Advertisement
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕ ಕಳಲೆ ಎನ್.ಕೇಶವಮೂರ್ತಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಚುನಾವಣೆಗೆ ಸಜಾjಗುತ್ತಿದ್ದರೆ, ಉಪ ಚುನಾವಣೆಯ ಭಾರೀ ಜಿದ್ದಾಜಿದ್ದಿನ ಕಾಳಗದಲ್ಲಿ ಸೋಲುಂಡಿರುವ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಅವರು ಸೋಲಿನ ಸೇಡು ತೀರಿಸಿಕೊಳ್ಳಲು ತಂತ್ರಗಾರಿಕೆಯಲ್ಲಿ ನಿರತರಾಗಿದ್ದರೆ, ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಜೆಡಿಎಸ್, ನಂಜನಗೂಡು ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
Related Articles
Advertisement
ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೈ ಬಿಟ್ಟ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನಗೊಂಡು ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
ಇದರಿಂದ ಎದುರಾದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಕಳಲೆ ಕೇಶವಮೂರ್ತಿ ಅವರು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾದರೆ, ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ನಡೆದ ಸ್ಪರ್ಧೆಯನ್ನು ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಸ್ವತಃ ಯಡಿಯೂರಪ್ಪಅವರು ತಿಂಗಳುಗಳ ಕಾಲ ಠಿಕಾಣಿ ಹೂಡಿ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಸಂಪುಟದ ಬಹುತೇಕ ಸಚಿವರು ವಾರಗಳ ಕಾಲ ನಂಜನಗೂಡಿನಲ್ಲಿ ಬೀಡುಬಿಟ್ಟು ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿದರೆ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಅವರ ಪುತ್ರ ಸುನೀಲ್ ಬೋಸ್ ಅವರ ವಿಶೇಷ ಪ್ರಯತ್ನದಿಂದಾಗಿ 86212 ಮತಗಳನ್ನು ಪಡೆದ ಕಳಲೆ ಕೇಶವಮೂರ್ತಿ ಗೆಲುವಿನ ನಗೆ ಬೀರಿದರೆ, ಶ್ರೀನಿವಾಸಪ್ರಸಾದ್ ಅವರು 64878 ಮತಗಳನ್ನು ಪಡೆದು 21334 ಮತಗಳ ಅಂತರದಿಂದ ಸೋಲನುಭವಿಸಿದರು.
ಕೈ ಟಿಕೆಟ್‌ಗೆ ಬೇರೆಯದೆ ಲೆಕ್ಕಾಚಾರ: ಮುಂಬರುವ ಚುನಾವಣೆಗೆ ಕಾಂಗ್ರೆಸ್‌ನಿಂದ ಹಾಲಿ ಶಾಸಕರಿಗೇ ಟಿಕೆಟ್ ಎನ್ನಲಾಗುತ್ತಿದ್ದರೂ ಪಕ್ಷದೊಳಗೆ ಅದರಲ್ಲೂ ಮುಖ್ಯಮಂತ್ರಿಯವರ ಆಪ್ತ ವಲಯದಲ್ಲಿ ಬೇರೆಯದೆ ಲೆಕ್ಕಾಚಾರಗಳು ನಡೆಯುತ್ತಿವೆ. ತಿ.ನರಸೀಪುರ ಕ್ಷೇತ್ರದಲ್ಲಿ ಕಳೆದ ಬಾರಿ ಪ್ರಯಾಸದ ಗೆಲುವು ಸಾಧಿಸಿದ್ದ ಸಚಿವ ಮಹದೇವಪ್ಪ ಅವರಿಗೆ ನಂಜನಗೂಡು ಕ್ಷೇತ್ರದ ಮೇಲೂ ಕಣ್ಣಿದೆ. ಅದಕ್ಕೆ ತಕ್ಕಂತೆ ಈಗಾಗಲೇ ಪೂರಕ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.
ಇತ್ತ ಬಿಜೆಪಿಯಲ್ಲಿ ಶ್ರೀನಿವಾಸಪ್ರಸಾದ್ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದರಿಂದ ಆ ಪಕ್ಷದ ಅಭ್ಯರ್ಥಿಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆಡೆ ಮಾಡಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಎರಡು ಬಾರಿ ಸೋಲನುಭವಿಸಿರುವ ಎಸ್.ಮಹಾದೇವಯ್ಯ, ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಅವರೂ ಆಕಾಂಕ್ಷಿಗಳಾಗಿದ್ದಾರೆ.
ಆದರೆ, ಬಿಜೆಪಿ ನಾಯಕರು ಮತ್ತು ಪ್ರಸಾದ್ ಅವರ ಬೆಂಬಲಿಗರು ಪ್ರಸಾದ್ ಅವರೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್‌ನಲ್ಲಿ ಸೋಮಸುಂದರ್ ಮತ್ತು ಬೆಳವಾಡಿ ಶಿವಕುಮಾರ್ ಆಕಾಂಕ್ಷಿಗಳಾಗಿದ್ದಾರೆ.
ಆದರೆ, ಶ್ರೀನಿವಾಸಪ್ರಸಾದ್ ಅವರು ತೆಗೆದುಕೊಳ್ಳುವ ತೀರ್ಮಾನವನ್ನು ಇತರೆ ಪಕ್ಷಗಳೂ ಎದುರು ನೋಡುತ್ತಿದೆ. ಸಚಿವ ಮಹದೇವಪ್ಪ ಕಾಂಗ್ರೆಸ್ ಟಿಕೆಟ್ ತಂದರೆ ಕಳಲೆ ಕೇಶವಮೂರ್ತಿ ಮತ್ತೆ ಹೊರೆ ಹೊತ್ತರೂ ಅಚ್ಚರಿ ಇಲ್ಲ. ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ಆಗದಿದ್ದಲ್ಲಿ ಜೆಡಿಎಸ್ ಬಿಜೆಪಿಯಿಂದ ಬರುವವರಿಗೆ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ.
* ಗಿರೀಶ್ ಹುಣಸೂರು