Advertisement
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ ಸಮರ ಮುಗಿದು ಫಲಿತಾಂಶವೂ ಬಂದಾಗಿದೆ. ಇದೀಗ ಮಹಾಪೌರ, ಉಪಮಹಾಪೌರ ಯಾರೆಂಬ ಕುತೂಹಲ, ಲೆಕ್ಕಾಚಾರ ಶುರುವಾಗಿದ್ದು, ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ.
Related Articles
Advertisement
ಜೆಡಿಎಸ್ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅವರು ಸಭಾಪತಿ ಆಗಿರುವುದರಿಂದ ಪಕ್ಷದ ಪರ ಮತದಾನಕ್ಕೆ ಅವರು ಆಗಮಿಸುವುದು ಅನುಮಾನ. ಸದ್ಯದ ಪಾಲಿಕೆಯ ವಾಸ್ತವದ ಸ್ಥಿತಿ ಗಮನಿಸಿದರೆ ಕಾಂಗ್ರೆಸ್ ಅಧಿಕಾರ ಹಿಡಿಯವುದು ಕಷ್ಟ ಸಾಧ್ಯ. ಆಪರೇಷನ್ ಕಾಂಗ್ರೆಸ್ ನಡೆಸುವುದಾಗಿ ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷರು ಹೇಳಿದ್ದಾರೆಯಾದರೂ, ಅಂತಹ ಸನ್ನಿವೇಶವಂತೂ ಸದ್ಯಕ್ಕೆ ಕಾಣುತ್ತಿಲ್ಲ.
ಬಿಜೆಪಿಯಲ್ಲಿ ಪೈಪೋಟಿ: ಮಹಾಪೌರ-ಉಪಮಹಾಪೌರ ಸ್ಥಾನಕ್ಕೆ ಸರಕಾರ ಮೀಸಲಾತಿ ಘೋಷಣೆ ಮಾಡಿದ್ದರೂ, ಅಧಿಸೂಚನೆ ಹೊರಡಿಸಬೇಕಿದೆ. ಅನಂತರವೇ ಮಹಾಪೌರ- ಉಪ ಮಹಾಪೌರ ಆಯ್ಕೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ಮಹಾಪೌರ ಸ್ಥಾನಕ್ಕೆ ವೀರೇಶ ಅಂಚಟಗೇರಿ, ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಸತೀಶ ಹಾನಗಲ್ಲ, ಬೀರಪ್ಪ ಖಂಡೇಕಾರ ಅವರ ಹೆಸರು ಸುಳಿದಾಡುತ್ತಿವೆ. ವೀರೇಶ ಅಂಚಟಗೇರಿ ಅವರು ಎರಡನೇ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿದ್ದು, ಪಕ್ಷದಲ್ಲಿ ಹಲವು ವರ್ಷಗಳಿಂದ ಇರುವುದು, ಎರಡನೇ ಬಾರಿಗೆ ಆಯ್ಕೆಯಾಗಿದ್ದರಿಂದ ಮಹಾಪೌರ ಸ್ಥಾನಕ್ಕೆ ಒತ್ತಾಯಿಸುವ ಸಾಧ್ಯತೆ ಇದೆ. ಜತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಲ ಇವರಿಗೆ ದೊರೆಯುವ ಸಾಧ್ಯತೆ ಇದೆ. ರಾಮಣ್ಣ ಬಡಿಗೇರ ಅವರು ನಾಲ್ಕು ಬಾರಿ ಪಾಲಿಕೆಗೆ ಆಯ್ಕೆಯಾಗಿದ್ದು, ಹಿರಿತನ ಹಾಗೂ ಇಲ್ಲಿವರೆಗೂ ಹೆಚ್ಚಿನ ಅವಕಾಶ ಸಿಕ್ಕಿಲ್ಲವಾಗಿದ್ದು, ಈ ಬಾರಿ ಮಹಾಪೌರ ಸ್ಥಾನ ಬಿಸಿಎ ಗೆ ಮೀಸಲಾಗಿದ್ದು, ತಮಗೆ ಅವಕಾಶ ನೀಡಬೇಕೆಂಬ ಬೇಡಿಕೆ ಅವರದ್ದಾಗಬಹುದಾಗಿದೆ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದವರು ಆಗಿದ್ದಾರೆ. ತಿಪ್ಪಣ್ಣ ಮಜ್ಜಗಿ ಎರಡನೇ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ,ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉತ್ತಮ ನಂಟು ಇದೆ. ಇವರು ಸಹ ಮಹಾಪೌರ ಸ್ಥಾನಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ. ಆದರೆ, ತಿಪ್ಪಣ್ಣ ಮಜ್ಜಗಿ ಅವರ ಪತ್ನಿ ಪಾಲಿಕೆ ಸದಸ್ಯರಾಗಿದ್ದ ಅಶ್ವಿನಿ ಮಜ್ಜಗಿ ಅವರಿಗೆ ಮಹಾಪೌರ ಸ್ಥಾನ ನೀಡಿದ್ದರಿಂದ, ಮತ್ತೇ ಅದೇ ಕುಟುಂಬಕ್ಕೆ ಮಹಾಪೌರ ಸ್ಥಾನ ನೀಡಬೇಕೆಂಬ ಪ್ರಶ್ನೆ ಬಂದರೆ ಅದು ತಿಪ್ಪಣ್ಣ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಮೂರನೇ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿರುವ ಸತೀಶ ಹಾನಗಲ್ಲ, ಎರಡು ಬಾರಿ ಗೆದ್ದಿರುವ ಉಮೇಶ ಕೌಜಗೇರಿ, ಬೀರಪ್ಪ ಖಂಡೇಕಾರ ಅವರು ಸಹ ಮಹಾಪೌರ ಸ್ಥಾನ ಪಡೆಯಲು ತಮ್ಮದೇ ಯತ್ನ, ಒತ್ತಡ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮೂಲಗಳ ಪ್ರಕಾರ ಮಹಾಪೌರ ಸ್ಥಾನಕ್ಕೆ ಆರು ಜನ ಆಕಾಂಕ್ಷಿಗಳೂ ಇದ್ದರೂ ಪ್ರಮುಖವಾಗಿ ವೀರೇಶ ಅಂಚಟಗೇರಿ, ರಾಮಣ್ಣ ಬಡಿಗೇರ ಅವರ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವೀರೇಶ ಅಂಚಟಗೇರಿ ಅವರು ಶಾಸಕ ಅಮೃತ ದೇಸಾಯಿ ಅವರ ಧಾರವಾಡ ಗ್ರಾಮೀಣ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಬರಲಿದ್ದು, ರಾಮಣ್ಣ ಬಡಿಗೇರ ಶಾಸಕ ಅರವಿಂದ ಬೆಲ್ಲದ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಾರೆ. ಕೆಲ ಮೂಲಗಳ ಪ್ರಕಾರ ಜೆಡಿಎಸ್‌ನಿಂದ ರಾಜಣ್ಣಾ ಕೊರವಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವಾಗ ಮಹಾಪೌರರನ್ನಾಗಿ ಮಾಡಲಾಗುವುದು ಎಂಬ ಭರವಸೆ ನೀಡಲಾಗಿತ್ತೆಂದು ಹೇಳಲಾಗುತ್ತಿದ್ದು, ಅವರನ್ನು ಒಟ್ಟು ಐದು ವರ್ಷಗಳ ಅವಧಿಯಲ್ಲಿ ಒಂದು ಅವಧಿಗೆ ಅವರಿಗೆ ಅವಕಾಶ ಸಿಗುವುದೇ ಎಂದು ನೋಡಬೇಕಾಗಿದೆ.