ಬೆಂಗಳೂರು: ರಸ್ತೆ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬಿಬಿಎಂಪಿ ಕೈಗೆತ್ತಿಕೊಂಡಿರುವ ಮೊದಲ ಹಂತದ ವೈಟ್ ಟಾಪಿಂಗ್ ಕಾಮಗಾರಿ ಪೈಕಿ 8.11 ಕಿ.ಮೀ. ರಸ್ತೆ ಜನವರಿ ಎರಡನೇ ವಾರದ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ.
ನಗರದ ಪ್ರಮುಖ ಐದು ರಸ್ತೆಗಳಲ್ಲಿ ಪಾಲಿಕೆಯಿಂದ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು ಸಂಚಾರ ದಟ್ಟಣೆಯಿಂದ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದ್ದು, ಅದರಂತೆ 8.11 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಕ್ಯೂರಿಂಗ್ ನಡೆಯುತ್ತಿದ್ದು ಜನವರಿ ಎರಡನೇ ವಾರದ ವೇಳೆಗೆ ವಾಹನ ಸಂಚಾರ ಆರಂಭವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ 93.47 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು 972.69 ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್‌ಗೊಳಿಸುವ ಕಾಮಗಾರಿ ಬಿಬಿಎಂಪಿ ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ನಗರದ ಐದು ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಯಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿಯಿದೆ.
ಮೊದಲ ಹಂತದ ಪ್ರಮುಖ ರಸ್ತೆಯಾದ ನಾಗವಾರ ಹೊರವರ್ತುಲ ರಸ್ತೆಯ ಹೆಣ್ಣೂರು ಜಂಕ್ಷನ್ ಬಳಿ 2.7 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ವಿಜಯನಗರ ಮೆಟ್ರೋ ಸ್ಟೇಷನ್ ಬಳಿ 477 ಮೀಟರ್ ಕಾಮಗಾರಿ ಮುಗಿದಿದೆ.
ಉಳಿದಂತೆ ಹೊಸೂರು ರಸ್ತೆಯ 2 ಕಿ.ಮೀ., ಮೈಸೂರು ರಸ್ತೆಯಲ್ಲಿ 2.3 ಕಿ.ಮೀ. ಹಾಗೂ ಕೋರಮಂಗಲದ 20ನೇ ಮುಖ್ಯರಸ್ತೆಯಲ್ಲಿ 595 ಮೀಟರ್ ಕಾಮಗಾರಿ ಸೇರಿ ಒಟ್ಟು 8.11 ಕಿ.ಮೀ., ಕಾಮಗಾರಿ ಪೂರ್ಣಗೊಂಡಿದೆ ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ತಿಳಿಸಿದ್ದಾರೆ.