗ ಅದೇ ಯಡಿಯೂರಪ್ಪ ಅವರು ನಿರಾಣಿಗೆ ಸಿಎಂ ಸ್ಥಾನ ತಪ್ಪಿಸಲು ಕಾರಣರಾದರೇ? ಎಂಬ ಚರ್ಚೆಯೂ ನಡೆಯುತ್ತಿದೆ.
ನೂತನ ಮುಖ್ಯಮಂತ್ರಿ ನೇಮಕದ ಹಿಂದಿನ ದಿನ ಸಿಎಂ ಸ್ಥಾನ ಸಂಪೂರ್ಣ ಖಚಿತ ಮಾಡಿಕೊಂಡೇ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ನಿರಾಣಿ ಅವರಿಗೆ ಮರುದಿನದ ಬೆಳವಣಿಗೆಯಲ್ಲಿ ಕೈ ತಪ್ಪಿ ಹೋಗಿದೆ.
ಚರಂತಿಮಠ-ದೊಡ್ಡನಗೌಡರ ಹೆಸರೂ ಮುಂಚೂಣಿ: ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಿಲ್ಲೆಯ ಹಿರಿಯ ನಾಯಕ ಗೋವಿಂದ ಕಾರಜೋಳರಿಗೆ ಸ್ಥಾನ ದೊರೆಯುವುದರಲ್ಲಿ ಸಂಶಯವಿಲ್ಲ. ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೂ ಅವರ ಹೆಸರು ಕೇಳಿ ಬರುತ್ತಿದೆಯಾದರೂ ರಾಜಕೀಯ ಲೆಕ್ಕಾಚಾರ, ವರ್ಗವಾರು ಕೋಟಾದಡಿ ಅವರಿಗೆ ಪ್ರಮುಖ ಹುದ್ದೆ ಮಾತ್ರ ದೊರೆಯಲಿದೆ. ಆದರೆ ಅವರ ಹೊರತಾಗಿ ಬಾಗಲಕೋಟೆಯ ಕ್ರಿಯಾಶೀಲ ಶಾಸಕ ಡಾ|ವೀರಣ್ಣ ಚರಂತಿಮಠ, ಹುನಗುಂದದ ದೊಡ್ಡನಗೌಡ ಪಾಟೀಲ ಅವರ ಹೆಸರೂ ಮುಂಚೂಣಿಯಲ್ಲಿದೆ. ತೇರದಾಳದ ಸಿದ್ದು ಸವದಿ ಕೂಡ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಚರಂತಿಮಠ ಅವರ ಹೆಸರು, ಸಚಿವ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ. ಯಾವುದೇ ಸ್ಥಾನ, ಜವಾಬ್ದಾರಿ ಕೊಟ್ಟರೂ ಸಶಕ್ತವಾಗಿ ನಿಭಾಯಿಸುತ್ತಾರೆಂಬ ಮಾತು ಅವರ ಹೆಸರಿಗಿದ್ದು, ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.