ರಾಯಚೂರು: ಬಿಜೆಪಿಯ ಕಟ್ಟಾಳು ಜಿಲ್ಲೆಯ ಅಶೋಕ ಗಸ್ತಿಯವರಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡುವ ಮೂಲಕ ಪಕ್ಷ ಅಚ್ಚರಿ ಹಾದಿ ತುಳಿದಿದೆ. ಘಟಾನುಘಟಿ ನಾಯಕರನ್ನು ಬದಿಗೊತ್ತಿ ಇವರಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಿದೆ.
ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ನೀಡಿದೆ. ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ನೀಡಿದ್ದು, ಈ ಮೂಲಕ ಎರಡು ಸ್ಥಾನ ಕಲ್ಯಾಣ ಕರ್ನಾಟಕಕ್ಕೆ ದಕ್ಕಿದಂತಾಗಿದೆ.
ಆ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಸಾಮಾನ್ಯ ಕಾರ್ಯಕರ್ತರಿಗೂ ಬಿಜೆಪಿ ಸೂಕ್ತ ಸ್ಥಾನಮಾನ ನೀಡಲಿದೆ ಎಂಬ ಸಂದೇಶ ರವಾನಿಸಿದೆ. ಎಬಿವಿಪಿಯಿಂದ ಶುರುವಾಗಿ ಆರೆಸ್ಸೆಸ್ ನಲ್ಲಿ ಗುರುತಿಸಿಕೊಂಡಿದ್ದ ಗಸ್ತಿ ಈಗ ರಾಯಚೂರು ಬಳ್ಳಾರಿ ಕೊಪ್ಪಳ ಪ್ರಭಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಎರಡು ರಾಯಚೂರು ನಗರ ಕ್ಷೇತ್ರದ ಟಿಕೆಟ್ ಗೆ ಯತ್ನಿಸಿದ್ದರು ಸಿಕ್ಕಿರಲಿಲ್ಲ. ಆದರೆ ಈಗ ಘಟಾನುಘಟಿ ನಾಯಕರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ರಾಯಚೂರು ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಪಕ್ಷಕ್ಕಾಗಿ ದುಡಿದಿದ್ದಾರೆ. 30 ವರ್ಷ ಹೋರಾಟ, ಸಂಘಟನೆ ಚತುರನಾಗಿ ಸೇವೆ ಸಲ್ಲಿಸಿದ್ದ ಅಶೋಕ ಗಸ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ಸಿಕ್ಕಿರುವುದು ಅವರ ಶ್ರಮಕ್ಕೆ ತಕ್ಕ ಫಲ ಎಂದೇ ವಿಶ್ಲೇಷಿಸಲಾಗುತ್ತಿದೆ.