ಮೈಸೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ ಅನುದಾನದ ಲೆಕ್ಕ ಕೇಳಲು ಅಮಿತ್ ಶಾ ಯಾರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಸರಗೂರಿನಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರ ನೀಡಿರುವ ಅನುದಾನದ ಲೆಕ್ಕ ಕೇಳಲು ಅಮಿತ್ ಶಾ ಯಾರು? ಅವರೇನು ಸಂಸದರೇ? ಶಾಸಕರೇ ಎಂದು ಪ್ರಶ್ನಿಸಿದ ಅವರು, ನಾನು ಉತ್ತರ ನೀಡಬೇಕಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರು ಮತ್ತು ಸದನಕ್ಕೆ ಎಂದು ಹರಿಹಾಯ್ದರು.
ಇಷ್ಟಕ್ಕೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವುದು ಯಾರ ದುಡ್ಡು? ರಾಜ್ಯದಿಂದ ಸಂಗ್ರಹಿಸುವ ವಿವಿಧ ತೆರಿಗೆಯ ಹಣದಲ್ಲಿ ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕೇಂದ್ರ ನಮ್ಮ ಪಾಲನ್ನು ಕೊಡುತ್ತದೆ. ಇದರ ಜತೆಗೆ ಕೆಲ ಕಾರ್ಯಕ್ರಮಗಳಿಗೆ ಅನುದಾನವನ್ನೂ ನೀಡುತ್ತದೆ ಎಂದರು.
ಯುಪಿಎಗೆ ಲೆಕ್ಕ ಕೊಟ್ಟದ್ದರಾ?: ಕೇಂದ್ರ ಹಣಕಾಸು ಆಯೋಗ, ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಶೇ.60ರಷ್ಟನ್ನು ಕೇಂದ್ರಕ್ಕೆ ನೀಡಿ, ಶೇ. 40 ರಷ್ಟು ಹಣವನ್ನು ರಾಜ್ಯಕ್ಕೆ ನೀಡಲು ಶಿಫಾರಸು ಮಾಡುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುಜರಾತ್‌ಗೆ ಅನುದಾನ ನೀಡಿದಾಗ ಇವರು ಲೆಕ್ಕ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ 11 ಸಾವಿರ ಕೋಟಿ ರೂ.ಅನುದಾನ ಖೋತಾ ಆಗಿದೆ ಎಂದು ಅವರು ಹೇಳಿದರು. ಅಮಿತ್ ಶಾ ಎರಡನೇ ಬಾರಿಗೆ ಈ ರೀತಿ ಲೆಕ್ಕ ಕೇಳುತ್ತಿದ್ದಾರೆ. ಮಹಾರಾಷ್ಟ್ರಕ್ಕೆ 8 ಸಾವಿರ ಕೋಟಿ ರೂ.ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಕೊಟ್ಟಿರುವುದು ಕೇವಲ 1500 ಕೋಟಿ, ಮೊದಲು ಅದನ್ನು ಸರಿಪಡಿಸಲಿ, ಆನಂತರ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಹೇಳಿಕೆ ನೀಡಿಲ್ಲ: ಪಿಎಫ್ಐ ಸಂಘಟನೆಯನ್ನು ನಿಷೇಧಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಭಜರಂಗ ದಳ ನಿಷೇಧಿಸಲಿಲ್ಲ ಎಂದ ಮಾತ್ರಕ್ಕೆ ಆ ಸಂಘಟನೆಯನ್ನು ಬೆಂಬಲಿಸಿದಂತೆಯೇ? ಎಂದು ಪ್ರಶ್ನಿಸಿದ ಅವರು, ಪಿಎಫ್ಐ, ಎಸ್‌ಡಿಪಿಐ, ಭಜರಂಗ ದಳ ಸೇರಿದಂತೆ ಕೋಮುವಾದ ಬಿತ್ತುವ ಮೂಲಕ ಜನರಲ್ಲಿ ಅಶಾಂತಿ ಮೂಡಿಸುವ ಯಾವುದೇ ಸಂಘಟನೆಗಾದರೂ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಆರೆಸ್ಸೆಸ್, ಬಿಜೆಪಿ, ಭಜರಂಗದಳವರು ಉಗ್ರಗಾಮಿಗಳಿದ್ದಂತೆ ಎಂದು ಹೇಳಿದ್ದಕ್ಕೆ ಅವರೇಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎನ್ನುವಂತಾಡಬೇಕು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಿ ಎಂದು ನಾವೇನು ಕೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.