ಇವಳ್ಯಾರ ಮಗಳ್ಳೋ ಹಿಂಗವಳಲ್ಲಾ?!
ಮಹಾಲಕ್ಷ್ಮಿ ರೂಪ, ಮೂಗಿನ ತುದಿಯಲಿ ಕೋಪ!
ಅವತ್ತು ಗುರುವಾರ. ರಾಯರವಾರ ಬೇರೆ. ಅವತ್ತು ನಿಜವಾಗಿ ರಾಯರೇ ನನ್ನತ್ತ ಕಣ್ಣು ಬಿಟ್ಟಿದ್ದರೇನೋ ಗೊತ್ತಿಲ್ಲ! ಯಾವತ್ತಿನಂತೆ ಕ್ಲಾಸಿನಲ್ಲಿ ಸುಮ್ಮನೆ ಕೂತಿದ್ದೆ. ಯಾವಾಗ ಕ್ಲಾಸು ಬಿಡುತ್ತದೋ ಅಂತ ಕಾಯುತ್ತಾ ಅನ್ಯಮನಸ್ಕನಾಗಿ ಕಿಟಕಿಯತ್ತ ನೋಡುತ್ತಿದ್ದೆ. ಕನಕದಾಸರಿಗೆ ಕಿಂಡಿಯ ಮೂಲಕ ಶ್ರೀಕೃಷ್ಣ ಹೇಗೆ ದರುಶನ ನೀಡಿದನೋ, ಹಾಗೆ ನನಗೆ ಆ ಕಿಟಕಿಯ ಕಿಂಡಿಯಲ್ಲಿ ದೇವಿಯ ದರ್ಶನವಾಯ್ತು. ಗುಂಗುರು ಕೂದಲಿನ ಚೆಲುವೆಯಾಕೆ. ಕೊಲ್ಲುವ ನೋಟ, ರೇಷಿಮೆಯಂಥ ಕೆನ್ನೆ, ರೂಪದರ್ಶಿಯರನ್ನು ನಾಚಿಸುವ ನಡಿಗೆ…ಇನ್ನೇನು ಬೇಕು ಆ ದೇವಿಗೆ ಭಕ್ತನಾಗಲು?
ಯಪ್ಪಾ ದೇವರೇ! ಇವಳ್ಯಾರ ಮಗಳಪ್ಪ ಹಿಂಗವಳಲ್ಲಾ… ಅನ್ನೋ ಹಾಡಿನ ಸಾಲುಗಳು ನೆನಪಾದವು. ನೋಡುನೋಡುತ್ತಿದ್ದಂತೆ ಆಕೆ ನಮ್ಮ ಕ್ಲಾಸಿನ ಕಿಟಕಿ ದಾಟಿ ಮುಂದಕ್ಕೆ ಹೋದಳು. ಅವಳನ್ನು ಹಿಂಬಾಲಿಸುತ್ತಾ ನನ್ನ ಮನಸ್ಸೂ ಕ್ಲಾಸಿನಿಂದಾಚೆ ಹೋಯ್ತು. ಯಾರು ಆ ಹುಡುಗಿ? ಜ್ಯೂನಿಯರ್ರಾ, ಸೀನಿಯರ್ರಾ ಅಂತೆಲ್ಲಾ ತಲೆ ಕೆಡಿಸಿಕೊಂಡು ನಾನು ಮಾತ್ರ ಒಳಗೇ ಕುಳಿತಿದ್ದೆ. ಕೊನೆಗೂ ಪತ್ತೇದಾರಿಕೆ ಮಾಡಿ ಅವಳ ಬಯೋಡೇಟಾವನ್ನೆಲ್ಲ ತಿಳಿದುಕೊಂಡೆ. ಆನಂತರದಲ್ಲಿ ದಿನಾ ಅವಳು ಬರುವ ಟೈಮಿಗೆ ಕಾರಿಡಾರಿನಲ್ಲಿ ಮರೆಯಾಗಿ ನಿಲ್ಲುವುದು, ಕ್ಲಾಸಿನೊಳಗಿದ್ದುಕೊಂಡೇ ಅವಳ ದಾರಿ ಕಾಯುವುದು ನನ್ನ ದಿನಚರಿಯಾಗಿಬಿಟ್ಟಿತು.
ಈಗ ಹೇಗಾಗಿದೆಯೆಂದರೆ, ದಿನದಲ್ಲಿ ಒಮ್ಮೆಯಾದರೂ ಅವಳನ್ನು ನೋಡದಿದ್ದರೆ ಮನಸ್ಸು ಮರುಭೂಮಿಯಾಗಿಬಿಡುತ್ತದೆ. ಏನೋ ಸರಿ ಇಲ್ಲ, ಎಲ್ಲವೂ ಭಣ ಭಣ ಅನ್ನಿಸುತ್ತದೆ. ಅವಳನ್ನು ನೋಡಿದರೆ ಸಾಕು, ನೋವು, ಕೋಪ, ಆಯಾಸ ಎಲ್ಲವೂ ಮಾಯ! ಅಂಥದೊಂದು ಫೀಲ್ ಜೊತೆಯಾದಾಗೆಲ್ಲ ಆಸೆಯಿಂದ, ಪ್ರೀತಿಯಿಂದ, ಉಲ್ಲಾಸದಿಂದ ಹಾಡಿಕೊಳ್ಳುತ್ತೇನೆ: ಇವಳ್ಯಾರ ಮಗಳ್ಳೋ ಹಿಂಗವಳಲ್ಲಾ…
ಲೋಕೇಶ ಡಿ. ಶಿಕಾರಿಪುರ