ಹಾಸನ: ದೇಶದ ಯುವಜನರ ವಿರೋಧದ ನಡುವೆಯೂ ಹಠಕ್ಕೆ ಬಿದ್ದು ಅಗ್ನಿಪಥ್ ಯೋಜನೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದು, ಈಗಿರುವ ಹಳೆಯ ವ್ಯವಸ್ಥೆಯಲ್ಲಿ ಇಲ್ಲಿಯವರೆಗೂ ದೇಶದ ರಕ್ಷಣೆ ಮಾಡಲಿಲ್ಲವೆ? ಅಗ್ನಿಪಥ್ ಯೋಜನೆ ಯಾರು ತರಲು ಹೇಳಿದರು? ಯಾವ ಉದ್ದೇಶದಿಂದ ತರುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿ, ಯಾರನ್ನು ಕೇಳಿ ಅಗ್ನಿಪಥವನ್ನು ಜಾರಿ ಮಾಡುತ್ತಿದ್ದೀರಿ? ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಶಿಫಾರಸು ಮಾಡಿತ್ತಾ? ಅಥವಾ ಈ ಯೋಜನೆಯನ್ನು ಜಾರಿಗೆ ತನ್ನಿ ಎಂದು ಸೇನೆ ಏನಾದರೂ ಶಿಫಾರಸು ಮಾಡಿತ್ತಾ? ಈ ಬಗ್ಗೆ ಕೇಂದ್ರ ಸರಕಾರ ದೇಶಕ್ಕೆ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು.
ಯಾವ ಉದ್ದೇಶದಿಂದ ಏಕಾಏಕಿ ಹತ್ತು ಲಕ್ಷ ಜನ ಯುವಕರಿಗೆ ಕೆಲಸ ಕೊಡುತ್ತಿದ್ದೀರಿ? ಕ್ಷೌರದ ಶಾಪ್ ತೆರೆಯಲು ಮಿಲಿಟರಿಗೆ ಇವರನ್ನು ತೆಗೆದುಕೊಳ್ಳುತ್ತಾರೆ ಎಂದು ಕೆಲ ಬಿಜೆಪಿ ನಾಯಕರೇ ಹೇಳಿದ್ದಾರೆ. ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಲ್ಲಿಗೆ ಕರೆದುಕೊಂಡು ಹೋಗಿ ಟ್ರೈನಿಂಗ್ ಕೊಡಬೇಕಾ? ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಗ್ನಿವೀರರು ಅಂತ ಸರ್ಟಿಫಿಕೇಟ್ ಕೊಡಬೇಕಾ? ಅಗ್ನಿಪಥ ಎನ್ನುವುದು ಆರ್ಎಸ್ಎಸ್ ಐಡಿಯಾ. ಅವರ ಚಟುವಟಿಕೆಗಳನ್ನು ಸೇನೆಯೊಳಕ್ಕೆ ನುಸುಳುವಂತೆ ಮಾಡಲು ಅಗ್ನಿಪಥ್ ಜಾರಿಗೆ ತರಲಾಗುತ್ತಿದೆ. ಹಿಂದೆ ಹಿಟ್ಲರ್ ಕಾಲದಲ್ಲಿ ಇದ್ದ ನಾಜಿ ಪಡೆಯನ್ನು ಭಾರತದಲ್ಲಿ ಈಗ ತರುವಂತಹ ಒಂದು ಪ್ರಾಯೋಗಿಕವಾದ ಕಾರ್ಯಕ್ರಮ ಇದಾಗಿದೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ : ಪಂಚಮಸಾಲಿ ಹೋರಾಟ : ಸಚಿವ ಸಿ.ಸಿ.ಪಾಟೀಲ್ ನಿವಾಸದಲ್ಲಿ ಸಂಧಾನ ಸಭೆ
ವಿಚಾರಣೆ ನೆಪದಲ್ಲಿ ರಾಹುಲ್ ಗಾಂಧಿಗೆ ಕಿರುಕುಳ
ಇ ಡಿ ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಮಾಹಿತಿ ತೆಗೆದುಕೊಳ್ಳಲು ನಿರಂತರವಾಗಿ ವಿಚಾರಣೆಗೆ ಕರೆಯುತ್ತಿದ್ದಾರೆ. ವಿಚಾರಣೆ ಮಾಡಲು ಐದು ದಿನಗಳು ಬೇಕಾ? ಎಲ್ಲಾ ದಾಖಲಾತಿಗಳೂ ಇಡಿ ಬಳಿಯೇ ಇರುತ್ತವೆ. ಅರ್ಧ ಗಂಟೆಯಲ್ಲೇ ಎಲ್ಲಾ ವಿಚಾರಣೆ ಮಾಡಿ ಮುಗಿಸಬಹುದು ಎಂದರು.