Advertisement

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ : ಹೆಚ್ ಡಿಕೆ ಹೇಳಿದ್ದೇನು?

05:05 PM Jan 28, 2022 | Team Udayavani |

ರಾಮನಗರ: ಈ ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

Advertisement

ಚನ್ನಪಟ್ಟದಲ್ಲಿ ಇಂದು ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ,ಮುಖ್ಯವಾಗಿ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಏನನ್ನೂ ಮಾಡದ ಕಾಂಗ್ರೆಸ್ ನಾಯಕರು, ನನಗೂ ಅವರಿಗೂ ಸಂಬಂಧ ಇಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆದರೆ ನನ್ನನ್ನ ಅವರು ಟಾರ್ಗೆಟ್ ಮಾಡಿದ್ದಾರೆ ಎಂದರು.

ನನ್ನನ್ನು ಇಲ್ಲಿಂದ ಖಾಲಿ ಮಾಡಿಸುತ್ತಾರಂತೆ

ಅವರಿಗೆ ಕುಮಾರಸ್ವಾಮಿಯನ್ನು ರಾಮನಗರದಿಂದ ಖಾಲಿ ಮಾಡಿಸಬೇಕಂತೆ. ನನ್ನನ್ನು ಖಾಲಿ ಮಾಡಿಸಲು ಆಗುತ್ತಾ ಅನ್ನುವುದು ಅವರಿಗೆ ಗೊತ್ತಿಲ್ಲ. ರಾಮನಗರ ಜಿಲ್ಲೆಗೂ ನನಗೂ ಇರುವ ಸಂಬಂಧ ಸಾವಿರಾರು ಬಾರಿ ಹೇಳಿದ್ದೇನೆ. ನನಗೂ ಈ ಜಿಲ್ಲೆಗೂ ತಾಯಿ ಮಗನ ಸಂಬಂಧ ಇದೆ ಎಂದು ತಿರುಗೇಟು ನೀಡಿದರು.

ಅವರು ಹಣದ ಮೂಲಕ, ದಬ್ಬಾಳಿಕೆ ಮೂಲಕ ಕುಮಾರಸ್ವಾಮಿಯನ್ನು ಬಗ್ಗುಬಡಿಯಲು ಇನ್ನು ಹತ್ತು ಜನ್ಮ ಎತ್ತಿ ಬರಬೇಕು. ಈ ಜಿಲ್ಲೆಯ ಜನರಿಗೂ ದೇವೇಗೌಡರ ಕುಟುಂಬಕ್ಕೆ ಪೂರ್ವ ಜನ್ಮದ ಸಂಬಂಧ ಇದೆ. ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡ್ತೇವೆ ಎಂದಿದ್ದಾರೆ ಅವರು. ಒಂದಲ್ಲ, ಇನ್ನು ಹತ್ತು‌ ಪಾದಯಾತ್ರೆ ಮಾಡಲಿ, ಇದು ದುರಂಕಾರದ ಮಾತಲ್ಲ. ಅವರ ನಡವಳಿಕೆಗಳನ್ನ‌ ಅರ್ಥ ಮಾಡಕೊಂಡಿದ್ದೇನೆ ಎಂದರು ಅವರು.

Advertisement

ಈ ಜಿಲ್ಲೆಯ ಜನರನ್ನು ಗೆಲ್ಲೋದು ಅಷ್ಟು ಸುಲಭವಲ್ಲ. ಪ್ರೀತಿ, ವಿಶ್ವಾಸ, ದುಡಿಮೆ ಇದ್ದರಷ್ಟೇ ಜಿಲ್ಲೆಯಲ್ಲಿ ಉಳಿಯಲು ಸಾಧ್ಯ. ಹಣಕ್ಕೆ ಇಲ್ಲಿ ಬೆಲೆ ಇಲ್ಲ ಎಂದರು.

ಪುಟ್ಟರಾಜು – ಸಿದ್ದರಾಮಯ್ಯ ಭೇಟಿ ಬಗ್ಗೆ ಗೊತ್ತಿಲ್ಲ

ಸಿ.ಎಸ್.ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತರೋ ಅದನ್ನು ಕಟ್ಟಿಕೊಂಡು ನನಗೇನಾಗಬೇಕು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು. ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರೆ ಅಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದರು.

ಕಾರ್ಯಕರ್ತರಿಂದ ಮುಖಂಡರು ಉದ್ಭವ ಆಗುತ್ತಾರೆ. ಬಹಳಷ್ಟು ಜನ ಮುಖಂಡರು ಜೆಡಿಎಸ್ ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದು ಮಾಜಿ ಸಿಎಂ ತಿಳಿಸಿದರು.

ಇಬ್ರಾಹಿಂ ನಮ್ಮವರು

ಸಿ.ಎಂ.ಇಬ್ರಾಹಿಂ ಅವರು ನಮಗೆ ಹಳಬರು, ದೇವೇಗೌಡರ ಗರಡಿಯಲ್ಲಿ ಬೆಳೆದವರು. ನಾನು ಸಿದ್ದರಾಮಯ್ಯ ಜತೆ ಹೋಗಿ ದೇವೇಗೌಡರನ್ನು ದೂರ ಮಾಡಿಕೊಂಡೆ. ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ನಾನು ಜೆಡಿಎಸ್ ಸೇರ್ತೇನೆಂದು ಸ್ವತಃ ಅವರೇ ಹೇಳಿದ್ದಾರೆ. ಅವರಿಗೆ ನಾನು ಸ್ವಾಗತ ಮಾಡುತ್ತೇನೆ ಎಂದರು.

ಸರಕಾರಕ್ಕೆ 6 ತಿಂಗಳು ಜನ ತೀರ್ಮಾನ ಮಾಡುತ್ತಾರೆ

ರಾಜ್ಯ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ. ಆ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಇನ್ನೂ ಒಂದು ವರ್ಷ ಇದೆ. ಅದರ ಬಗ್ಗೆ ನಾನೇಕೆ ಹೇಳಲಿ ಎಂದರು.

ಅವರು ಈಗಾಗಲೇ ದೊಡ್ಡ ದೊಡ್ಡ ಜಾಹಿರಾತುಗಳ ಮೂಲಕ ಅವರ ಪ್ರಚಾರ ಪಡೆಯುತ್ತಿದ್ದಾರೆ. ಜನ ಸಾಮಾನ್ಯರ ಪರಿಸ್ಥಿತಿ ಬಗ್ಗೆ ಯಾರೂ ನೋಡುತ್ತಿಲ್ಲ. ಈ 6 ತಿಂಗಳು ಸರ್ಕಾರ ಇತ್ತು ಅನ್ನುವ ಭಾವನೆ ಜನರಲ್ಲಿ ಇಲ್ಲ ಎಂದ ಮಾಜಿ ಮುಖ್ಯಮಂತ್ರಿಗಳು; 2023 ಕ್ಕೆ ಯಾರ ಜೊತೆಗೂ ಮೈತ್ರಿ ಇಲ್ಲ. 123 ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇದೆ. ಕೋವಿಡ್ ವಾತವರಣ ಮುಗಿದ ನಂತರ ಮುಂದಿನ ಒಂದು ವರ್ಷ ಪಕ್ಷ ಸಂಘಟನೆ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾದುತ್ತೇವೆ. ಜೆಡಿಎಸ್ ಮುಗಿದೇ ಹೋಯ್ತು ಅನ್ನುವರಿಗೆ ಜನ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.

ಮಾಗಡಿ ಶಾಸಕ ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next