Advertisement

ನೀರಿನ ಸಮಸ್ಯೆ ನಿವಾರಣೆಗೆ ಒತ್ತು ಕೊಡಿ

10:17 AM Feb 26, 2019 | Team Udayavani |

ಚಳ್ಳಕೆರೆ: ತಾಲೂಕಿನ 46ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನು ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಸೂಚಿಸಿದರು.

Advertisement

ಸೋಮವಾರ ಇಲ್ಲಿನ ತಾಲೂಕು ಪಂಚಾಯತ್‌ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಿರಂತರ ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕೆಲಸವಿಲ್ಲದಂತಾಗಿದೆ. ಹಾಗಾಗಿ ಹಸಿದ ಹೊಟ್ಟೆಗಳಿಗೆ ಕೂಲಿ ಕಾಳು ಒದಗಿಸುವ ಉದ್ಯೋಗ
ಖಾತ್ರಿಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಇಂತಹ ಸಮಯದಲ್ಲಿ ಸಾರ್ವಜನಿಕರ ಆಕ್ರೋಶ ಮತ್ತು ಅಸಮಾಧಾನವನ್ನು ಸಮಾಧಾನದಿಂದ ತಣಿಸಬೇಕು ಎಂದರು. 

 ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಜಾಗರೂಕತೆ ವಹಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಿದ್ದು, ಜನರು ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಸಿ ನೀರು ಕೊಡಬೇಕು. ಸಾಧ್ಯವಾಗದೇ ಇದ್ದಲ್ಲಿ ಟ್ಯಾಂಕರ್‌ ಮೂಲಕವಾದರೂ ನೀರು ಪೂರೈಸಬೇಕು.

ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಜನಪ್ರತಿನಿಧಿಗಳು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮಾಡಿದಾಗ ತಪ್ಪದೇ ಸ್ವೀಕರಿಸಬೇಕು. ಹಲವು ಸಂದರ್ಭಗಳಲ್ಲಿ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲವೆಂಬ ಆರೋಪವಿದೆ. ಮುಂದಿನ ದಿನಗಳಲ್ಲಿ ಇಂತಹ ಆರೋಪಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದರು.

ಸಹಾಯಕ ಕೃಷಿ ನಿರ್ದೇಶಕ ಎನ್‌. ಮಾರುತಿ ಮಾಹಿತಿ ನೀಡಿ, ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 45 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು, 56.50 ಕೋಟಿ ರೂ. ಬೆಳೆ ವಿಮೆ ನಿರೀಕ್ಷಿಸಲಾಗಿದೆ. 35 ಸಾವಿರ ಸಣ್ಣ ರೈತರ ಪೈಕಿ 10 ಸಾವಿರ ಸಣ್ಣ ರೈತರು ಈಗಾಗಲೇ ಪರಿಹಾರ ಪಡೆದಿದ್ದಾರೆ. ಬೆಳೆ ವಿಮೆ ಕುರಿತಂತೆ 2600 ರೈತರು ಹೆಸರು ನೊಂದಾಯಿಸಿದ್ದು, 1600 ರೈತರು ಪರಿಹಾರ ಪಡೆಯಬೇಕಿದೆ. ಫೆ. 27ರಂದು ಕೇಂದ್ರ
ಬರ ಅಧ್ಯಯನ ತಂಡ ಆಗಮಿಸಿ ಮತ್ತೂಮ್ಮೆ ಸಮೀಕ್ಷೆ ನಡೆಸಲಿದೆ ಎಂದರು.

Advertisement

ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವಾರು ತಿಂಗಳುಗಳಿಂದ ದುರಸ್ತಿಯಾಗದೇ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಯನ್ನು ಕೂಡಲೇ ಮಾಡುವಂತೆ ಶಾಸಕರು ಸೂಚನೆ ನೀಡಿದರು. ಘಟಕಗಳ ದುರಸ್ಥಿಗೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ್‌ ಅಧಿಕಾರಿಗಳು ತಕ್ಷಣ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮತ್ತು ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳ ಸಭೆಯನ್ನು ನಡೆಸುವಂತೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್‌ ಅಧ್ಯಕ್ಷೆ ಕವಿತಾ ರಾಮಣ್ಣ ಮಾತನಾಡಿ, ಪ್ರತಿ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ತಾಪಂ ಸದಸ್ಯರು ಸೂಚನೆ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಪ್ರತಿಯೊಬ್ಬ ಅಧಿಕಾರಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವಾಗ ಮತ್ತು ವಿವಿಧ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಸಂಬಂಧಪಟ್ಟ ತಾಪಂ ಸದಸ್ಯರಿಗೆ ಮಾಹಿತಿ ನೀಡಬೇಕೆಂದರು.  ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್‌. ಈಶ್ವರಪ್ರಸಾದ್‌, ಎಲ್ಲಾ ಅಧಿಕಾರಿಗಳು ಸಭೆಯ ನಿರ್ಣಯಗಳಿಗೆ ಬದ್ಧರಾಗಿರಬೇಕು ಎಂದು ತಿಳಿಸಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ತಿಪ್ಪಮ್ಮ ಲಿಂಗಾರೆಡ್ಡಿ, ಸದಸ್ಯರಾದ ಸಣ್ಣಸೂರಯ್ಯ, ಗದ್ದಿಗೆ ತಿಪ್ಪೇಸ್ವಾಮಿ, ಎಚ್‌. ಸಮರ್ಥರಾಯ, ತಿಮ್ಮಾರೆಡ್ಡಿ, ಕಾಲುವೇಹಳ್ಳಿ ಶ್ರೀನಿವಾಸ್‌, ಎಸ್‌.ಒ. ತಿಪ್ಪೇಸ್ವಾಮಿ, ಎಚ್‌. ಆಂಜನೇಯ, ಜಿ. ತಿಪ್ಪೇಸ್ವಾಮಿ, ಗಂಗೀಬಾಯಿ, ಹನುಮಕ್ಕ, ರಂಜಿತಾ, ತಿಪ್ಪಕ್ಕ, ಉಮಾ, ಸುನಂದಮ್ಮ, ರತ್ನಮ್ಮ, ಜಿ. ವೀರೇಶ್‌, ಮಲ್ಲಮ್ಮ, ಸಾಕಮ್ಮ, ಕರಡಪ್ಪ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next