ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಕ್ಷೇತ್ರ ಬಿಟ್ಟುಕೊಡುವ ತೀರ್ಮಾನದ ಬಗ್ಗೆ ಕೆ. ಎಸ್.ಈಶ್ವರಪ್ಪ ಬ್ಯಾಟ್ ಬೀಸಿದ್ದು, ‘ಕುಟುಂಬ ರಾಜಕಾರಣ ಮಾಡದವರು ಯಾರಿಲ್ಲ?ನೆಹರು ಅವರಿಂದ ಹಿಡಿದು ಇಲ್ಲಿವರೆಗೂ ನೋಡಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ವಿಶೇಷತೆ ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. ನಾನು ಅನೇಕ ಬಾರಿ ಅವರ ಜತೆ ಇದ್ದೆ. ಅವರು ತೆಗೆದುಕೊಂಡಿದ್ದು ಸ್ಪಾಟ್ ಡಿಶಿಷನ್. 1989ರಿಂದ ನಾನು ಅವರನ್ನ ನೋಡಿದ್ದೇನೆ. ಅವರು ಏನು ಅನ್ನುವ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಸಣ್ಣವರು ಕೇಳುತ್ತಿರಲಿಲ್ಲ, ರಿಸಲ್ಟ್ ಬಂದ ನಂತರ ನಮಗೆ ಗೊತ್ತಾಗುತ್ತಿತ್ತು ಎಂದರು.
ರಾಜೀವ್, ಇಂದಿರಾ, ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಬಳಿಕ ಯಾವ ಪಾಪು ಗಾಂಧಿ ಬರ್ತಾರೋ ಗೊತ್ತಿಲ್ಲ.ದೇವೇಗೌಡರ ಕುಟುಂಬ ಕೂಡ ಇದೆ.ಶಿಕಾರಿ ಪುರದಿಂದ ಜನ ಬಂದಿದ್ದರು. ಜನರ ತೀರ್ಮಾನಕ್ಕೆ ಗೌರವ ಕೊಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಅವರ ಅಪ್ಪ, ಅಮ್ಮ ಅಂತ ಕೇಳದಿರೋದು ಎಲ್ಲಿದೆ. ಕಾಂಗ್ರೆಸ್ ನಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ.ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ನವರಾ? ಎಂದು ಪ್ರಶ್ನಿಸಿದರು.
ಡಿಕೆಶಿ ತಿಹಾರ್, ಪರಪ್ಪನ ಅಗ್ರಹಾರದಲ್ಲಿ ನಲಪಾಡ್ ಹೋಗಿದ್ದರು. ತಿಲಕ್ ಅವರು ಇಡೀ ದೇಶ ಒಟ್ಟಾಗಬೇಕು ಅಂತ ಗಣೇಶೋತ್ಸವ ಮಾಡಿದರು, ಒಕ್ಕಲಿಗರೆಲ್ಲಾ ಒಂದಾಗಿ ಅಂದಿದ್ದು ಡಿಕೆಶಿ ಅದು ಜಾತಿವಾದಿ. ಇಡೀ ಅಹಿಂದ ಒಂದಾಗಬೇಕು ಅಂತ ಜಾತಿ ಮಾಡಿದ್ದು ಸಿದ್ದರಾಮಯ್ಯ. ಇಡೀ ಕಾಂಗ್ರೆಸ್ ತುಂಬಾ ಜಾತಿವಾದಿಗಳೇ ತುಂಬಿದ್ದಾರೆ. ಆ ಜಾತಿಗೂ ಇವರು ಏನೂ ಮಾಡಿಲ್ಲ.ಡಿಕೆಶಿ ಹೇಳಲಿ ಏನು ಮಾಡಿದ್ದಾರೆ ಎಂದು, ಪರಮೇಶ್ವರ್ ಅವರನ್ನ ಸೋಲಿಸಿದರು. ಇವರು ಸಮಾಜವಾದ ಹಾಗೂ ಜಾತಿವಾದ ಮಾಡುತ್ತಿದ್ದಾರೆ.ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಒಂದಾಗಬೇಕು ಅನ್ನೋದು ಮೋದಿ ಅವರು.ಅವರನ್ನ ಕೋಮುವಾದಿ ಅನ್ನುತ್ತಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ನಿರ್ನಾಮ ಮಾಡಲು ಡಿಕೆಶಿ ಮತ್ತು ಸಿದ್ದರಾಮಯ್ಯ ಸಾಕು.ಜೊತೆಗೆ ನಲಪಾಡ್ ಅನ್ನೋ ಕುಡಿ ಸೇರಿಕೊಂಡಿದೆ. ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತೇನೆ ಅಂತ ಗೊತ್ತಾಗಿದೆ. ವರುಣಾ ಕ್ಷೆತ್ರದಲ್ಲಿ ಜನ ಗೆಲ್ಲಿಸಿಕೊಂಡು ಬಂದರು, ಬಾದಾಮಿ ಯಾಕೆ ಗೆದ್ದರು, ಈಗ ಯಾಕೆ ಬಾದಾಮಿ ಬಿಡುತ್ತಿದ್ದಾರೆ? ಹಿಂದೂಗಳು ಎಲ್ಲಿ ಜಾಸ್ತಿ ಇದ್ದಾರೆ ಅಲ್ಲಿ ಸಿದ್ದರಾಮಯ್ಯ ನಿಲ್ಲುವುದಿಲ್ಲ.ಚಾಮರಾಜಪೇಟೆಗೆ ಹೋಗುತ್ತಿದ್ದಾರೆ, ಜಮೀರ್ ಕಾಲು ಹಿಡಿಯುತ್ತಿದ್ದಾರೆ, ಅಪ್ಪಾ ಗೆಲ್ಸು ಅಂತ…ಕೇರಳದ ವಯನಾಡು ರಾಹುಲ್ ಗಾಂಧಿಗೆ, ಕರ್ನಾಟಕದ ಚಾಮರಾಜಪೇಟೆ ಸಿದ್ದರಾಮಯ್ಯಗೆ.ಎಂದು ಲೇವಡಿ ಮಾಡಿದರು.
ನಾನು ಈವರೆಗೂ ಇಂತದ್ದೇ ಮಾಡಿ ಅಂತ ಹೈಕಮಾಂಡ್ ಬಳಿ ಕೇಳಿಲ್ಲ. ಏನು ಹೇಳಿದರೂ ನಾನು ಮಾಡಲು ಸಿದ್ದ.ಇಂತವರಿಗೇ ತಾಳಿ ಕಟ್ಟು ಅಂದರೂ ಕಟ್ಟುತ್ತೇನೆ ಅಷ್ಟೇ. ಸಂಪುಟಕ್ಕೆ ಸೇರಿಸಿಕೊಳ್ಳಿ ಅಂತ ನಾನು ಈವರೆಗೂ ಸಿಎಂ ಬಳಿ ಹೋಗಿಲ್ಲ ಎಂದರು.