Advertisement
ನ್ಯಾಯ ಎಲ್ಲಿದೆ?ಯಾವ ನಿಟ್ಟಿನಿಂದ ನೋಡಿದರೂ ಆರ್‌ಟಿಇ ಅಪಾಯದ ಅಲಗಿನಂತೆಯೇ ಕಾಣುತ್ತದೆ. ಸಮಾಜದ ಬಡ ಮಕ್ಕಳು ಆರ್ಥಿಕ ದುರ್ಬಲತೆಯ ಹೊರತಾಗಿಯೂ ಖಾಸಗಿ ಶಾಲೆಯ ಶಿಕ್ಷಣ ಪಡೆಯಬಹುದು ಎಂಬುದರಲ್ಲಿ ಸರ್ಕಾರದ ವೈಫಲ್ಯದ ಸರ್ಟಿಫಿಕೇಟ್ ಇದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಆಗುತ್ತಿಲ್ಲ. ಹಾಗಾಗಿ, ನೀವು ಕ್ವಾಲಿಟಿ ಎಜುಕೇಷನ್‌ಗೆ ಖಾಸಗಿ ಶಾಲೆಗೆ ಹೋಗಿ, ಫೀ ಕುರಿತಾಗಿ ತಲೆಬಿಸಿ ಮಾಡಿಕೊಳ್ಳಬೇಡಿ. ಅದನ್ನು ನಾವು ಭರಿಸುತ್ತೇವೆ ಎಂಬ ಅಘೋಷಿತ ಉದ್ಗಾರ ಆರ್‌ಟಿಇನಲ್ಲಿದೆ. ಕಳೆದ ವರ್ಷ ತಮಿಳುನಾಡಿನಲ್ಲಿ ಆರ್‌ಟಿಇಗಾಗಿ ಬಜೆಟ್‌ನಿಂದ 300 ಕೋಟಿ ರೂ. ತೆಗೆದಿರಿಸಲಾಗಿತ್ತು. ಇದರ ಅರ್ಥ ಸರಳ, ಅಲ್ಲಿನ ಸರ್ಕಾರಿ ಶಾಲೆಗಳ ಉನ್ನತಿಗೆ, ನಿರ್ವಹಣೆಗೆ ಬಳಕೆಯಾಗಬಹುದಾದ 300 ಕೋಟಿ ರೂ. ಅದಾಗಲೇ ಸಿರಿವಂತವಾದ, ಬಂಡವಾಳ ಹೂಡಿ ಶಿಕ್ಷಣ ಉದ್ಯಮ ಮಾಡುತ್ತಿರುವವರಿಗೆ ಅನಾಯಾಸವಾಗಿ ಸಿಕ್ಕಂತೆ ಆಗಲಿಲ್ಲವೇ?
Related Articles
Advertisement
ಆರ್‌ಟಿಇ ಸೀಟ್ ಕೇಳುವವರಿಲ್ಲ!ಇಷ್ಟಾಗಿಯೂ ಆರ್‌ಟಿಇ ತೀರಾ ಜನಪ್ರಿಯವಲ್ಲ. ಆಯಾ ಭಾಗದ ವಿದ್ಯಾರ್ಥಿಗಳನ್ನು ಮಾತ್ರ ಆರ್‌ಟಿಇಯಡಿಯಲ್ಲಿ ಸೇರಿಸಿಕೊಳ್ಳುವ ಅವಕಾಶವಿದೆ ಎಂಬುದು ಒಂದು ನಿಯಮ. ಆ ಭಾಗದ ಒಂದು ಜನಪ್ರಿಯ ಶಾಲೆಗೇ ಹೆಚ್ಚಿನ ಅರ್ಜಿಗಳಿವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೂ, ಲಾಬಿ ನಡೆಯದಿದ್ದರೂ ಶೇ. 25ರಷ್ಟು ಆರ್‌ಟಿಇ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲಿ ಪ್ರವೇಶಾವಕಾಶ. ಅದರ ಹೊರತಾದ ಸಂಸ್ಥೆಗಳ ಖಾಸಗಿ ಶಾಲೆಗಳಲ್ಲೂ ಆರ್‌ಟಿಇ ಸೇರ್ಪಡೆ ಇದೆ ಎಂದಿಟ್ಟುಕೊಂಡರೂ ಜನ ಖಾಸಗಿ ಅನುದಾನಿತ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪುಕ್ಕಟೆಯಾದರೂ ಸೇರಿಸಲು ಒಲ್ಲರು. ಅವರ ಲೆಕ್ಕದಲ್ಲಿ, ಭವಿಷ್ಯದಲ್ಲಿ ಮಕ್ಕಳನ್ನು ಲಕ್ಷ ಲಕ್ಷ ದುಡಿಯುವ ಮಿಷನ್‌ಗಳಾಗಿಸುತ್ತಿರುವಾಗ ಈಗ ಬಂಡವಾಳ ಉಳಿಯುತ್ತದೆಂದು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲಾಗುತ್ತದೆಯೇ? ಸುಮ್ಮಸುಮ್ಮನೆ ಹೇಳುತ್ತಿಲ್ಲ. ಕರ್ನಾಟಕವನ್ನೇ ತೆಗೆದುಕೊಂಡರೆ 1.52 ಲಕ್ಷ ಆರ್‌ಟಿಇ ಸ್ಥಾನಗಳಲ್ಲಿ ಶೇ. 21.32ರಷ್ಟು ಖಾಲಿಯುಳಿದಿವೆ. ಆ ಲೆಕ್ಕದಲ್ಲಿ ಕಳೆದ ವರ್ಷ ಶೇ.15.2ರಷ್ಟು ಅವಕಾಶ ಭರ್ತಿ ಆಗಿರಲಿಲ್ಲ. ಸಂಖ್ಯೆಯಲ್ಲಿ ಹೇಳುವುದಾದರೆ 2017-18ರಲ್ಲಿ 19,647 ಹಾಗೂ 18-19ರಲ್ಲಿ 32,440ಕ್ಕೆ ವಿದ್ಯಾರ್ಥಿಗಳು ಸಿಕ್ಕಿಲ್ಲ. ಈವರೆಗೆ ಕೇವಲ ಅನುದಾನರಹಿತ ಖಾಸಗಿ ಶಾಲೆಗಳನ್ನು ಪರಿಗಣಿಸಲಾಗುತ್ತಿತ್ತು. ಈ ವರ್ಷ ಅನುದಾನಿತ ಸರ್ಕಾರಿ ಶಾಲೆಗಳನ್ನು ಕೂಡ ಆರ್‌ಟಿಇ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಸರಿಸುಮಾರು 30 ಸಾವಿರ ಸೀಟ್ ಅವಕಾಶಗಳು ಹೆಚ್ಚಿದಂತಾಗಿದೆ. ಏನುಪಯೋಗ? ಖಾಸಗಿ ಅನುದಾನಿತ ಶಾಲೆಗಳ ಶೇ. 73ರಷ್ಟು ಆರ್‌ಟಿಇ ಸ್ಥಾನ ಖಾಲಿ ಖಾಲಿ! ಅನುದಾನ ರಹಿತವಾಗಿ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವವರು ಈಗಂತೂ ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಿಲ್ಲ. ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯ ಕೊಟ್ಟರೆ ಮಾತ್ರ ಅವುಗಳು ಉಳಿದುಕೊಳ್ಳಬಲ್ಲವು. ಹಾಗೆ ನೋಡಿದರೂ, ಅನುದಾನ ರಹಿತ ಖಾಸಗಿ ಶಾಲೆಗಳ ಶೇ. 15ರಷ್ಟು ಆರ್‌ಟಿಇ ಸೀಟ್ ಖಾಲಿಯೇ ಉಳಿದಿವೆ. ಉಚಿತದ ಘೋಷಣೆಗಳ ಹೊರತಾಗಿಯೂ ಜನ ಗುಣಮಟ್ಟದ ಶಾಲೆಗಳನ್ನೇ ಬಯಸುತ್ತಾರೆ ಎಂಬುದರಲ್ಲಿಯೇ ಸರ್ಕಾರಿ ಶಾಲೆಗಳ ಪುನರುತ್ಥಾನದ ಮಾರ್ಗಸೂಚಿ ಇದೆ! ಸರ್ಕಾರ ಶಾಲೆಗಳನ್ನು ಮಾರುತ್ತಿದೆ!
ತನ್ನ ಮಗುವನ್ನು ತಾಯಿ ತಾನೇ ಕೊಲ್ಲುತ್ತಾಳೆಯೇ? ಉಚಿತ ಶಿಕ್ಷಣ ಹಕ್ಕು ಕಾಯ್ದೆಯ ಮೂಲಕ ಸರ್ಕಾರ ಮಾಡುತ್ತಿರುವುದು ಅದನ್ನೇ. ಈ ಮುನ್ನ ಹಣಕಾಸಿನ ನಿರ್ಬಂಧದ ಹಿನ್ನೆಲೆಯಲ್ಲಿ ಬಡವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಇದರಿಂದ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಚೆನ್ನಾಗಿಯೇ ಇರುತ್ತಿತ್ತು. ಈಗ ಮಕ್ಕಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಸಾಮಾನ್ಯ ವಿದ್ಯಮಾನದಂತೆ ನಡೆಯುತ್ತಿದೆ. 2010ರ ಒಂದು ಅಧ್ಯಯನ ವರದಿಯಂತೆ ಪಂಜಾಬ್‌ನಲ್ಲಿ 933 ಶಾಲೆಗಳು ಮುಚ್ಚಿವೆ. 219 ಕೊನೆಕ್ಷಣದಲ್ಲಿವೆ. ಹರ್ಯಾಣದಲ್ಲಿ 1,292 ಮುಚ್ಚುವ ಘೋಷಣೆ ಮಾಡಿದ್ದರೂ ಕೇವಲ ನ್ಯಾಯಾಲಯದ ಆದೇಶ ಅದನ್ನು ತಡೆದಿದೆ. ಆಂಧ್ರದಲ್ಲಿ 529, ತಮಿಳುನಾಡಿನಲ್ಲಿ 30 ಸ್ತಬ್ಧವಾಗಿವೆ. ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರಗಳೆಲ್ಲ ಸೇರಿ 6,116 ಸ್ಥಗಿತಗೊಳ್ಳುವ ಮಾಹಿತಿಯನ್ನು ದೆಹಲಿಯ ಒಂದು ಎನ್‌ಜಿಓ ಸಂಗ್ರಹಿಸಿತ್ತು. ಸರ್ಕಾರಿ ವ್ಯವಸ್ಥೆ ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ನೀಡುವುದಿಲ್ಲ. ನಾವು ಕರ್ನಾಟಕದಲ್ಲೂ ಹಲವು ಬಾರಿ ಶಾಲೆಗಳ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಕಟಣೆಗಳನ್ನು ಸರ್ಕಾರ ನೀಡುವುದು ಹಾಗೂ ವಿರೋಧದ ಹಿನ್ನೆಲೆಯಲ್ಲಿ ಸುಮ್ಮನುಳಿಯುವುದನ್ನು ಕಾಣುತ್ತಿದ್ದೇವೆ. ಬಜೆಟ್‌ನಲ್ಲಿ ಅತಿ ದೊಡ್ಡ ಮೊತ್ತ ಶಿಕ್ಷಕರ ವೇತನಕ್ಕೇ ಸಂದಾಯವಾಗುವಾಗ ಸರ್ಕಾರ ಕೂಡ ಆರ್‌ಟಿಇ ಮೂಲಕ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಡಿಮೆಯಾಗುವುದನ್ನೇ ಬಯಸುತ್ತದೆ. ಮಕ್ಕಳಿಲ್ಲದೆ ಶಾಲೆ ಮುಚ್ಚಿದರೆ ವಿರೋಧಿಸುವವರಾರು? ಈಗ ತಮಿಳುನಾಡಿನ ಶಿಕ್ಷಣ ಬಜೆಟ್ 27 ಸಾವಿರ ಕೋಟಿ, ಆರ್‌ಟಿಇ ಬಾಬತ್ತು 300 ಕೋಟಿ. ಇದು ಬೇಕಿದ್ದರೆ ನಾಳೆ 600 ಕೋಟಿ ಆಗಲಿ, ಅತ್ತ 27 ಸಾವಿರ ಕೋಟಿಯಲ್ಲಿನ ಶಿಕ್ಷಕ ವೇತನದಲ್ಲಿ ಸಾವಿರಾರು ಕೋಟಿ ಉಳಿದರೆ ಸರ್ಕಾರಕ್ಕೇ ಲಾಭವಲ್ಲವೇ? ಶಿಕ್ಷಕರ ಹೊಸ ನೇಮಕ ಆಗುವುದಿಲ್ಲ. ಇಂಥದೊಂದು ಹುನ್ನಾರ ದೇಶಾದ್ಯಂತ ನಡೆಯುತ್ತಿದೆ. ಇಷ್ಟಾಗಿಯೂ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದವರು ಖುದ್ದು ಶಿಕ್ಷಕರು, ಜನಪ್ರತಿನಿಧಿಗಳು. ನಗರದಲ್ಲಿಯ ಶಾಲೆಯಲ್ಲಿಯೇ ಕೆಲಸ ಆಶಿಸುವ ಶಿಕ್ಷಕ ವರ್ಗ ತಮ್ಮ ಮಕ್ಕಳನ್ನು ತಮ್ಮಲ್ಲಿಗೆ ಸೇರಿಸದೆ ಖಾಸಗಿಗೆ ಸೇರಿಸುತ್ತಾರೆಂದರೆ ತಮ್ಮ ಬಗ್ಗೆಯೇ ಅವರಿಗೆ ವಿಶ್ವಾಸ ಇಲ್ಲದ ದ್ಯೋತಕ. ಅವರಿಗಿಲ್ಲದ ಕಾಳಜಿಯನ್ನು ಉಳಿದವರಿಂದ ನಿರೀಕ್ಷಿ$ಸುವುದು ಸಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಚಾಲಕ ನಿರ್ವಾಹಕರಿಗೆ ಟಿಕೆಟ್ ಮೇಲೆ ಆಕರ್ಷಕ ಕಮೀಷನ್ ಆಮಿಷ ಇಟ್ಟ ಮೇಲೆ ಪ್ರಯಾಣಿಕರನ್ನು ಕರೆದು, ಮನವೊಲಿಸಿ ಬಸ್ ಹತ್ತಿಸಿಕೊಳ್ಳುವುದನ್ನು ನೋಡುತ್ತಿದ್ದೇವೆ. ಈಗ ಯಾರಿಗೂ ಸಂಬಳವಷ್ಟೇ ಸಾಕಾಗುವುದಿಲ್ಲ. ಅವರಿಗೂ ಶಾಲೆಗೆ ಸೇರಿಸಿಕೊಳ್ಳುವ ಮಕ್ಕಳ ಸಂಖ್ಯೆಯ ಮೇಲೆ ಬೋನಸ್‌ಗಳನ್ನು ಘೋಷಿಸಬೇಕಾಗಿದೆ. ಆಗ ಅವರ ಬೋಧನಾ ಗುಣಮಟ್ಟವೂ ಹೆಚ್ಚೀತು. ಅವರ ಮಕ್ಕಳು ಅಲ್ಲಿಗೇ ಸೇರಿಯಾರು ಮತ್ತು ಶಾಲೆಗಳು ಉಳಿಯುತ್ತವೆ. ತಾನು ಮಾಡಿದ ಅಡುಗೆಯನ್ನು ಉಣ್ಣದೆ ಪಕ್ಕದ ಹೋಟೆಲ್‌ಗೆ ಹೋಗಿ ಉಣ್ಣುವವ, ತಾನು ಮಾಡಿದ ಅಡುಗೆಯನ್ನು ಹಂಚಲು ಹೊರಟರೆ ಯಾರಾದರೂ ಕೈ ಒಡ್ಡುತ್ತಾರೆಯೇ? -ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು,
ಬಳಕೆದಾರರ ವೇದಿಕೆ, ಸಾಗರ