ಹೊಸದಿಲ್ಲಿ: ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಮುಂದಿನ ಆಯ್ಕೆ ಯಾರು ಎಂಬ ವಿಚಾರ ಕುತೂಹಲ ಮೂಡಿಸಿದೆ. ಜಾಮೀನು ಪಡೆದು ಹೊರ ಬಂದ ಬಳಿಕ ದಿಢೀರ್ ರಾಜೀನಾಮೆ ಘೋಷಣೆಯು ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಮುಖವಾಗಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮೂಡಿದ್ದು, ದೆಹಲಿ ಸಚಿವೆ ಅತಿಶಿ ಕೂಡ ರಾಜೀನಾಮೆ ಘೋಷಣೆ ಕುರಿತು ಪ್ರತಿಕ್ರಿಯಿಸಿದ್ದು, ”ಆಮ್ ಆದ್ಮಿ ಪಕ್ಷದ ಸರಕಾರ ಅಧಿಕಾರದಲ್ಲಿ ಉಳಿಯುವವರೆಗೂ ಜನರಿಗಾಗಿ ಕೆಲಸ ಮಾಡುತ್ತದೆ, ಮುಂದಿನ ದೆಹಲಿ ಸಿಎಂ ಯಾರು ಎಂಬುದು ಮುಖ್ಯವಲ್ಲ” ಎಂದು ಹೇಳಿದ್ದಾರೆ.
”ಕೇಜ್ರಿವಾಲ್ ಪ್ರಾಮಾಣಿಕತೆಗೆ ಹೊಸ ಉದಾಹರಣೆ ನೀಡಿದ್ದಾರೆ. ದೇಶದ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ನಾಯಕರೊಬ್ಬರ ಪ್ರಾಮಾಣಿಕತೆಯ ಮೇಲೆ ನಂಬಿಕೆ ಇದ್ದರೆ ಅವರಿಗೆ ಮತ ನೀಡಿ ಎಂದು ಸಚಿವೆ ಅತಿಶಿ ಮನವಿ ಮಾಡಿದರು. ದೆಹಲಿ ಚುನಾವಣೆಗೆ ಇನ್ನೂ 6 ತಿಂಗಳಿಗಿಂತ ಕಡಿಮೆ ಸಮಯ ಇದ್ದು ಜನರು ನಿರ್ಧರಿಸುತ್ತಾರೆ” ಎಂದರು.
“ಕಳೆದ ಎರಡು ವರ್ಷಗಳಿಂದ, ಹಲವಾರು ದಾಳಿಗಳನ್ನು ನಡೆಸಲಾಯಿತು, ಆದರೆ ಅವರು ಭ್ರಷ್ಟಾಚಾರದ ಒಂದು ಪುರಾವೆಯನ್ನು ನೀಡಲು ಸಾಧ್ಯವಾಗಲಿಲ್ಲ, ಬಿಜೆಪಿಗೆ ಚುನಾವಣೆಗಳ ಭಯವಿದೆ, ಕೇಜ್ರಿವಾಲ್ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು ಹೇಗೆ ಎಂಬುದು ಬಿಜೆಪಿಗೆ ತಿಳಿದಿದೆ, ದೆಹಲಿ ಜನರು ಆಕ್ರೋಶ ಗೊಂಡಿದ್ದಾರೆ. ಈಗ ಚುನಾವಣೆ ನಡೆದರೆ ದೆಹಲಿಯ ಜನರು ಒಂದೇ ಒಂದು ಸ್ಥಾನವನ್ನು ನೀಡುವುದಿಲ್ಲ ಎಂದು ಬಿಜೆಪಿಯವರಿಗೆ ತಿಳಿದಿದೆ. ಹಾಗಾಗಿ ಅವರು ಚುನಾವಣೆಯನ್ನು ಬಯಸುವುದಿಲ್ಲ. ಎಲ್ಲಾ 70 ಸ್ಥಾನಗಳು ಆಮ್ ಆದ್ಮಿ ಪಕ್ಷಕ್ಕೆ ಬರುತ್ತವೆ” ಎಂದು ಅತಿಶಿ ಹೇಳಿದರು.
ಸುನೀತಾಗೆ ಸಿಎಂ ಹುದ್ದೆ?
ಪತಿ ಜೈಲು ಸೇರಿಕೊಂಡಾಗಲೇ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ಆಮ್ ಆದ್ಮಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ.