ಜಿನೇವಾ: ಚೀನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್ ವೈರಸ್, ವಿಶ್ವವನ್ನು ಆವರಿಸಿಕೊಂಡು 6 ತಿಂಗಳೇ ಕಳೆದಿದೆ. ಈಗ ವಿಶ್ವ ಆರೋಗ್ಯ ಸಂಸ್ಥೆ ರೋಗದ ಮೂಲ ಪತ್ತೆಹಚ್ಚಲು ಚೀನಕ್ಕೆ ಇಬ್ಬರು ತಜ್ಞರನ್ನು ಮುಂದಿನವಾರ ಕಳುಹಿಸುತ್ತೇನೆಂದು ಹೇಳಿದೆ! ಪ್ರಾಣಿ ಆರೋಗ್ಯದ ತಜ್ಞರು, ರೋಗಗಳ ಕ್ಷೇತ್ರಾಧ್ಯಯನದಲ್ಲಿ ನಿಷ್ಣಾತರಾಗಿರುವ ಇನ್ನೊಬ್ಬರು ಚೀನಕ್ಕೆ ತೆರಳಲಿದ್ದಾರೆ. ಅಲ್ಲಿ ಚೀನದ ಸಹವರ್ತಿಗಳೊಂದಿಗೆ ಸೇರಿಕೊಂಡು ರೋಗ ಹುಟ್ಟಿದ್ದು ಎಲ್ಲಿಂದ, ಏಕೆ ಎಂಬುದನ್ನು ಅಧ್ಯಯನ ನಡೆಸಲಿದ್ದಾರೆ.
ಇದರ ಜತೆಗೆ ಆರಂಭದ ಹಂತದಲ್ಲಿ ಮಾರಕ ಸೋಂಕಿನ ಬಗ್ಗೆ ಚೀನಕ್ಕೆ ಮಾಹಿತಿ ನೀಡಲಾಗಿತ್ತು ಎಂಬ ವ್ಯರ್ಥ ಸಮರ್ಥನೆಯನ್ನೂ ನೀಡಿದೆ. ಚೀನಕ್ಕೆ ತಂಡವನ್ನು ಕಳುಹಿಸುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತೃತ ಅಧ್ಯಯನಕ್ಕೆ ಕಾರಣವಾಗುವ, ರೋಗ ನಿಯಂತ್ರಿಸಲು ನೆರವಾಗುವ ನಿರೀಕ್ಷೆಯಿದೆ. ಇದಕ್ಕೂ ಮೊದಲು ರಾಜಕೀಯ ಜಟಾಪಟಿಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಗದ ಮೂಲ ಅಧ್ಯಯನ ಮಾಡಲು ಸಾಧ್ಯವಾಗಿರಲಿಲ್ಲ. ಅಮೆರಿಕ-ಚೀನ ಪರಸ್ಪರ ಆರೋಪದಲ್ಲಿ ತೊಡಗಿದ್ದು ಅಧ್ಯಯನಕ್ಕೆ ಅಡ್ಡಿಯಾಗಿತ್ತು. ಡಬ್ಲೂಎಚ್ಒ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಭಾರತ ಇರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ಶ್ಲಾಘನೆ: ಸೋಂಕು ಪರಿಸ್ಥಿತಿಯನ್ನು ಎದುರಿಸುತ್ತಿರುವ ಮತ್ತು ನಿಭಾಯಿಸುತ್ತಿರುವ ಭಾರತದ ಕ್ರಮಕ್ಕೆ ವಿಶ್ವ ಆರೋಗ್ಯಸಂಸ್ಥೆಯ ಮುಖ್ಯ ವಿಜ್ಞಾನಿ ಡಾ|ಸೌಮ್ಯಾ ಸ್ವಾಮಿನಾಥನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಕ್ರಮದ ಬಗ್ಗೆಯೂ ಇಷ್ಟೇ ಆಸ್ಥೆವಹಿಸಬೇಕು ಎಂದಿದ್ದಾರೆ. “ಎಎನ್‌ಐ’ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಎಷ್ಟು ಮಂದಿಗೆ ರೋಗ ಅಂಟಿದೆ, ಎಷ್ಟು ಮಂದಿ ಸತ್ತಿದ್ದಾರೆ ಎಂಬ ಅಂಕಿಸಂಖ್ಯೆಗಳಷ್ಟೇ ಸಾಲದು. ಅದರ ಜೊತೆಗೆ ರೋಗದ ವಿವಿಧ ರೀತಿಯ ವಿಶ್ಲೇಷಣೆಗಳನ್ನು ಅಂಕಿಅಂಶದ ಮೂಲಕ ನಡೆಸಬೇಕು. ಅದರಿಂದ ಭವಿಷ್ಯಕ್ಕೆ ಲಾಭವಿದೆ ಎಂದು ತಿಳಿಸಿದ್ದಾರೆ.
ಭಾರತ ಬೃಹತ್ ಜನಸಂಖ್ಯೆ ಹೊಂದಿದೆ, ವೈವಿಧ್ಯಮಯ ಭೌಗೋಳಿಕ ಲಕ್ಷಣಗಳು, ಜನರನ್ನು ಹೊಂದಿದೆ. ಆದ್ದರಿಂದ ರೋಗದ ವಿಶ್ಲೇಷಣೆ ನಡೆಸಲು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು. ಎಷ್ಟು ಪರೀಕ್ಷೆಗಳಾಗಿವೆ, ರೋಗಕ್ಕೆ ತುತ್ತಾಗುತ್ತಿರುವವರ ಪ್ರಮಾಣವೆಷ್ಟಿದೆ, ಉಳಿದುಕೊಳ್ಳುವವರ ಪ್ರಮಾಣವೆಷ್ಟಿದೆ ಎನ್ನುವುದನ್ನು ಪರಿಶೀಲಿಸಬೇಕು. ಆನಂತರ ರೋಗ ದುಪ್ಪಟ್ಟಾಗುವ ವೇಗದ ಮೇಲೆ ಕಣ್ಣಿಡಬಹುದು ಎಂದು ಡಾ|ಸೌಮ್ಯ ತಿಳಿಸಿದ್ದಾರೆ.
ಜನವರಿ ತಿಂಗಳಿಂದಲೇ ಕೊರೊನಾವನ್ನು ಭಾರತ ಬಲವಾಗಿ ನಿಭಾಯಿಸುತ್ತಿದೆ. ದಿಗ್ಬಂಧನವನ್ನು ವ್ಯವಸ್ಥಿತವಾಗಿ ಹೇರಿದ್ದು, ಪರೀಕ್ಷಾ ಕಿಟ್‌ಗಳ ತಯಾರಿಯಲ್ಲಿ ಸ್ವಾವಲಂಬನೆ ಸಾಧಿಸಿದ್ದರ ಬಗ್ಗೆ ಡೌ.ಸೌಮ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.