ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಹುಎಚ್ ಒ) ಕೋವಿಡ್ ಡ್ಯಾಶ್ ಬೋರ್ಡ್ ನ ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನ ಮತ್ತು ಚೀನಾದ ಭಾಗ ಎಂದು ತೋರಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತೃಣಮೂಲ ಕಾಂಗ್ರೆಸ್ ಸಂಸದ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಎಲ್.ಆರ್. ಶಿವರಾಮೇಗೌಡರನ್ನು ಪಕ್ಷದಿಂದ ಹೊರ ಹಾಕಿ: ಗುಡುಗಿದ ಹೆಚ್ ಡಿಕೆ
ಟಿಎಂಸಿ ಸಂಸದ ಸಂತನು ಸೇನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಈ ಕುರಿತು ಭಾನುವಾರ ಟ್ವೀಟ್ ಮಾಡಿರುವುದಾಗಿ ಹೇಳಿದೆ.
WHO COVID //19.in ಸೈಟ್ ನಲ್ಲಿನ ಭಾರತದ ಭೂಪಟದಲ್ಲಿ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ಬಣ್ಣದಲ್ಲಿ ತೋರಿಸಿದ್ದು, ಒಂದು ಭಾಗ ಪಾಕಿಸ್ತಾನ ಹಾಗೂ ಮತ್ತೊಂದು ಭಾಗವನ್ನು ಚೀನಾ ಎಂಬಂತೆ ಬಿಂಬಿಸಲಾಗಿದೆ ಎಂದು ಸೇನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ವಸಂಸ್ಥೆಯ ಕೋವಿಡ್ ಡ್ಯಾಶ್ ಬೋರ್ಡ್ ನ ಭಾರತದ ಭೂಪಟದಲ್ಲಿ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನ ಮತ್ತು ಚೀನಾದ ಭಾಗ ಎಂದು ಬಿಂಬಿಸಿರುವ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಂತಹ ದೊಡ್ಡ ಪ್ರಮಾದವನ್ನು ಇಷ್ಟು ದಿನಗಳ ಕಾಲ ಹೇಗೆ ನಿರ್ಲಕ್ಷಿಸಲಾಯಿತು ಎಂದು ಕೇಂದ್ರ ಸರ್ಕಾರ ಜನತೆಗೆ ಮಾಹಿತಿ ನೀಡಬೇಕೆಂದು ಸೇನ್ ಪತ್ರದಲ್ಲಿ ಆಗ್ರಹಿಸಿದ್ದಾರೆ.