Advertisement

ರೆಡ್ಡಿ ಗೆಲುವಿಗೆ ಅಡ್ಡಿ ಯಾರು?

11:49 AM May 01, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು, ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ. ಇದು ರಾಜಧಾನಿ ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಚಿತ್ರಣ. ಹೀಗಾಗಿ ಜಯನಗರ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆದ್ದಿದ್ದ ಕಾಂಗ್ರೆಸ್‌ ಅಭ್ಯರ್ಥಿ ರಾಮಲಿಂಗಾರೆಡ್ಡಿ  ಕ್ಷೇತ್ರ ಪುನರ್ವಿಂಗಡಣೆ ಬಳಿಕ ಬಿಟಿಎಂ ಲೇಔಟ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಈ ಬಾರಿ ಅವರ ಹ್ಯಾಟ್ರಿಕ್‌ ಗೆಲುವು ತಪ್ಪಿಸಲು ಬಿಜೆಪಿ  ಮತ್ತು ಜೆಡಿಎಸ್‌ ಪ್ರಯತ್ನಿಸುತ್ತಿವೆ.

Advertisement

ಜಯನಗರ ಕ್ಷೇತ್ರ ಬಿಟ್ಟು ಬಿಟಿಎಂ ಲೇಔಟ್‌ಗೆ ಬಂದ ರಾಮಲಿಂಗಾರೆಡ್ಡಿ ಮೂರನೇ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಿದ್ದಾರೆ. ರೆಡ್ಡಿ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಿಜೆಪಿ ಯುವ ಮುಖ ಲಲ್ಲೇಶ್‌ ರೆಡ್ಡಿಯನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್‌ನಿಂದ ಬಿಬಿಎಂಪಿ ಹಾಲಿ ಸದಸ್ಯ ಕೆ.ದೇವದಾಸ್‌ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಆಮ್‌ ಆದ್ಮಿ ಪಕ್ಷ, ರಿಪಬ್ಲಿಕನ್‌ ಸೇನಾ, ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ, ಎಐಎಂಇಪಿ, ಪಕ್ಷೇತರರು ಕೂಡ ಕಣದಲ್ಲಿದ್ದಾರೆ.

ಬಹು ಭಾಷೆ. ಬಹು ಸಂಸ್ಕೃತಿಯ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಅನ್ಯ ಭಾಷಿಕರ ಮತಗಳೇ ನಿರ್ಣಾಯಕ. ಈ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಡಲಿದೆ. ಕಾರಣ, 2009 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಮತ ಪಡೆದಿದ್ದರು. 2008ರಲ್ಲಿ ಇಲ್ಲಿ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ, ಕೇವಲ ಒಂದೂವರೆ ಸಾವಿರ ಮತಗಳ ಅಂತರದಲ್ಲಿ ಸೋತಿತ್ತು. ಹೀಗಾಗಿ ಬಿಜೆಪಿಯನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.

ಅಭ್ಯರ್ಥಿ ಆಯ್ಕೆ ಗೊಂದಲ: 2013ರಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದರಿಂದ ಹೀನಾಯ ಸೋಲು ಅನುಭವಿಸಿದ್ದ ಬಿಜೆಪಿ, ಈ ಬಾರಿಯೂ ಸಾಕಷ್ಟು ಗೊಂದಲ ಎದುರಿಸಿ ಅಂತಿಮ ಕ್ಷಣದಲ್ಲಿ ಲಲ್ಲೇಶ್‌ ರೆಡ್ಡಿ ಅವರಿಗೆ ಟಿಕೆಟ್‌ ನೀಡಿದೆ. ಅಭ್ಯರ್ಥಿ ಇನ್ನೂ ಕ್ಷೇತ್ರದಲ್ಲಿ ಓಡಾಟ ಆರಂಭಿಸಿ ಮತದಾರರನ್ನು ತಲುಪಿಲ್ಲ. ಇನ್ನೊಂದೆಡೆ ಅಭ್ಯರ್ಥಿ ಘೋಷಣೆಗೆ ಮುನ್ನವೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಗದ್ದಲ ಉಂಟಾಗಿತ್ತು. ಈ ಕಾರಣದಿಂದಾಗಿ 2008ರಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಪ್ರಸಾದ್‌ ರೆಡ್ಡಿ ಅವರಿಗೆ ಮತ್ತೆ ಮಣೆ ಹಾಕುವ ಮಾತು ಕೇಳಿಬಂದಿತ್ತು. ಇದೀಗ ಲಲ್ಲೇಶ್‌ ರೆಡ್ಡಿಗೆ ಟಿಕೆಟ್‌ ನೀಡಿದ್ದರಿಂದ ಸ್ಥಳೀಯ ಘಟಕದಲ್ಲಿ ಒಗ್ಗಟ್ಟು ಮೂಡಿಲ್ಲ.

ಇದು ಕಾಂಗ್ರೆಸ್‌ ಪಾಲಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಟ್ಟಿರುವುದು ಒಂದೆಡೆಯಾದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವವರೂ, ವಿಧಾನಸಭೆ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಅವರತ್ತ ಮುಖ ಮಾಡುತ್ತಾರೆ ಎಂಬುದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಜೆಡಿಎಸ್‌ನಿಂದ ಕಣಕ್ಕಿಳಿದಿರುವ ದೇವದಾಸ್‌ ಇನ್ನೂ ಕ್ಷೇತ್ರದಲ್ಲಿ ಪ್ರಚಾರ ಚುರುಕುಗೊಳಿಸಿಲ್ಲ. ಇದರಿಂದ ಕಾಂಗ್ರೆಸ್‌ ಈಗಾಗಲೇ ಗೆಲುವಿನ ನಿರೀಕ್ಷೆಯಲ್ಲಿದೆ.

Advertisement

ಕ್ಷೇತ್ರದಲ್ಲಿ ಒಟ್ಟು ಎಂಟು ವಾರ್ಡ್‌ಗಳಿದ್ದು, ಐದರಲ್ಲಿ ಕಾಂಗ್ರೆಸ್‌, ಎರಡರಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಪೊರೇಟರ್‌ ಇದ್ದಾರೆ. ಈ ಲೆಕ್ಕಾಚಾರ  ಕಾಂಗ್ರೆಸ್‌ಗೆ ಅನುಕೂಲಕರವಾಗಿದೆ. ಆದರೆ, ಈ ಬಾರಿ ಹೊಂದಾಣಿಕೆ ರಾಜಕಾರಣ ನಡೆಯದಿದ್ದರೆ ಮತದಾರರ ತೀರ್ಪು ಯಾರ ಪರ ಎಂಬ ಕುತೂಹಲಕ್ಕೆ ತೆರೆ ಬೀಳಲು ಫ‌ಲಿತಾಂಶ ಬರುವವರೆಗೆ ಕಾಯಬೇಕು.

* ಎಂ.ಪ್ರದೀಪ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next