Advertisement

ಯಾರಿಗೆ ಎಐಸಿಸಿ ಪಟ್ಟ? ಇಂದು ಎಐಸಿಸಿ ಸ್ಥಾನಕ್ಕಾಗಿ ಚುನಾವಣೆ; ಬುಧವಾರ ಮತ ಎಣಿಕೆ

12:13 AM Oct 17, 2022 | Team Udayavani |

ಹೊಸದಿಲ್ಲಿ/ಬೆಂಗಳೂರು: ಕಾಂಗ್ರೆಸ್‌ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷೀಯ ಹುದ್ದೆಗಾಗಿ ಸೋಮವಾರ ಚುನಾವಣೆ ನಡೆಯುತ್ತಿದ್ದು, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಶಶಿ ತರೂರ್‌ ಅವರ ನಡುವೆ ಹಣಾಹಣಿ ಏರ್ಪಟ್ಟಿದೆ.

Advertisement

ಈಗಿನ ಲೆಕ್ಕಾಚಾರದಲ್ಲಿ ರಾಜ್ಯದ ಖರ್ಗೆ ಅವರಿಗೆ ಎಐಸಿಸಿ ಹುದ್ದೆ ಸಿಗುವುದು ಖಚಿತ. ಆದರೂ ಸೋಮವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸುಮಾರು 22 ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ 9,300 ಮಂದಿ ಮತ ಚಲಾವಣೆ ಮಾಡ ಲಿದ್ದಾರೆ. ಇದು ಬ್ಯಾಲೆಟ್‌ ಮೂಲಕ ನಡೆ ಯುವ ಮತದಾನವಾಗಿದ್ದು, ಮತದಾರರು ಖರ್ಗೆ ಅಥವಾ ತರೂರ್‌ ಅವರ ಹೆಸರಿನ ಮುಂದೆ ರೈಟ್‌ ಗುರುತು ಹಾಕಿ ಮತ ಚಲಾಯಿಸಬೇಕಾಗಿದೆ.

ಸಂಜೆಯ ಬಳಿಕ ಮತಪೆಟ್ಟಿಗೆಗಳನ್ನು ದಿಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಬುಧವಾರ ಫ‌ಲಿತಾಂಶ ಹೊರಬೀಳಲಿದ್ದು, 24 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಗಾಂಧಿಯೇತರ ಕುಟುಂಬದ ನಾಯಕ ರೊಬ್ಬರು ಎಐಸಿಸಿ ಅಧ್ಯಕ್ಷರಾಗಲಿದ್ದಾರೆ.

5 ಬಾರಿ ಮಾತ್ರ ಚುನಾವಣೆ
137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕಾಗಿ ಇದುವರೆಗೆ ಕೇವಲ ಐದು ಬಾರಿ ಅಂದರೆ 1939, 1950, 1977, 1997 ಮತ್ತು 2000ರಲ್ಲಿ ಮಾತ್ರ ಚುನಾವಣೆ ನಡೆದಿತ್ತು.

ಮತದಾರರು ಆಯಾ ರಾಜ್ಯಗಳಲ್ಲಿಯೇ ಮತ ಚಲಾಯಿಸಲಿದ್ದಾರೆ. ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಮತ್ತು ಇತರ 40 ಪಾದಯಾತ್ರಿಗಳು ಬಳ್ಳಾರಿಯಿಂದಲೇ ಮತ ಚಲಾವಣೆ ಮಾಡಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಪರ್ಕ) ಜೈರಾಮ್‌ ರಮೇಶ್‌ ಹೇಳಿದ್ದಾರೆ.

Advertisement

ರಾಜ್ಯದಲ್ಲಿ 503 ಪ್ರತಿನಿಧಿಗಳು
ಎಐಸಿಸಿ ಅಧ್ಯಕ್ಷರ ಚುನಾವಣೆಗಾಗಿ ರಾಜ್ಯದಲ್ಲೂ ಮತದಾನ ನಡೆಯಲಿದ್ದು, ರಾಜ್ಯದ 503 ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 4ರ ತನಕ ಕೆಪಿಸಿಸಿ ಕಚೇರಿಯಲ್ಲಿ ಮತದಾನ ನಡೆಯಲಿದ್ದು, ಮತದಾನದ ಹಕ್ಕು ಹೊಂದಿರುವ ಪ್ರತಿನಿಧಿಗಳು ಬ್ಯಾಲೆಟ್‌ ಪೇಪರ್‌ ಮೂಲಕ ತಮ್ಮ ಮತ ಹಾಕಲಿದ್ದಾರೆ. ಗೌಪ್ಯ ಮತ ದಾನ ನಡೆಯಲಿದ್ದು, ಇಡೀ ಚುನಾವಣ ಪ್ರಕ್ರಿಯೆಯನ್ನು “ಪ್ರದೇಶ ಚುನಾವಣ ಅಧಿಕಾರಿ’ (ಪಿಆರ್‌ಒ) ನಿರ್ವಹಿಸುತ್ತಾರೆ. ಕರ್ನಾಟಕದ ಪಿಆರ್‌ಒ ಆಗಿ ತಮಿಳುನಾಡಿನ ಮಾಜಿ ಸಂಸದ ನಾಚಿಯಪ್ಪನ್‌ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಕಾಂಗ್ರೆಸ್‌ನ ಸಂಘಟನ ವ್ಯವಸ್ಥೆಯಲ್ಲಿ ಬ್ಲಾಕ್‌ ಮಟ್ಟ ಇರುತ್ತದೆ. ಪ್ರತೀ ಬ್ಲಾಕ್‌ ಪ್ರತಿನಿಧಿಸುವ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಸಿಸಿ) ಸದಸ್ಯರು ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಮತದಾರರು ಆಗಿರುತ್ತಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ಅಥವಾ ಮೂರು ಬ್ಲಾಕ್‌ಗಳನ್ನು ಮಾಡಿರ ಲಾಗುತ್ತದೆ. ಅದರಂತೆ ಒಟ್ಟು 488 ಪಿಸಿಸಿ ಸದಸ್ಯರು ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದಿಂದ 15 ಪ್ರತಿನಿಧಿಗಳು ಸೇರಿ ಒಟ್ಟು 503 ಪ್ರತಿನಿಧಿಗಳು ಮತ ಹಾಕಲಿದ್ದಾರೆ.

ಹಿಂದಿನ ಚುನಾವಣೆಗಳ ಫ‌ಲಿತಾಂಶಗಳು
ಸ್ವಾತಂತ್ರ್ಯಾನಂತರಇದುವರೆಗೆ ಎಐಸಿಸಿ 17 ಅಧ್ಯಕ್ಷರನ್ನು ಕಂಡಿದೆ. ಇದರಲ್ಲಿ ಐವರು ಗಾಂಧಿ ಕುಟುಂಬದವರೇ ಆಗಿದ್ದಾರೆ.
1939 ಮಹಾತ್ಮಾ ಗಾಂಧಿ ಬೆಂಬಲಿತ ಪಿ. ಸೀತಾರಾಮಯ್ಯರನ್ನು ಸೋಲಿಸಿ, ಎಐಸಿಸಿ ಹುದ್ದೆಗೇರಿದ ಸುಭಾಷ್‌ಚಂದ್ರ ಬೋಸ್‌.
1950 ನೆಹರೂ ಬೆಂಬಲಿತ ಆಚಾರ್ಯ ಕೃಪಲಾನಿಯವರನ್ನು ಸೋಲಿಸಿದ ವಲ್ಲಭಬಾಯ್‌ ಪಟೇಲ್‌ ಬೆಂಬಲಿತ ಪುರುಷೋತ್ತಮ್‌ ದಾಸ್‌ ಟಂಡನ್‌.
1977 ಸಿದ್ಧಾರ್ಥ ಶಂಕರ ರಾಯ್‌ ಮತ್ತು ಕರಣ್‌ ಸಿಂಗ್‌ ಅವರನ್ನು ಸೋಲಿಸಿದ ಕೆ. ಬ್ರಹ್ಮಾನಂದ ರೆಡ್ಡಿ
1997 ಶರದ್‌ ಪವಾರ್‌, ರಾಜೇಶ್‌ ಪೈಲಟ್‌ ಅವರನ್ನು ಸೋಲಿಸಿದ ಸೀತಾರಾಂ ಕೇಸರಿ
2000 ಜೀತೇಂದ್ರ ಪ್ರಸಾದ್‌ರನ್ನು ಸೋಲಿಸಿ ಗದ್ದುಗೇರಿದ ಸೋನಿಯಾ ಗಾಂಧಿ.
2022 ಮಲ್ಲಿಕಾರ್ಜುನ ಖರ್ಗೆ ವರ್ಸಸ್‌ ಶಶಿ ತರೂರ್‌

ಆಸಕ್ತಿ ಇಲ್ಲದಿದ್ದರೂ ರಾಜ್ಯದ ಪ್ರಮುಖ ನಾಯಕರು, ರಾಷ್ಟ್ರ ಹಾಗೂ ಬೇರೆ ರಾಜ್ಯದ ನಾಯಕರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ.
– ಮಲ್ಲಿಕಾರ್ಜುನ ಖರ್ಗೆ

Advertisement

Udayavani is now on Telegram. Click here to join our channel and stay updated with the latest news.

Next