ಪಿಂಗಾಳಿ ವೆಂಕಯ್ಯ… ದೇಶ ಎಂದಿಗೂ ಮರೆಯದಂಥ ಹೆಸರಿದು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಹಾಗೆಯೇ, ಭಾರತಕ್ಕೆ ತನ್ನದೇ ಆದ ಧ್ವಜವೊಂದನ್ನು ರೂಪಿಸಿಕೊಟ್ಟ ವ್ಯಕ್ತಿ. ಹಾಗೆಯೇ, ಇವರಿಗೆ ಧ್ವಜವೊಂದನ್ನು ಏಕೆ ರೂಪಿಸಬೇಕು ಎಂಬ ಐಡಿಯಾ ಬಂದಿದ್ದೇ ವಿಶೇಷ. ಇದಕ್ಕೆ ಕಾರಣವೂ ಇದೆ.
ತಮ್ಮ 19ನೇ ವಯಸ್ಸಿನಲ್ಲಿಯೇ ವೆಂಕಯ್ಯ ಅವರು, ದಕ್ಷಿಣ ಆಫ್ರಿಕಾಗೆ ಹೋದರು. ಬ್ರಿಟಿಷ್ ಸೇನೆಗೆ ಸೇರಿದ್ದ ಅವರು, ಬ್ರಿಟನ್ ಪರವಾಗಿ ಹೋರಾಡಲು ಅಲ್ಲಿಗೆ ಹೋಗಿದ್ದರು. ಅಲ್ಲಿ ಬ್ರಿಟಿಷ್ ಸೇನಾಧಿಕಾರಿ ಬ್ರಿಟನ್ ಧ್ವಜಕ್ಕೆ ವಂದಿಸುವಂತೆ ತನ್ನೆಲ್ಲ ಸೈನಿಕರಿಗೆ ಹೇಳುತ್ತಿದ್ದ. ಆದರೆ, ಪಿಂಗಾಳಿ ವೆಂಕಯ್ಯ ಅವರಿಗೆ ಇದು ಇಷ್ಟವಾಗಲಿಲ್ಲ. ಹೀಗಾಗಿ, ಅವರು ಭಾರತಕ್ಕೆ ವಾಪಸ್ ಹೋಗಿ, ಭಾರತಕ್ಕೆ ಒಂದು ಧ್ವಜ ರೂಪಿ ಸಬೇಕು ಎಂದುಕೊಂಡರು.
ಅಂದ ಹಾಗೆ ವೆಂಕಯ್ಯ ಅವರು ಕೇವಲ ಸೈನಿಕರಾಗಿ ರಲಿಲ್ಲ. ಅವರೊಬ್ಬ ರೈತ, ಉಪನ್ಯಾಸಕ, ಜಿಯಾಲಜಿಸ್ಟ್ ಕೂಡ ಆಗಿದ್ದರು.ಜಪಾನ್ ಭಾಷೆಯಲ್ಲೂ ಪರಿಣತರಾಗಿದ್ದ ಅವರು, ಜಪಾನ್ ವೆಂಕಯ್ಯ ಎಂದೇ ಪರಿಚಿತರಾಗಿದ್ದರು.
ವೆಂಕಯ್ಯ ಅವರು ಜನಿಸಿದ್ದು 1876, ಆ. 2ರಂದು. ಆಂಧ್ರಪ್ರದೇಶದ ಮಚಲಿಪಟ್ಟಣಂ ಬಳಿ ಇರುವ ಭಾಟ್ಲ ಪೆನುಮಾರು ಎನ್ನುವಲ್ಲಿ ಜನ್ಮ ತಾಳಿದ್ದರು. 19 ವರ್ಷವಿರುವಾಗ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಅವರು, ವಾಪಸ್ ಬಂದು ಧ್ವಜ ರೂಪಿಸಿದ್ದರು. 1921ರಲ್ಲಿ ಮೊದಲ ಬಾರಿಗೆ ಮಹಾತ್ಮ ಗಾಂಧಿಯವರಿಗೇ ಧ್ವಜ ನೀಡಿದ್ದರು. ಬಳಿಕ ಇದರ ವಿನ್ಯಾಸವನ್ನು ಬದಲಿಸಿಕೊಟ್ಟಿದ್ದರು.
ಅಂದ ಹಾಗೆ, 2009ರಲ್ಲಿ ವೆಂಕಯ್ಯ ಅವರ ಹೆಸರಿನಲ್ಲಿ ಕೇಂದ್ರ ಸರಕಾರ ಅಂಚೆ ಚೀಟಿಯೊಂದನ್ನು ತಂದಿದೆ. 2014ರಲ್ಲಿ ವಿಜಯವಾದ ರೈಲ್ವೇ ನಿಲ್ದಾಣ ಮತ್ತು ಅಲ್ಲಿನ ಆಕಾಶವಾಣಿಗೆ ಇವರ ಹೆಸರನ್ನು ಇಡಲಾಗಿದೆ. ಹಾಗೆಯೇ, ಈಗ ಅವರ ನೆನಪಿನಲ್ಲಿಯೇ ಆ. 2ರಿಂದ 15ರ ವರೆಗೆ ಮನೆ ಮನೆಯ ಮೇಲೆ ತಿರಂಗಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ ಆಗಿ ಬಳಸಿಕೊಳ್ಳುವಂತೆ ಮನವಿ ಮಾಡಿದೆ.