Advertisement
ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಮೇಲೆ ತೆಲಂಗಾಣದ ರಾಜಕೀಯ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಕಾಂಗ್ರೆಸ್ ಫಿನಿಕ್ಸ್ ಪಕ್ಷಿಯಂತೆ ಎದ್ದುಕುಳಿತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಕಾಂಗ್ರೆಸ್ ಬಿಟ್ಟು, ಬಿಜೆಪಿ ಮತ್ತು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಸೇರಿದ್ದ ನಾಯಕರೆಲ್ಲರೂ ಘರ್‌ವಾಪ್ಸಿಯತ್ತ ಮುಂದಾಗುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆಯಲ್ಲಿ ಬಿಜೆಪಿಗೆ ಹೊಡೆತ ನೀಡಿದ್ದರೆ, ಬಿಆರ್‌ಎಸ್ ತನ್ನ ಚುನಾವಣ ತಂತ್ರ ಬದಲಿಸಿಕೊಳ್ಳುವತ್ತ ಮುನ್ನಡೆದಿದೆ.
Related Articles
Advertisement
ಇದರ ಜತೆಗೆ ಕರ್ನಾಟಕದಿಂದಲೂ ಕಾಂಗ್ರೆಸ್ ನಾಯಕರು ತೆಲಂಗಾಣಕ್ಕೆ ತೆರಳಿ, ಪ್ರಚಾರ ಕೈಗೊಳ್ಳಲಿದ್ದಾರೆ. ಹಾಗೆಯೇ ಇಲ್ಲಿ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದ ತಂಡವೇ ತೆಲಂಗಾಣಕ್ಕೂ ಹೋಗಿದೆ ಎಂಬ ಮಾತುಗಳೂ ಇವೆ. ಒಟ್ಟಾರೆಯಾಗಿ ಕಾಂಗ್ರೆಸ್ ಸರ್ವಬಲದೊಂದಿಗೆ ತೆಲಂಗಾಣ ಚುನಾವಣೆಯಲ್ಲಿ ಗೆಲ್ಲಲು ಮುಂದಾಗಿದೆ. ಸದ್ಯಕ್ಕೆ ಸಿಎಂ ಅಭ್ಯರ್ಥಿ ಬಗ್ಗೆ ಘೋಷಣೆ ಮಾಡದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುವ ಇರಾದೆಯೂ ಕಾಂಗ್ರೆಸ್‌ಗಿದೆ.
ಬಿಆರ್‌ಎಸ್ ಮೇಲಿನ ಕಾಂಗ್ರೆಸ್ ಸಿಟ್ಟಿಗೆ ಕಾರಣವೂ ಇದೆ. ದೇಶ ಮಟ್ಟದಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್ ಸೇರಿ 26 ಪಕ್ಷಗಳು ಐಎನ್‌ಡಿಐಎ ಮೈತ್ರಿಕೂಟ ಮಾಡಿಕೊಂಡಿವೆ. ಇದರಲ್ಲಿ ಬಿಆರ್‌ಎಸ್ ಸೇರಿಲ್ಲ. ಅತ್ತ ಬಿಆರ್‌ಎಸ್ ಎನ್‌ಡಿಎ ಮೈತ್ರಿಕೂಟದಲ್ಲೂ ಇಲ್ಲ. ಬಿಜೆಪಿ-ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡು ತೆಲಂಗಾಣದಲ್ಲಿ ತನ್ನ ಅಸ್ತಿತ್ವ ತೋರಿಸಬೇಕಾದ ಸ್ಥಿತಿಯಲ್ಲಿ ಬಿಆರ್‌ಎಸ್ ಇದೆ.
ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆ ಬಿಜೆಪಿಗಿಂತಲೂ ಬಿಆರ್‌ಎಸ್‌ಗೆ ಹೆಚ್ಚು ತಲೆನೋವು ತಂದಿದೆ. ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಗೆದ್ದು, ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಮುಂದಾಗಿರುವ ಕೆ.ಚಂದ್ರಶೇಖರ ರಾವ್ ಅವರು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದರು. ರಾಜ್ಯದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಅಂದರೆ ಬಹುಸಂಖಾಕ ಹಿಂದು ಮತ್ತು ಅಲ್ಪಸಂಖ್ಯಾಕರಾಗಿರುವ ಮುಸಲ್ಮಾನರನ್ನೂ ಅವರು ಓಲೈಕೆ ಮಾಡಿಕೊಂಡು, ಇಬ್ಬರಿಗೂ ಬೇಕಾದ ಯೋಜನೆಗಳನ್ನೂ ನೀಡಿದ್ದಾರೆ. ಅಲ್ಲದೆ ತೆಲಂಗಾಣದ ಎಐಎಂಐಎಂನ ಅಸ್ಸಾವುದ್ದೀನ್ ಓವೈಸಿ ಕೂಡ ಚಂದ್ರಶೇಖರ್ ರಾವ್ ಅವರ ಜತೆಗೇ ಇದ್ದಾರೆ. ಹೀಗಾಗಿ ಕಳೆದ ಎರಡು ಬಾರಿಯೂ ಮುಸ್ಲಿಂ ಮತಗಳು ಬಿಆರ್‌ಎಸ್ ಬಿಟ್ಟಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಗಟ್ಟಿಯಾದರೆ ಎಲ್ಲಿ ಮುಸ್ಲಿಂ ಮತಗಳು ಬಿಟ್ಟು ಹೋಗುತ್ತವೆಯೋ ಎಂಬ ಆತಂಕವೂ ಕೆಸಿಆರ್ ಅವರಲ್ಲಿದೆ.
ಹೀಗಾಗಿಯೇ ಎಲ್ಲರಿಗಿಂತ ಮುಂಚೆ ಕೆಸಿಆರ್ ಚುನಾವಣೆಗೆ ಸಜ್ಜಾಗಿದ್ದಾರೆ. ಈಗಾಗಲೇ 119 ಕ್ಷೇತ್ರಗಳಲ್ಲಿ 115 ಸ್ಥಾನಗಳಿಗೆ ಬಿಆರ್‌ಎಸ್ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೆಲಂಗಾಣ ಒಂದು ಅಚ್ಚರಿಯ ವಿದ್ಯಮಾನಕ್ಕೂ ಸಾಕ್ಷಿಯಾಗುತ್ತಿದೆ. ಈ ಹಿಂದಿನಿಂದಲೂ ಬಿಆರ್‌ಎಸ್ ನಾಯಕರು ಮತ್ತು ಬಿಜೆಪಿ ನಡುವೆ ಅಷ್ಟಕ್ಕಷ್ಟೇ ಎಂಬ ಸಂಬಂಧವಿತ್ತು. ತೆಲಂಗಾಣಕ್ಕೆ ಪ್ರಧಾನಿ ತೆರಳಿದಾಗಲೂ ಸಿಎಂ ಚಂದ್ರಶೇಖರ ರಾವ್ ಅವರನ್ನು ಸ್ವಾಗತಿಸಲು ಹೋಗಿರಲಿಲ್ಲ. ಹೆಚ್ಚು ಕಡಿಮೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆ.ಚಂದ್ರಶೇಖರ ರಾವ್ ಮುಖಾಮುಖೀಯಾಗೇ ಇಲ್ಲ.
ಆದರೆ ಇತ್ತೀಚೆಗೆ ಬಿಆರ್‌ಎಸ್ ಮತ್ತು ಬಿಜೆಪಿ ನಡುವೆ ದೊಡ್ಡ ಪ್ರಮಾಣದಲ್ಲಿ ವಾಕ್ಸಮರ ನಡೆಯುತ್ತಿಲ್ಲ. ಇನ್ನೂ ವಿಶೇಷವೆಂದರೆ ಕೆ.ಚಂದ್ರಶೇಖರ ರಾವ್ ಅವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಾಗ, ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಬೈದರೇ ಹೊರತು, ಬಿಜೆಪಿ ಬಗ್ಗೆ ಯಾವುದೇ ಮಾತುಗಳನ್ನಾಡಲಿಲ್ಲ. ಹೀಗಾಗಿ ತೆಲಂಗಾಣದಲ್ಲಿ ಹೊಸ ರಾಜಕೀಯ ಸ್ಥಿತ್ಯಂತರವಾಗಿರಬಹುದು ಎಂಬ ಅನಿಸಿಕೆಗಳೂ ಕೇಳಿಬಂದಿವೆ.
ಇದಕ್ಕೆ ಪೂರಕವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೆಲಂಗಾಣ ಪ್ರವಾಸದ ವೇಳೆ ಬಿಆರ್‌ಎಸ್, ಬಿಜೆಪಿಯ ಬಿ ಟೀಂ ಎಂದು ಆರೋಪಿಸಿದ್ದರು. ಇವರ ಆರೋಪದ ಹಿಂದೆ ಚುನಾವಣ ಕಾರ್ಯತಂತ್ರವೂ ಇದೆ. ಅಂದರೆ ಬಿಆರ್‌ಎಸ್ ಮತ್ತು ಬಿಜೆಪಿ ಒಂದಾಗುತ್ತಿವೆ ಎಂದು ಜನರಿಗೆ ಮನವರಿಕೆ ಮಾಡಿದರೆ, ಅಲ್ಪಸಂಖ್ಯಾಕ ಮತಗಳು ಕಾಂಗ್ರೆಸ್ ಕಡೆಗೆ ಬರಬಹುದು ಎಂಬುದು ಪಕ್ಷದ ನಾಯಕರ ಆಲೋಚನೆ. ಹೀಗಾಗಿಯೇ ಬಿಆರ್‌ಎಸ್ ಬಿಜೆಪಿಯ ಬಿ ಟೀಂ ಎಂದು ಕರೆದಿದ್ದಾರೆ.
ಖರ್ಗೆ ಅನಂತರ ಅಮಿತ್ ಶಾ ಅವರೂ ತೆಲಂಗಾಣ ಪ್ರವಾಸ ಕೈಗೊಂಡಿದ್ದು, ಬಿಜೆಪಿ-ಬಿಆರ್‌ಎಸ್ ನಡುವೆ ಅಂಥ ಯಾವುದೇ ಒಪ್ಪಂದಗಳಾಗಿಲ್ಲ ಎಂಬ ಬಗ್ಗೆ ಸ್ಪಷ್ಟ ಪಡಿಸಲು ಮುಂದಾಗಿದ್ದಾರೆ. ಹೀಗಾಗಿಯೇ ಬಿಆರ್‌ಎಸ್ ವಿರುದ್ಧ 4ಜಿ, 2ಜಿ ವಿಚಾರದಲ್ಲಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಮೊಲದ ವೇಗದಲ್ಲಿ ಚುನಾವಣ ಸಿದ್ಧತೆ ನಡೆಸಿದ್ದರೆ ಬಿಜೆಪಿ ತನ್ನದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದೆ. ಸದ್ಯ ಪಕ್ಷಾಂತರ ಮಾಡಿ ಬಂದಿದ್ದ ನಾಯಕರು ವಾಪಸ್ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನತ್ತ ಹೋಗುತ್ತಿರುವುದು ಬಿಜೆಪಿಗೆ ಕೊಂಚ ಹಿನ‚°ಡೆಯೇ. ಅಲ್ಲದೆ ಈ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಬಂಡಿ ಸಂಜಯ್‌ಕುಮಾರ್ ಅವರನ್ನು ಕೆಳಗಿಳಿಸಿ, ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಗಟ್ಟಿ ನಾಯಕತ್ವ ನೀಡಬೇಕು ಎಂಬುದು ಅದರ ಗುರಿ. ಅಲ್ಲದೆ ಕರ್ನಾಟಕದ ಒಂದಷ್ಟು ಬಿಜೆಪಿ ನಾಯಕರನ್ನು ತೆಲಂಗಾಣದಲ್ಲಿ ಚುನಾವಣ ಕಾರ್ಯತಂತ್ರಕ್ಕೆ ನೇಮಕ ಮಾಡಲಾಗಿದೆ.
ಏನೇ ಆಗಲಿ ಈ ಬಾರಿ ತೆಲಂಗಾಣದಲ್ಲಿ ಬಿಆರ್‌ಎಸ್ ವರ್ಸಸ್ ಕಾಂಗ್ರೆಸ್ ನಡುವೆ ಫೈಟ್ ನಡೆಯುವ ಸಾಧ್ಯತೆಗಳು ಹೆಚ್ಚು ಎಂದೇ ವಿಶ್ಲೇಷಿಸಲಾಗುತ್ತಿದೆ. ಲೋಕಸಭೆ ವೇಳೆ ಮತಹಾಕಿದವರು ವಿಧಾನಸಭೆಯಲ್ಲಿ ಬಿಜೆಪಿಗೆ ಹಾಕಬಹುದು ಎಂಬುದು ಇನ್ನೂ ದೃಢಪಟ್ಟಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಆದರೂ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ವೇಳೆ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಈಗ ಎಲ್ಲ ಬದಲಾಗಿದ್ದು, ಪಕ್ಷಗಳು ಹೇಗೆ ಕಾರ್ಯತಂತ್ರ ರೂಪಿಸುತ್ತವೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ.
ಸೋಮಶೇಖರ ಸಿ.ಜೆ.