Advertisement

ಉತ್ತಮ ಸಾಧಕ ಯಾರು?

07:49 PM Oct 25, 2019 | Lakshmi GovindaRaju |

ಸ್ವಾಮಿತ್ವ ಸಂಪಾದನೆ ಮತ್ತು ಅದರ ಪರಿಪಾಲನೆ, ಅಷ್ಟು ಸುಲಭದ ಕೆಲಸವಲ್ಲ. ಸ್ವಾಮಿಗಳಿಗೆ ಎರಡು ಕಣ್ಣುಗಳಿದ್ದರೆ, ಸಾವಿರಾರು- ಲಕ್ಷಾಂತರ ಕಣ್ಣುಗಳು ಅವರನ್ನು ನೋಡುತ್ತಿರುತ್ತವೆ. ಗುಣಗಳಿಗಿಂತ ದೋಷಗಳನ್ನೇ ಗ್ರಹಿಸುವವರು ಹೆಚ್ಚು. ಇದನ್ನೆಲ್ಲ ಪರಿಭಾವಿಸಿದ ಸಾಧಕ, ಸಮರ್ಥನೇ ಆಗಿರಬೇಕು. ಒಂದು ಮನೆಗೆ ಸೊಸೆಯಾಗಿ, ಗೃಹಿಣಿಯಾಗಿ ಬರುವ ಕನ್ಯೆಯು ಆರು ಗುಣಗಳಿಂದ ಕೂಡಿರಬೇಕಂತೆ.

Advertisement

ಅಂದರೆ, ಅಂಥವಳು ಕುಲವನ್ನು ಉದ್ಧರಿಸುವಳಂತೆ, ಸತಿಯಾದವಳಲ್ಲಿ ಕಿಂಕರತನ, ಸೂಕ್ಷ್ಮಮತಿ, ಸೌಂದರ್ಯ, ಸಹನಶೀಲತೆ, ಮಾತೃ ವಾತ್ಸಲ್ಯ, ಅನುರಾಗ- ಈ ಗುಣಗಳಿದ್ದಾಗ, ಗಂಡನನ್ನು ಹಾಗೂ ಮನೆಯವರನ್ನು ಗೆಲ್ಲಬಲ್ಲಳು. ಉತ್ತಮ ಗೃಹಿಣಿಯಾಗಿ ಬಾಳಬಲ್ಲಳು. ಗುರುವಿನಲ್ಲಿ ಕರುಣೆ, ಸತ್ಕಲೆ, ಶಾಸ್ತ್ರಪರಿಣತಿ, ಸೌಂದರ್ಯತೆ, ನಿರಾಶೆಗಳೆಂಬ ಐದು ಗುಣಗಳಿರಬೇಕು.

ಜ್ಞಾನ, ಐಶ್ವರ್ಯ, ಯಶಸ್ಸು, ಧರ್ಮ, ವೀರ್ಯ, ತೇಜಸ್ಸುಗಳೆಂಬ 6 ಆಂತರಿಕ ಸದ್ಗುಣ ಸಂಪತ್ತನ್ನು ಸಾಧಿಸಬೇಕು. ಗುರು, ಜಂಗಮನಿಗೆ ಜ್ಞಾನವೇ ಮುಖ್ಯ. ಲೌಕಿಕ ಹಾಗೂ ಅಲೌಕಿಕ- ಎರಡೂ ಜ್ಞಾನವಿರಬೇಕು. ಭೌತಿಕ ಸಂಪತ್ತಲ್ಲದೆ, ಅಧ್ಯಾತ್ಮಿಕ ಐಶ್ವರ್ಯಭರಿತನಾಗಿರಬೇಕು. ಯಾವುದೇ ಕಾರ್ಯದಲ್ಲಿ ಜಯಶಾಲಿ­ಯಾಗುವ ಆತ್ಮಬಲವಿರಬೇಕು. ಧರ್ಮದ ಕರ್ತವ್ಯ ಪಾರಾಯಣ­­­ನಾಗಬೇಕು. ಆತ್ಮಬಲಶಾಲಿಯಾಗಿರಬೇಕು.

ತೇಜಸ್ಸಿನಿಂದಲೇ ಆತ ಪರಿಪೂರ್ಣ. ಸ್ವತಃ ತಾನು ಕರ್ತವ್ಯನಿಷ್ಠನಾದರೆ ತನ್ನನ್ನು ಅವಲೋಕಿ ಸುವ ಶಿಷ್ಯರೂ ಅದನ್ನು ಅನುಸರಿಸುತ್ತಾರೆ. ಸದ್ಗುರುವಿನಲ್ಲಿ ಶಿಷ್ಯರನ್ನು ಉದ್ಧರಿ­ಸುವ ಮಹತ್ವಾಕಾಂಕ್ಷೆ ಇರಬೇಕು. ತಾನು ತ್ಯಾಗಿಯಾಗಿ ಭಕ್ತರಿಗೆ ಲೌಕಿಕ ಹಾಗೂ ಅಲೌಕಿಕ ಸಿರಿಸಂಪತ್ತನ್ನು ದಯಪಾಲಿಸ‌ಬೇಕು.

ಅಯಂ ನಿಜಃ ಪರೋ ವೇತ್ತಿ ಗಣನಾ ಲಘುಚೇತಸಾಮ್‌|
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌||

ಸ್ವಾಮಿಯೆಂದರೆ ಯಜಮಾನ, ಒಡೆಯ, ಪ್ರಭು, ರಾಜ, ಗುರು ಇತ್ಯಾದಿ ಅರ್ಥಗಳಿವೆ. ಸರ್ವತಂತ್ರ ಸ್ವತಂತ್ರನಾಗಿ ಸಮಾಜದ ಯಜಮಾನನಾಗಬೇಕಾದರೆ, ಸ್ವಾಮಿಗಳಾದವರ ಜವಾಬ್ದಾರಿ ಬಹಳವಿದೆ. ಹಾನಗಲ್ಲ ಕುಮಾರಸ್ವಾಮಿಗಳಿಗೆ ವೈರಾಗ್ಯದ ಮಲ್ಲಣಾರ್ಯರು, “ನೀವು ಯಾರು? ನೀವೇ ಸ್ವಾಮಿಗಳೇನು?’ ಎಂದು ಪ್ರಶ್ನಿಸಿದಾಗ, ಪೂಜ್ಯರ ಉತ್ತರ ಮಾರ್ಮಿಕವಾಗಿದೆ. “ಭಕ್ತರು ಸ್ವಾಮಿಗಳೆಂದೇನೋ ಕರೆಯುತ್ತಾರೆ.

Advertisement

ಈ ಜಗತ್ತೆಲ್ಲ ನನ್ನದು, ಜಗತ್ತಿನ ಜನರೆಲ್ಲ ನನ್ನವರೆಂಬ ಭಾವವೇ ಸ್ವಾಮಿತ್ವ’ ಎಂದು ಹೇಳಿದರಂತೆ. ಸಣ್ಣಮನಸ್ಸಿನ ಮನುಷ್ಯನು, “ಇವನು ನನ್ನವನು, ಅವನು ಬೇರೆಯವನು’ ಎಂದು ಭಾವಿಸಿದರೆ, ವಿಶಾಲ ಮನೋಭಾವದ ಮಹಾನುಭಾವರು ಜಗತ್ತೇ ನನ್ನ ಪರಿವಾರವೆಂದು ಭಾವಿಸುತ್ತಾರೆ. ಸ್ವಾಮಿ ಆದವನು ಪೂರ್ವಾಶ್ರಮದ ಅಭಿಮಾನ ತೊರೆದು, ಪ್ರಪಂಚದ ಮಾನವರನ್ನು ಪ್ರೀತಿಯಿಂದ ಕಾಣಬೇಕು. ಅದೇ ಶ್ರೇಷ್ಠ ಸ್ವಾಮಿತ್ವ.

* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ

Advertisement

Udayavani is now on Telegram. Click here to join our channel and stay updated with the latest news.

Next