ಹೊಸದಿಲ್ಲಿ: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ನಿರ್ಮಿಸಿಕೊಂಡಿರುವ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ರಾಷ್ಟ್ರದ ಪ್ರತಿನಿಧಿ ಸ್ವಿಜರ್‌ಲ್ಯಾಂಡ್‌ನ ಜಿನಿವಾದಲ್ಲಿ ಕಳೆದ ವಾರ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿ ,ಭಾರತದಿಂದ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ನಿತ್ಯಾನಂದನ ಪ್ರತಿನಿಧಿಗಳು ಆರೋಪಿಸಿದ್ದರು.
ನಿತ್ಯಾನಂದನ ಪರವಾಗಿ ಧ್ವನಿ ಎತ್ತಿದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ರಾಷ್ಟ್ರದ ಪ್ರತಿನಿಧಿಗಳಲ್ಲಿ ಒಬ್ಬಾಕೆಯ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿತ್ತು. ಅಪ್ಪಟ ಹಿಂದೂ ಮಹಿಳೆಯಂತೆ ಸೀರೆಯುಟ್ಟು, ಸಂಪ್ರದಾಯವನ್ನು ಅನುಸರಿಸುವಂತೆ, ನಿತ್ಯಾನಂದನ ಪಟ್ಟ ಶಿಷ್ಯೆಯಂತೆ ಕಾಣುತ್ತಿದ್ದ ಮಹಿಳೆಯ ಹೆಸರು ವಿಜಯಪ್ರಿಯಾ ನಿತ್ಯಾನಂದ.
ಮಹಿಳೆಯರಿಗೆ ಕಿರುಕುಳ, ಕಿಡ್ನ್ಯಾಪ್ ನಂತಹ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸದ್ಯ ತಮ್ಮದೇ ದೇವ ಲೋಕ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼದಲ್ಲಿದ್ದಾರೆ. ಈ ಕೈಲಾಸಕ್ಕೆ ಅಪಾರ ಭಕ್ತರು, ಹಿಂಬಾಲಕರಿದ್ದಾರೆ. ಆಯಾ ದೇಶದಲ್ಲಿ ಇದಕ್ಕೆ ಪ್ರತಿನಿಧಿಗಳೂ ಇದ್ದಾರೆ.
ವಿಶ್ವಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ“ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼ ಪ್ರತಿನಿಧಿಗಳು ಭಾಗಿಯಾಗಿದ್ದರು. ಈ ವೇಳೆ ಭಾರತದಿಂದ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿನಿಧಿ ಆರೋಪಿದ್ದರು. ಜತೆಗೆ ಹಿಂದೂಗಳಿಗಾಗಿ ಸ್ಥಾಪಿಸಲಾಗಿರುವ ಮೊದಲ ಸಾರ್ವಭೌಮ ರಾಷ್ಟ್ರ ಎಂದಿದ್ದರು.
ಹೀಗೆ ಅಂದವರು ವಿಜಯಪ್ರಿಯಾ ನಿತ್ಯಾನಂದ ಎಂದು ಕರೆಸಿಕೊಳ್ಳುವ ಮಹಿಳೆ. ಈ ಮಹಿಳೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಾರು ಈ ವಿಜಯಪ್ರಿಯಾ ನಿತ್ಯಾನಂದ: ಫೇಸ್ ಬುಕ್ ಖಾತೆಯಲ್ಲಿ ಈಕೆ ಕೈಲಾಸದ ಖಾಯಂ ರಾಯಭಾರಿ ಎಂದು ಬರೆದುಕೊಂಡಿದ್ದಾರೆ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ವಾಸ ಎನ್ನುವುದನ್ನು ಬರೆದುಕೊಂಡಿದ್ದಾಳೆ. ಫೇಸ್ ಬುಕ್ ನಲ್ಲಿ ಭಾರತೀಯ ಹೆಣ್ಣಿನಂತೆ ಸೀರೆಯುಟ್ಟ ಫೋಟೋದೊಂದಿಗೆ ವೆಸ್ಟರ್ನ್ ಮಾದರಿಯ ಫೋಟೋ ಈಕೆ ಹಂಚಿಕೊಂಡಿದ್ದಾರೆ. ಕೈಯಲ್ಲಿ ನಿತ್ಯಾನಂದನ ಟ್ಯಾಟೋ ಹಾಕಿಕೊಂಡಿದ್ದಾರೆ. ನಿತ್ಯಾನಂದನ ಪ್ರತಿಯೊಂದು ಧಾರ್ಮಿಕ ಸೆಷನ್ಸ್ ಗಳನ್ನು ಹಂಚಿಕೊಂಡಿದ್ದಾರೆ.
ವಿಜಯಪ್ರಿಯಾ ನಿತ್ಯಾನಂದ ಅವರು ಈ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಪರವಾಗಿ ಹಲವಾರು ಸಂಸ್ಥೆಗಳೊಂದಿಗೆ ಮಾಡುವ ಒಪ್ಪಂದಗಳನ್ನು ನೋಡಿಕೊಳ್ಳುತ್ತಾರೆ ಎಂದು ʼಕೈಲಾಸʼದ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.
ಹಲವು ದೇಶಗಳ ಪ್ರತಿನಿಧಿಗಳೊಂದಿಗೆ ವಿಜಯಪ್ರಿಯಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಶ್ವದ ಹಲವಾರು ದೇಶಗಳಲ್ಲಿ ರಾಯಭಾರಿ ಕಚೇರಿಗಳು ಮತ್ತು ಎನ್‌ಜಿಒಗಳನ್ನು ʼಕೈಲಾಸʼ ತೆರೆದಿದೆ ಎಂದು ವಿಜಯಪ್ರಿಯಾ ಹೇಳಿದ್ದಾರೆ.
ಕೈಲಾಸದ ಮುಖ್ಯಸ್ಥೆ ಮುಕ್ತಿಕಾ ಆನಂದ, ಕೈಲಾಸದ ಸಂತ ಲೂಯಿಸ್ ಮುಖ್ಯಸ್ಥೆ ಸೋನಾ ಕಾಮ, ಕೈಲಾಸದ ಯುಕೆಯ ಮುಖ್ಯಸ್ಥೆ ನಿತ್ಯಾ ಆತ್ಮದಯಕಿ, ಕೈಲಾಸದ ಫ್ರಾನ್ಸ್ ಮುಖ್ಯಸ್ಥೆ ನಿತ್ಯ ವೆಂಕಟೇಶಾನಂದ, ಕೈಲಾಸ ಸ್ಲೋವೇನಿಯನ್ ಮಾ ಪ್ರಿಯಾಂಪರ ನಿತ್ಯಾನಂದ ಮುಂತಾದ ಪ್ರತಿನಿಧಿಗಳು ಕೂಡ ಭಾಗಿಯಾಗಿದ್ದರು.