ಮಣಿಪುರ, ಈಶಾನ್ಯ ಚೆಲುವೆಯರ ತಪ್ಪಲು. ಅಲ್ಲಿ ಎಲ್ಲಿಯೇ ನೋಡಿ… ಕಣ್ಣಿಗೆ ಬೀಳ್ಳೋದು ಮಹಿಳೆಯರೇ. ಸುಂದರ ಕೆಲಸದಿಂದ, ಸವಾಲಿನ ಕೆಲಸದ ತನಕ ಕೈಬಳೆಗಳ ಸದ್ದೇ ಕೇಳುತ್ತದೆ. ಹೆಣ ಸುಡುವ ಹೊತ್ತಿಗೆ ಕಟ್ಟಿಗೆ ಹೊರುವುದರಿಂದ ಹಿಡಿದು, ವಿಮಾನ ನಿಲ್ದಾಣದ ಹೊರಗೆ ಆಟೋ ಓಡಿಸುವವರೆಗೆ ಹೆಣ್ಣಿನದ್ದೇ ಧ್ವನಿ ಕೇಳುತ್ತದೆ. ಹಾಗಾದರೆ, ಅಲ್ಲಿ ಗಂಡಸರು ಏನು ಮಾಡ್ತಿದ್ದಾರೆ?
ಅಲ್ಲಿ ಎಲ್ಲಿಯೇ ನೋಡಿ… ನೋಡುಗನ ಕಣ್ಣಲ್ಲಿ ಕೂರೋದು ಮಹಿಳೆಯೇ. ಪ್ರತಿ ಕೆಲಸದ ಹಿಂದೆ ಸಾರಥಿಯಂತೆ ಅವಳು ಸದಾ ಬ್ಯುಸಿ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು, ಇನ್ನಾಪಿ ಮಾರಾಟಕ್ಕೆ, ಶಾಲೆ ಫೀಸು ಕಟ್ಟಲು, ಇಮಾ ಮಾರುಕಟ್ಟೆಯಲ್ಲಿ, ಕಟ್ಟಿಗೆ ಒಡೆಯಲು, ಹೊಟೇಲ್ ನಡೆಸಲು, ಅಲ್ಲೆ ಗೆಲ್ಲೆಯ ಮೇಲೆ ಕೂತು ಹಣ ಎಣಿಸಿಕೊಳ್ಳಲು, ಮೀನು ಕತ್ತರಿಸಲು, ಮರಳಿ ಅಡುಗೆ ಬಡಿಸಲು, ತಂಬಾಕು ಜಗಿಯಲು, ಟಿಕೆಟ್ ಕೊಡಲು, ಟ್ರಾವೆಲ್ ಏಜೆಂಟು, ಲೋಕ್ತಾಕ ಲೇಕ್‌ನಲ್ಲಿ ದೋಣಿ ನಡೆಸುವ, ತೀರಾ ಮೀನು ಮಾರುವುದರಿಂದ ಹಿಡಿದು ಕೊನೆಗೆ ಹರತಾಳಕ್ಕೆ ರಸ್ತೆಯಲ್ಲಿ ಕೂರುವವರೆಗೂ ಅಲ್ಲಿ ಕಾಣುವುದು ಬರೀ ಮಹಿಳೆಯರೇ! ಅದೇನೋ ಗೊತ್ತಿಲ್ಲ, ಆ ರಾಜ್ಯ ತನ್ನೆಲ್ಲ ಹೊಣೆಯನ್ನು ಮಹಿಳೆಯ ತಲೆಮೇಲೆ ಕೂರಿಸಿಬಿಟ್ಟಿದೆ. ಬೆಳಗ್ಗೆ ಎದ್ದಾಗಿನಿಂದ ಸಂಜೆಯ ಐದರ ಹೊತ್ತಿಗೆ ಕಪ್ಪಡರುವ ರಸ್ತೆಯ ಸುಳಿವೇ ಇಲ್ಲದಂತೆ ಮಿಲಿಟರಿ ಆವರಿಸಿಕೊಳ್ಳುವ ಆ ಊರಿನಲ್ಲಿ ಯಾಕೆ ಹಿಂಗೆ ಹೆಂಗಸರದ್ದೇ ಸಾಮ್ರಾಜ್ಯ? ಪ್ರಶ್ನೆಗೆ ಅವರ ಇತಿಹಾಸವೇ ಉತ್ತರಿಸಬೇಕು. ಆದರೆ, ಪ್ರಸ್ತುತಕ್ಕೆ ಮಾತ್ರ ಮಾರಕವಾಗುತ್ತಿರುವ ಬೆಳವಣಿಗೆಗೂ ಅವರೇ ಉತ್ತರಿಸಿಕೊಳ್ಳಬೇಕಾದ ಜವಾಬ್ದಾರಿ, ಹೊಣೆಗಾರಿಕೆತನ ಎರಡಕ್ಕೂ ಈಡಾಗುತ್ತಿದ್ದಾರೆ.
ಅದೊಂದು ಪುಟಾಣಿ ರಾಜ್ಯ; ಮಣಿಪುರ. ಹೇಳಿಕೊಳ್ಳುವುದಕ್ಕೆ ರಾಜ್ಯ, ಆದರೆ ಜನಸಂಖ್ಯೆ ಮೂವತ್ತು ಲಕ್ಷವೂ ದಾಟುವುದಿಲ್ಲ. ಒಂದೆಡೆಗೆ ಅಂತರಾಷ್ಟ್ರೀಯ ಗಡಿ, ಇನ್ನೊಂದೆಡೆಗೆ ಮೂರು ರಾಜ್ಯಗಳೊಂದಿಗೆ ಕಣಿವೆಯನ್ನು ಹಂಚಿಕೊಂಡಿರುವ ರಾಜ್ಯದಲ್ಲಿ ಹಲವು ಶತಮಾನದಿಂದಲೂ ಮಹಿಳೆಯರದ್ದೇ ಗೌಜಿ. ಕಾರಣ, ತೀರ ಹಿಂದೆಲ್ಲಾ ಆರೆಂಟು ಶತಮಾನದ ಇತಿಹಾಸದಲ್ಲಿ ರಾಜನಿಗೆ ಇದ್ದ ಜನ ಬೆಂಬಲವೂ ಕಡಿಮೆ. ಹಾಗಾಗಿ, ಪ್ರತಿಪುರುಷ ಪ್ರಜೆಯೂ ಯಾವಾಗೆಂದರೆ ಆವಾಗ ರಾಜನ ರಕ್ಷಣೆ ಮತ್ತು ಕೆಲಸಕ್ಕೆ ಕರೆ ಕಳುಹಿಸಿದ ಕೂಡಲೇ ಸಿದ್ಧವಿರಬೇಕೆಂಬ ಕಟ್ಟಾಜ್ಞೆಗೆ ಬದ್ಧರಾಗಿದ್ದ ಜನತೆ ಅಕ್ಷರಶಃ ಮನೆ-ಮಠ ಬಿಟ್ಟು ನಡೆದುಬಿಡುತ್ತಿದ್ದರು.
ದಿನವೋ ತಿಂಗಳ್ಳೋ ಲೆಕ್ಕವಿರುತ್ತಿರಲಿಲ್ಲ. ಆಗೆಲ್ಲಾ ಇತ್ತ ಕುಟುಂಬ ಮತ್ತು ಅತ್ತ ಸಮಾಜ ಎಲ್ಲವನ್ನೂ ಸಂಭಾಳಿಸುವ ಹೊಣೆಗಾರಿಕೆ ಹೊತ್ತಿದ್ದು ಮನೆಯ ಹೆಂಗಸರೇ. ಆಗ ಬಹುಶಃ ಪರಿಪಾಠವಾಗಿ ಕುಟುಂಬದ ಯಜಮಾನತಿಯದ್ದೇ ಆಸ್ತಿಯಲ್ಲೂ ಹಿಡಿತದ ಪದ್ಧತಿ ಬಂದಿರಬೇಕು. ಅದೀಗಲೂ ಹುಡುಗಿಯೊಂದಿಗೆ ಆಸ್ತಿಯೂ ಅವಳ ಪಾಲಾಗುವ ಪರಿಪಾಠವೇ ಇದೆ. ಹೀಗೆ ಪ್ರತಿ ಹಂತದಲ್ಲೂ ಮಹಿಳೆಯು ಮಕ್ಕಳು, ಅವರ ಶಾಲೆ, ಕಚೇರಿ, ಮಾರುಕಟ್ಟೆ, ವ್ಯಾಪಾರ ವ್ಯವಹಾರ, ಔಷಧಿ, ರೋಗ-ರುಜಿನ, ಕೊನೆ ಕೊನೆಗೆ ಯಾರಾದರೂ ಸತ್ತರೆ ಹೆಂಗಸರೇ ಹೆಗಲು ಕೊಡುವವರೆಗೆ ಸಾಮಾಜಿಕ ವ್ಯವಸ್ಥೆಗೆ ಆಕೆ ಪಕ್ಕಾಗಿ ಬಿಟ್ಟಿದ್ದಳು. ಅದೀಗಲೂ ಚಾಲ್ತಿಯಲ್ಲಿದೆ.
ಕಾಯಿಪಲ್ಲೆ ಮಾರಾಟದಿಂದ ಹಿಡಿದು, ಹೆಣ ಹೊರುವವರೆಗೂ ಪ್ರತಿ ಕೆಲಸವನ್ನೂ ತಮ್ಮದೇ ಜವಾಬ್ದಾರಿ ಎಂದುಕೊಂಡಿರುವ ಮಹಿಳೆಯ ಈ ಗುಣದಿಂದಾಗಿ ಅಕ್ಷರಶಃ ಈಗಿನ ಪುರುಷ ವರ್ಗ ಇಲ್ಲಿ ದುಡಿಯದೇ ಕೂತುಬಿಟ್ಟಿದೆ. ಬೆಳಗೆದ್ದು ಮೀನು-ಮಾಂಸ ಮಾರಲು ಅವಳೇ ಹೋಗುತ್ತಾಳೆ, ಅಂಗಡಿ ಅವಳೇ ನಡೆಸುತ್ತಾಳೆ, ಆಸ್ಪತ್ರೆಗೆ, ಶಾಲೆಗೆ ಸರದಿಯಲ್ಲಿ ನಿಲ್ಲಲು, ರೇಶನ್ ತರಲು, ಮನೆಯಲ್ಲೇ ನೇಯುವ ಇನ್ನಾಫಿಗೆ ನೂಲು ಹಾಕುವುದು, ಅದಕ್ಕೇ ಕಚ್ಚಾ ಪದಾರ್ಥದಿಂದ ಬಣ್ಣದ ದಾರ ಮಾಡಿಕೊಡುವ ಗೃಹ ಕೈಗಾರಿಕೆ ನಡೆಸುವುದು, ಪಂಚಾಯಿತಿಕೆ, ಮಳೆಯಲ್ಲಿ ಇದ್ದ ಚೂರುಪಾರು ಜಮೀನಲ್ಲೂ ನೆಟ್ಟಿ ಮಾಡುವುದು, ಮೀನು ಸಾಕುವುದು, ಕೊನೆಗೆ ಊಟದ ಪಂಕ್ತಿಯಲ್ಲೂ ಅವಳೇ ಮೊದಲು. ಹೀಗೆ ಎಲ್ಲವನ್ನೂ ಮಾಡಿಕೊಳ್ಳುತ್ತಾ ಸಂಸಾರ ನಿಭಾಯಿಸುತ್ತಿರುವ ಪ್ರಮೀಳೆಯರ ನಾಡಿನಲ್ಲಿ ಹಳೆಯ ಅಭ್ಯಾಸಕ್ಕೆ ಪಕ್ಕಾಗಿ ಪುರುಷರೆಲ್ಲ ಈಗಲೂ ಹಾಗೆ ಕೂತಿದ್ದಾರೆ. ಈಗ ಯಾವ ರಾಜನೂ ಇಲ್ಲ ; ಕರೆದು ಕೆಲಸ ಕೊಟ್ಟು ವಿಚಾರಿಸುವವರೂ ಇಲ್ಲ. ಗಂಡಸರು ಮಾತ್ರ ದಂಡಿಯಾಗಿದ್ದಾರೆ. ಆದರೆ, ಕೆಲಸಕ್ಕೆ ಮಾತ್ರ ಒಲ್ಲರು. ಪರಿಣಾಮ ಎರಡು ರೀತಿಯದ್ದು , ಒಂದು ಈಗಲೂ ಆಕೆ ದುಡಿಯುತ್ತಲೇ ಇದ್ದಾಳೆ. ಕೆಲಸದ ರೀತಿನೀತಿ ಬದಲಾಗಿದೆ. ಆದರೆ ಜವಾಬ್ದಾರಿ ಬದಲಾಗಿಲ್ಲ. ಎರಡನೆಯದ್ದು ಹೊಸ ತಲೆಮಾರಿಗೆ ಇದು ಸರಿ ಬಾರದೇ ಸಾಮಾಜಿಕ ಸ್ಥಿತಿ ಪಲ್ಲಟವಾಗುತ್ತಿದೆ.
ಈಗಿನ ಹುಡುಗಿಯರು ಓದು ಮತ್ತು ಹೊರಗಿನ ನೌಕರಿ, ಅದೂ ಇದೂ ಎಂದು ಬದಲಾವಣೆಗೂ ವ್ಯವಸ್ಥೆಯ ಹೊಸ ಹೊಳಪುಗಳಿಗೂ ಪಕ್ಕಾಗುತ್ತಿದ್ದರೆ, ಮನೆಯಲ್ಲಿ ಹಿರಿಯರೊಂದಿಗೆ ಅಂಥಾ ಸಲುಗೆಯ ವಾತಾವರಣ ಇರದ, ಮಾನಸಿಕ ಅಂತರದ ಕಾರಣ ಹುಡುಗರು ಮನೆತನದ ವ್ಯವಸ್ಥೆಗೆ ಒಗ್ಗದೆ ಕುಡಿತ ಮತ್ತು ಮೊಬೈಲ್ ವ್ಯಸನಿಗಳಾಗಿದ್ದಾರೆ. ಇದ್ದ ತಲೆಮಾರು ಹಳೆಯದಾಗುತ್ತಿದೆ ಮತ್ತು ಸಂಪೂರ್ಣ ಜವಾಬ್ದಾರಿ ಹೊತ್ತೂ ಹೊತ್ತೂ ಹೈರಾಣಾಗಿದ್ದೂ ನಿಜ. ಆದರೆ, ಬದಲಾಗಬೇಕಿರುವ ಹೊಸಪೀಳಿಗೆ ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುತ್ತಿದೆ. ಜೊತೆಗೆ ಸುತ್ತ ಬರೀ ಪರ್ವತ ಮತ್ತು ಕಣಿವೆಯ ಸಾಮ್ರಾಜ್ಯವಾಗಿರುವ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ವ್ಯವಹಾರಿಕ ಬದಲಾವಣೆ ತರುವುದೂ ಅಷ್ಟು ಸುಲಭವಲ್ಲ. ಏನಿದ್ದರೂ ಅದು ಮತ್ತೆ ಮನೆಯಿಂದಲೇ ಆರಂಭವಾಗಬೇಕಿದೆ.
ಆದರೆ, ಆಧುನಿಕತೆಯ ಜೊತೆಗಿನ ಕೌಟುಂಬಿಕ ಸಂಘರ್ಷದ ಮಧ್ಯದಲ್ಲಿ ಎಲ್ಲಿಯೋ ಒಂದೆಡೆಗೆ ಆಗಬೇಕಾದ ಸಂಧಿಬಿಂದು ಉದ್ಭವವಾಗುತ್ತಲೇ ಇಲ್ಲ. ಹಾಗಾಗಿ, ಮಣಿಪುರ ಚೆಂದ ನಾಡಿನ ನಡುವೆಯೂ ಕೊರತೆ ಮತ್ತು ಸಾಮಾಜಿಕ ಸ್ವಾಸ್ಥದಲ್ಲಿ ವೇಗದಿಂದ ಸಾಗುತ್ತಿದೆ. ಒಂದು ಕಾಲದವರೆಗೂ ಪೂರ್ತಿ ರಾಜ್ಯ ಸಂಭಾಳಿಸಿದ ಹಳೆಯ ತಲೆಮಾರಿನ ಮಹಿಳೆಯರು, ಬರಲಿರುವ ದಿನಗಳ ಬಗ್ಗೆ ಸಹಜ ಚಿಂತಿತರು. ಆದರೆ, ಸರಿಪಡಿಸಬೇಕಾದ ಹೊಸಪೀಳಿಗೆ ಮತ್ತು ವ್ಯವಸ್ಥೆ ಎರಡೂ ನೆಟ್‌ವರ್ಕಿನಲ್ಲಿ ಬ್ಯುಸಿ.
ಸಂತೋಷ ಕುಮಾರ್ ಮೆಹಂದಳೆ