Advertisement

ಸುರಪುರದಲ್ಲಿ ಈ ಬಾರಿ ನಾಯಕ ಯಾರು?

03:51 PM Apr 03, 2018 | |

ಸುರಪುರ: ಜಿದ್ದಾಜಿದ್ದಿ ಚುನಾವಣೆಗೆ ಹೆಸರುವಾಸಿಯಾಗಿರುವ ಅತೀ ಸೂಕ್ಷ್ಮ ಮತಕ್ಷೇತ್ರವೆಂದು ಬಿಂಬಿತವಾಗಿರುವ ಸುರಪುರ ಮತಕ್ಷೇತ್ರ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ, ರಾಜುಗೌಡ ಅವರನ್ನು ಆಯ್ಕೆ ಮಾಡಿ ಕಳುಹಿಸಿದ ಹೆಗ್ಗಳಿಕೆ ಹೊಂದಿದೆ. ಮತಕ್ಷೇತ್ರದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಾಲ್ಮೀಕಿ ನಾಯಕ ಜನಾಂಗದ ಮತದಾರರು ಎರಡನೇ ಸ್ಥಾನದಲ್ಲಿದ್ದು, ಮುಸ್ಲಿಂ, ದಲಿತ ಮತ್ತು ಲಿಂಗಾಯತರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 1952ರಲ್ಲಿ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮಾಜದ ಕೊಲೂರು ಮಲ್ಲಪ ಹೊರತು ಪಡಿಸಿದರೆ, ಇದುವರೆಗೂ ಇಲ್ಲಿ ಎಸ್ಟಿ ಜನಾಂಗದವರೇ ಚುನಾಯಿತರಾಗುತ್ತಾ ಬಂದಿದ್ದಾರೆ. 

Advertisement

2008ರಲ್ಲಿ ಇದು ಎಸ್ಟಿ ಮೀಸಲು ಕ್ಷೇತ್ರವಾಗಿ ಘೊಷಣೆಯಾಗಿದ್ದು, ಸದ್ಯ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿದ್ದಾರೆ. ಸ್ವಾತಂತ್ರ್ಯ ನಂತರ ಇದುವರೆಗೂ ಎಸ್ಟಿ ಜನಾಂಗದವರೇ ಆಡಳಿತ ನಡೆಸಿರುವುದು ಕ್ಷೇತ್ರದ ಇನ್ನೊಂದು ವಿಶೇಷತೆಯಾಗಿದೆ. ರಾಜಾ ಮದನಗೋಪಾಲ ನಾಯಕ ಸತತ ಮೂರು ಬಾರಿ ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜೂಗೌಡ ಎರಡು ಬಾರಿ ಶಾಸಕರಾಗಿದ್ದು, ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಮೂರನೇ ಬಾರಿಗೆ ಮತ್ತೆ ಚುನಾಯಿತರಾಗಿ ಶಾಸಕರಾಗಿದ್ದಾರೆ.

ನಗರಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು, ಹೈಟೆಕ್‌ ಬಸ್‌ ನಿಲ್ದಾಣ, ನಗರದ ಸರಕಾರಿ ಆಸ್ಪತ್ರೆಗೆ ಕಾಯಕಲ್ಪ ಹೈಟೆಕ್‌ ಚಿಕಿತ್ಸಾ ಸೌಲಭ್ಯ, ತಾಂತ್ರಿಕ ಮತ್ತು ಬಿ.ಇಡಿ ಕಾಲೇಜು ಮಂಜೂರು, ಬೂದಿಹಾಳ, ಬಪ್ಪರಗಿ, ಹಗರಟಗಿ ಏತ ನೀರಾವರಿ ಅನುಷ್ಠಾನ, ಪಿಕಪ್‌ ಡ್ಯಾಂಗಳ ನಿರ್ಮಾಣ ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ನೀರಾವರಿ ವಂಚಿತ ಗ್ರಾಮಗಳಿಗೆ ನೀರು ಒದಗಿಸಲು ಆಸಕ್ತಿ ತೋರಿಲ್ಲ. ಸ್ಥಗಿತಗೊಂಡ ಏತ ನೀರಾವರಿಗಳ ಆರಂಭಕ್ಕೆ ಶ್ರಮಿಸಿಲ್ಲ, ಪಿಕಪ್‌ ಡ್ಯಾಂ ನಿರ್ಮಾಣಕ್ಕೆ ಮುಂದಾಗಿಲ್ಲ, ಗ್ರಾಮೀಣ ರಸ್ತೆಗಳ ಸುಧಾರಣೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ಹಿಂದೇಟು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ಗುಡಿ ಕೈಗಾರಿಕೆಗಳ ಸ್ಥಾಪನೆಯಾಗಿಲ್ಲ. ಹೆರಿಗೆ ಆಸ್ಪತ್ರೆ ನಿರ್ಮಾಣವಾಗಿಲ್ಲ. ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ

ಕ್ಷೇತ್ರದ ಬೆಸ್ಟ್‌ ಏನು?
ಹುಣಸಗಿ ನೂತನ ತಾಲೂಕು ರಚನೆ, ನೀಲಕಂಠರಾಯನ ಗಡ್ಡಿಗೆ ಬ್ರಿಜ್‌ ಮಂಜೂರು, ಕಕ್ಕೇರಾ ಗ್ರಾಪಂನ್ನು ಪುರಸಭೆಯನ್ನಾಗಿ ಮತ್ತು ಸುರಪುರ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಬಸ್‌ ನಿಲ್ದಾಣ, ಡಿವೈಎಸ್ಪಿ ಕಚೇರಿ, ಹಳ್ಳಿ ಮತ್ತು ತಾಂಡಗಳಿಗೆ ವಿದ್ಯುತ್‌ ಸಂಪರ್ಕ, ಗ್ರಾಮೀಣ ಪ್ರದೇಶಗಳಲ್ಲಿ ಸಿಸಿ ರಸ್ತೆ, ಪ್ರಾಥಮಿಕ, ಪ್ರೌಢಶಾಲೆ, ವಸತಿ ಶಾಲೆಗಳ ಮಂಜೂರಾತಿ, ಅಲ್ಪಸಂಖ್ಯಾತರ ಅನುಕೂಲಕ್ಕಾಗಿ 7 ಶಾದಿ ಮಹಲ್‌ ನಿರ್ಮಿಸಲಾಗಿದೆ.

Advertisement

ಕ್ಷೇತ್ರದ ದೊಡ್ಡ ಸಮಸ್ಯೆ?
ತಾಲೂಕಿನಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಶೌಚಾಲಯ ಸಮಸ್ಯೆ ಎಲ್ಲೂ ನೀಗಿಲ್ಲ,
ವಿವಿಧ ವಸತಿ ಯೋಜನೆ ಸಮರ್ಪಕವಾಗಿಲ್ಲ. ನಾರಾಯಣಪುರ ಜಲಾಶಯವಿದ್ದರೂ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಗ್ರಾಮೀಣ ರಸ್ತೆಗಳು ಹದಗೆಟ್ಟು ಹೋಗಿವೆ. ನಗರದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ. ಖಾತ್ರಿ ಯೋಜನೆ ವಿಫಲಗೊಂಡಿದ್ದು ಕಾರ್ಮಿಕರಿಗೆ ಉದ್ಯೋಗ ಭದ್ರತೆ ಮತ್ತು ಕೆಲಸ ಸಿಗದ ಕಾರಣ ಗುಳೆ ಸಮಸ್ಯೆ ಅಧಿಕವಾಗಿದೆ.

ಶಾಸಕರು ಏನಂತಾರೆ
ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಶಾದಿ ಮಹಲ್‌, ಕಲ್ಯಾಣ ಮಂಟಪ ನಿರ್ಮಿಸಿದ್ದೇನೆ. ಶಾಲಾ ಕಾಲೇಜುಗಳ ಮಂಜೂರಾತಿ, ಬಸ್‌ ನಿಲ್ದಾಣ ಸೇರಿದಂತೆ ಅನೇಕ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಿದ್ದೇನೆ.
ರಾಜಾ ವೆಂಕಟಪ್ಪ ನಾಯಕ 

ಕ್ಷೇತ್ರ ಮಹಿಮೆ
ಕ್ಷೇತ್ರದಲ್ಲಿ ವೇಣುಗೋಪಾಲ ಸ್ವಾಮಿ, ತಿಂಥಣಿಯ ಮೌನೇಶ್ವರ, ಕೊಡೇಕಲ್‌ ಬಸವೇಶ್ವರ ಸೇರಿದಂತೆ ಭಾವೈಕ್ಯತೆಯ ಅನೇಕ ತಾಣಗಳನ್ನು ಹೊಂದಿದೆ. ಜೈಮಿನಿ ಭಾರತದ ಕತೃ ಕವಿ ದೆವಾಪುರದ ಲಕ್ಷ್ಮೀಶ, ಹಾವಿನಾಳದ ಕಲ್ಲಯ್ಯ, ಕೆಂಭಾವಿಯ ಭೋಗಣ್ಣ, ಮುದನೂರಿನ ದೇವರ ದಾಸಿಮಯ್ಯ ಸೇರಿದಂತೆ ಅನೇಕ ವಚನಕಾರರಿಗೆ ಜನ್ಮನೀಡಿದ ಕರ್ಮಭೂಮಿಯಾಗಿ ನಾಡಿನಾದ್ಯಂತ ಹೆಸರುವಾಸಿಯಾಗಿದೆ. ನಾರಾಯಣಪುರದಲ್ಲಿ ಬಸವಸಾಗರ ಜಲಾಶಯ ರಾಜ್ಯದ ಗಮನ ಸೆಳೆದಿದೆ.

ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ನಾಯಕ ಜನಾಂಗದವರೇ ಚುನಾಯಿತರಾಗಿ ಅಧಿಕಾರಕ್ಕೆ ಬಂದಿದ್ದಾರೆ. ಅವರ್ಯಾರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ. 60 ವರ್ಷಗಳಿಂದ ನಗರದ ಕುಡಿವ ನೀರಿನ ಸಮಸ್ಯೆ ನೀಗಿಸಲಾಗಿಲ್ಲ, ಆರೋಗ್ಯ ಚಿಕಿತ್ಸೆ ಮತ್ತು ವಿದ್ಯುತ್‌ ಸರಬರಾಜು ಸಮರ್ಪಕವಾಗಿಲ್ಲ. ಅನೇಕ ಗ್ರಾಮಗಳು ಮೂಲ ಸೌಕರ್ಯಗಳಿಂದ ನರಳುತ್ತಿವೆ. 
ಉಸ್ತಾದ ವಜಾಹತ್‌ ಹುಸೇನ್‌

ನಾರಾಯಣಪುರ ಜಲಾಶಯವಿದ್ದರೂ ಕಾಲುವೆಗೆ ಸರ್ಮಕವಾಗಿ ನೀರು ಹರಿಸುತ್ತಿಲ್ಲ. ಸಾಕಷ್ಟು ಭೂಮಿ ನೀರಾವರಿಯಿಂದ ವಂಚಿತವಾಗಿದೆ. ರೈತರ ಬಗ್ಗೆ ಸರಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ ಹೊರತು ನಿಜವಾದ ಕಾಳಜಿ ತೋರುತ್ತಿಲ್ಲ. ರೈತರಿಗೆ ನೆರವಾಗಬೇಕಿದ್ದ ಖರೀದಿ ಕೇಂದ್ರಗಳು ದಲ್ಲಾಳಿಗಳ ಕೈ ಹಿಡಿದಿವೆ.
ಮಲ್ಲಿಕಾರ್ಜುನ ಸತ್ಯಂಪೇಟ

ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ. ಸರ್ಕಾರದ ಯೋಜನೆಗಳು ಬಡವರಿಗೆ ತಲುಪದೆ ಉಳ್ಳವರ ಪಾಲಾಗಿವೆ. ವಸತಿ ಯೋಜನೆಗಳು ವಿಫಲವಾಗಿವೆ. ಖಾತ್ರಿ ಯೋಜನೆ ಹಳ್ಳ ಹಿಡಿದೆ. ವಿವಿಧ ಯೋಜನೆ ಅಡಿಯಲ್ಲಿ ಬಡವರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಅಧಿಕಾರಿಗಳಿಂದ ಸಮಸ್ಯೆಗೆ ಸ್ಪಂದನೆ ಸಿಗತ್ತಿಲ್ಲ. 
ವೆಂಕೋಬ ದೊರೆ

ನಗರಸಭೆಯಲ್ಲಿನ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ಶೌಚಾಲಯ ನಿರ್ಮಾಣ ಗುರಿ ತಲುಪಲಾಗಿಲ್ಲ. ವಸತಿ ಯೋಜನೆ ಸಮರ್ಪಕವಾಗಿಲ್ಲ. ಕುಡಿಯುವ ನೀರು ಸಮರ್ಪಕ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ನೀಗಿಸಲಾಗಿಲ್ಲ. ಒಟ್ಟಾರೆ ನಗರದ ಅಭಿವೃದ್ಧಿಗೆ ಆದ್ಯತೆ ಸಿಕ್ಕಿಲ್ಲ.
ಪಾರಪ್ಪ ಗುತ್ತೇದಾರ

ರಾಜೇಶ್‌ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next