Advertisement
ಮೈತ್ರಿ ಸರ್ಕಾರದಲ್ಲಿ ಶಾಸಕರ ಅಸಮಾಧಾನ ಹೆಚ್ಚಾಗಲು ಜೆಡಿಎಸ್ ಸಚಿವರ ನಡವಳಿಕೆಯೂ ಕಾರಣ ಎಂದು ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಭೆಯಲ್ಲಿಯೇ ಕೆಲವು ಶಾಸಕರು ಅವರ ನಡವಳಿಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಕಾಂಗ್ರೆಸ್ ಶಾಸಕರಿಗೆ ಗೌರವ ನೀಡದಿರುವುದೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Related Articles
ಕಳೆದ ಆರು ತಿಂಗಳಿಂದಲೂ ತಮ್ಮವರೆನಿಸಿಕೊಂಡಿರುವ ಶಾಸಕರೇ ಬಂಡಾಯದ ನಾಯಕತ್ವ ವಹಿಸಿದ್ದರೂ, ಅವರನ್ನು ಸಮಾಧಾನಪಡಿಸಿ ಹದ್ದುಬಸ್ತಿನಲ್ಲಿಡುವ ಕಾರ್ಯಕ್ಕೆ ಮುಂದಾಗದೇ, ಅವರ ನಡೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಲೇ ಬಂದಿರುವುದು ಇಂದಿನ ಈ ಪರಿಸ್ಥಿತಿಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
Advertisement
ರಮೇಶ್ ಜಾರಕಿಹೊಳಿ ಬಂಡಾಯವೆದ್ದು ಮುಂಬೈಗೆ ಹೋಗಿದ್ದಾಗಲೇ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಸ್ಪೀಕರ್‌ಗೆ ದೂರು ನೀಡಿದ್ದರೂ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗದೇ ನಿರ್ಲಕ್ಷ್ಯ ವಹಿಸಿ, ಬಂಡಾಯಗಾರರ ಅಸಮಾಧಾನ ಮತ್ತಷ್ಟು ಹೆಚ್ಚಳವಾಗಲು ಪ್ರೇರಣೆ ನೀಡಿರುವುದು ಅತೃಪ್ತರನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡಿದಂತಾಯಿತು ಎನ್ನಲಾಗುತ್ತಿದೆ.
ಎಲ್ಲವೂ ತಮ್ಮ ಹಿಡಿತದಲ್ಲಿಯೇ ಇದ್ದರೂ, ಮೈತ್ರಿ ಸರ್ಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅತೃಪ್ತರ ನಡೆಯನ್ನು ಪರೋಕ್ಷವಾಗಿ ಸಿದ್ದರಾಮಯ್ಯ ಬೆಂಬಲಿಸುತ್ತ ಅತೃಪ್ತರು ಹಾಗೂ ಸರ್ಕಾರ ಎರಡರ ಜುಟ್ಟೂ ನನ್ನ ಕೈಯಲ್ಲಿಯೇ ಇರಬೇಕೆಂದು ಬಯಸಿದ್ದೇ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ವಿಫಲ ಯತ್ನ: ವಿಧಾನಸಭೆಯಲ್ಲಿ 104 ಸದಸ್ಯ ಬಲ ಹೊಂದಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲೇ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೂ ಬಹುಮತ ಸಾಬೀತುಪಡಿಸಲಾಗದೆ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದರು. ಆನಂತರ ರಚನೆಯಾದ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡವರನ್ನು ಸಂಪರ್ಕಿಸಿ ವಿಶ್ವಾಸ ಗಳಿಸುವ ಕಾರ್ಯ ಆರಂಭಿಸಿದರು. ಅತೃಪ್ತರ ಸಂಖ್ಯೆ ಹೆಚ್ಚಾದಂತೆ ಆಗಾಗ್ಗೆ ಮೈತ್ರಿಸರ್ಕಾರಕ್ಕೆ ಸಂಖ್ಯಾಬಲವಿಲ್ಲ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನ ನಡೆದರೂ ಯಶ ಕಾಣಲಿಲ್ಲ.
ಸಚಿವ ಸ್ಥಾನದಿಂದ ರಮೇಶ್ ಜಾರಕಿಹೊಳಿಯನ್ನು ಕೈಬಿಟ್ಟ ಬಳಿಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಿಜೆಪಿ ನಂತರ ಅವರ ಮೂಲಕವೇ ಇತರೆ ಅತೃಪ್ತರನ್ನು ಸೆಳೆಯುವ ಕಾರ್ಯದಲ್ಲಿ ಯಶಸ್ಸು ಕಂಡಿತು. ಜತೆಗೆ ಸಚಿವ ಸ್ಥಾನ ವಂಚಿತರು, ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಕೆಲ ಸಚಿವರ ನಿರ್ಲಕ್ಷ್ಯದಿಂದ ಬೇಸತ್ತ ಶಾಸಕರನ್ನು ಸಂಪರ್ಕದಲ್ಲಿಟ್ಟುಕೊಂಡು ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
ಪ್ರಿಯಾಂಕ್ ಖರ್ಗೆಯವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಅತೃಪ್ತರಾಗಿದ್ದ ಡಾ.ಉಮೇಶ್ ಜಾಧವ್ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಬಿಜೆಪಿ ಆತ್ಮವಿಶ್ವಾಸ ಹೆಚ್ಚಿಸಿತು. ಅದನ್ನೇ ಬಳಸಿಕೊಂಡು ಇತರೆ ಅತೃಪ್ತರ ಮನವೊಲಿಸಿ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಹಾದಿ ಸುಗಮಗೊಳಿಸುವಲ್ಲಿ ಯಶಸ್ಸು ಕಂಡರು. ಐದು ಬಾರಿ ನಡೆಸಿದ ಪ್ರಯತ್ನ ವಿಫಲವಾದರೂ ವಿಚಲಿತರಾಗದ ಯಡಿಯೂರಪ್ಪ ಅತೃಪ್ತರೊಂದಿಗೆ ನಿಕಟ ಸಂಪರ್ಕ, ವಿಶ್ವಾಸ ಮುಂದುವರಿಸಿದ್ದರ ಫಲ ಈಗ ಸಿಗಲಾರಂಭಿಸಿದಂತಿದೆ.