ಜೀವನ ಪಯಣದಲ್ಲಿ ಕಠಿಣ ಪರಿಶ್ರಮ, ನಿಶ್ಚಿತವಾದ ಗುರಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಮ್ಮ ಮುಂದೆ ಹಲವಾರು ಉದ್ಯಮಿಗಳು, ಐಎಎಸ್ ಅಧಿಕಾರಿಗಳು, ಕೃಷಿಕರು ಸೇರಿದಂತೆ ಹಲವು ಉದಾಹರಣೆಗಳಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ರಾಜೀಂದರ್ ಗುಪ್ತಾ…ಇವರು ಬೇರೆ ಯಾರೂ ಅಲ್ಲ ಪ್ರಸಿದ್ಧ ಟ್ರೈಡೆಂಟ್ ಸಮೂಹ ಸಂಸ್ಥೆಗಳ ಒಡೆಯ.
9ನೇ ತರಗತಿ ಡ್ರಾಪ್ ಔಟ್ ಆದ ಗುಪ್ತಾ…ಇಂದು ಕೋಟ್ಯಂತರ ರೂ. ಆಸ್ತಿಯ ಮಾಲೀಕ!
ಪಂಜಾಬ್ ನ ಪುಟ್ಟ ಹಳ್ಳಿಯೊಂದರಲ್ಲಿ ಅರೆಕಾಲಿಕ ಹತ್ತಿ ವ್ಯಾಪಾರಿಯ ಪುತ್ರ ರಾಜೀಂದರ್. ಪೋಷಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣದಿಂದಾಗಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಜೀಂದರನನ್ನು (14ವರ್ಷ) ಬಲವಂತವಾಗಿ ಶಾಲೆಯಿಂದ ಬಿಡಿಸಿದ್ದರು.
ದಿನಕ್ಕೆ 30 ರೂ. ಸಂಬಳ!
9ನೇ ತರಗತಿ ಡ್ರಾಪ್ ಔಟ್ ಆದ ರಾಜೀಂದರ್ ಅವರು ಸಿಮೆಂಟ್ ಪೈಪ್ ಮತ್ತು ಮೇಣದ ಬತ್ತಿ ತಯಾರಿಸುತ್ತಿದ್ದ ಘಟಕದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಂದು (1985) ರಾಜೀಂದರ್ ಅವರ ದಿನದ ಸಂಬಳ ಕೇವಲ 30 ರೂಪಾಯಿ. ಕೆಲವು ವರ್ಷಗಳ ಕಾಲ ಕೂಲಿ ಕಾರ್ಮಿಕನಾಗಿ ದುಡಿದ ನಂತರ ಗುಪ್ತಾ ಅವರು ತನ್ನದೇ ಆದ ಸ್ವಂತಃ ವ್ಯವಹಾರವನ್ನು ಆರಂಭಿಸಲು ನಿರ್ಧರಿಸಿಬಿಟ್ಟಿದ್ದರು. ಇದು ಗುಪ್ತಾ ಅವರ ಬದುಕಿನ ಅತೀ ದೊಡ್ಡ ಟರ್ನಿಂಗ್ ಪಾಯಿಂಟ್ ಎಂಬುದು ಅಂದು ಗುಪ್ತಾ ಕೂಡಾ ಊಹಿಸಿರಲಿಲ್ಲವಾಗಿತ್ತೇನೊ!
ಹೀಗೆ ಗುಪ್ತಾ ಅವರು ಆರಂಭಿಕವಾಗಿ 6.5 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಅಭಿಷೇಕ್ ಇಂಡಸ್ಟ್ರೀಸ್ ಅನ್ನು ಹುಟ್ಟುಹಾಕಿದ್ದರು. ಇದು ಗುಪ್ತಾ ಅವರ ಮೊದಲ ರಾಸಾಯನಿಕ ಉತ್ಪಾದನಾ ಘಟಕವಾಗಿತ್ತು. ಈ ಉದ್ಯಮದಲ್ಲಿ ಯಶಸ್ಸಿನ ಮೆಟ್ಟಿಲೇರಿದ ರಾಜೀಂದರ್ ಗುಪ್ತಾ ತಮ್ಮ ಉದ್ಯಮವನ್ನು ವಿಸ್ತರಿಸುವ ಐತಿಹಾಸಿಕ ನಿಲುವನ್ನು ತಳೆದಿದ್ದರು. ಇದರ ಪರಿಣಾಮ ಹತ್ತಿಯ ನೂಲು, ಕಾಗದ, ಹತ್ತಿಯ ದೊಡ್ಡ ಟವೆಲ್ ಉತ್ಪಾದನಾ ಕಾರ್ಖಾನೆಗಳನ್ನು ಸ್ಥಾಪಿಸಿದ್ದರು.
ಒಂದೊಂದೇ ಉದ್ಯಮವನ್ನು ಸ್ಥಾಪಿಸುತ್ತಾ ಸಾಗಿದ ಫಲಿತಾಂಶವೇ ಗುಪ್ತಾ ಅವರು 1990ರ ಏಪ್ರಿಲ್ 18ರಂದು ಟ್ರೈಡೆಂಟ್ ಲಿಮಿಟೆಡ್ ಕಂಪನಿಯನ್ನು ಹುಟ್ಟುಹಾಕಿದ್ದರು. ದಿನಕ್ಕೆ 30 ರೂಪಾಯಿ ಸಂಬಳ ಪಡೆಯುತ್ತಿದ್ದ ಗುಪ್ತಾ ಇಂದು 17 ಸಾವಿರ ಕೋಟಿ ರೂ. ಆಸ್ತಿಯ ಒಡೆಯ. ಅಷ್ಟೇ ಅಲ್ಲ ಗುಪ್ತಾ ಅವರನ್ನು ಪಂಜಾಬ್ ನ ಧೀರೂಭಾಯಿ ಅಂಬಾನಿ ಎಂದೇ ಕರೆಯಲಾಗುತ್ತಿದೆ.
ಸರಣಿ ಕಾರ್ಯಕ್ರಮಗಳ ಮೂಲಕ ತಮ್ಮ ಗ್ರಾಹಕರ ಜಾಲವನ್ನು ವಿಸ್ತರಿಸಿದ ಟ್ರೈಡೆಂಡ್ ಸಮೂಹ ಸಂಸ್ಥೆ 75 ದೇಶಗಳಲ್ಲಿ ಹಾಗೂ ಆರು ಕಾಂಟಿನೆಂಟ್ಸ್ ನಲ್ಲಿ ಬೇರೂರುವ ಮೂಲಕ ಹತ್ತು ಸಾವಿರಕ್ಕೂ ಅಧಿಕ ನೇರ ಮತ್ತು 20 ಸಾವಿರಕ್ಕೂ ಅಧಿಕ ಪರೋಕ್ಷ ನೌಕರರಿಗೆ ಉದ್ಯೋಗವನ್ನು ನೀಡಿದ ಹೆಗ್ಗಳಿಕೆ ಗುಪ್ತಾ ಅವರದ್ದಾಗಿದೆ.
ಟ್ರೈಡೆಂಡ್ ಕಂಪನಿ ಪ್ರತಿಷ್ಠಿತ ರಾಲ್ಫಾ ಲೌರೇನ್, ವಾಲ್ ಮಾರ್ಟ್, ಐಕೆಇಎ, ಜೆಸಿ ಪೆನೈ, ಕಾಲ್ವಿನ್ ನಂತಹ ಕಂಪನಿಗಳ ಜೊತೆ ಸಹಯೋಗ ಹೊಂದಿದೆ. ಅನಾರೋಗ್ಯದ ಕಾರಣದಿಂದ 2022ರಲ್ಲಿ ರಾಜೀಂದರ್ ಗುಪ್ತಾ ಅವರು ಟ್ರೈಡೆಂಟ್ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಠಿಣ ಪರಿಶ್ರಮದೊಂದಿಗೆ ಬಹುಕೋಟಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಗುಪ್ತಾ ಅವರ ಯಶೋಗಾಥೆ ಪಂಜಾಬ್ ನ ವಾಣಿಜ್ಯ ಕಾಲೇಜುಗಳಲ್ಲಿ ಪಠ್ಯವಾಗಿ ಬೋಧಿಸಲಾಗುತ್ತಿದೆ.