Advertisement

ಅರೆಮಲೆನಾಡಲ್ಲಿ ಬಂಪರ್‌ ಬಿಳಿ ಜೋಳ

02:49 AM Jan 16, 2019 | |

ಧಾರವಾಡ: ಕಳೆದ ನಾಲ್ಕು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿದ್ದ ಅರೆಮಲೆನಾಡಿನ ಜಿಲ್ಲೆಗಳಲ್ಲಿ ಈ ವರ್ಷ ಎರಡನೇ ಬೆಳೆಯಾಗಿ ಬಿಳಿಜೋಳ ರೈತನ ಕೈ ಹಿಡಿದಿದ್ದು, ಅನ್ನದಾತರಿಗೆ ಸಂಕ್ರಾಂತಿ ಕೊಂಚ ಸಂಭ್ರಮ ಎನಿಸುತ್ತಿದೆ. ಮಾನ್ಸೂನ್‌ ಮಳೆಯಾಧಾರಿತವಾಗಿ ದೇಶಿಭತ್ತ ಬೆಳೆಯುತ್ತಿದ್ದ ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಯ ಅರೆಮಲೆನಾಡು ಪ್ರದೇಶದಲ್ಲಿ ಈ ವರ್ಷ ಹಿಂಗಾರಿ ಬಿಳಿ ಜೋಳ ನಳನಳಿಸುತ್ತಿದ್ದು, ಬರಗಾಲಕ್ಕೆ ತುತ್ತಾಗಿರುವ ಬಯಲುಸೀಮೆಯಲ್ಲಿ ಬೆಳೆದಷ್ಟೇ ಹುಲುಸಾಗಿ ಬಿಳಿಜೋಳ ಬೆಳೆದು ನಿಂತಿದೆ.

Advertisement

ಸಾಮಾನ್ಯವಾಗಿ ಕರಿ ಹೆಸರು, ಜವಾರಿ ಅವರೆ, ಅಳ್ಳಿನಜೋಳ ಮತ್ತು ಅಗಸಿಯನ್ನು (ಹಸರಾಣಿ) ಹಿಂಗಾರಿಯಾಗಿ ಅರೆಮಲೆನಾಡು ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಹಿಂಗಾರು ಮಳೆ ಚೆನ್ನಾಗಿ ಸುರಿದಿದ್ದರಿಂದ ಅರೆಮಲೆನಾಡಿನ ರೈತರು ಜೋಳ ಬಿತ್ತಿದ್ದು, ಜೋಳ ಹುಲುಸಾಗಿ ಬೆಳೆದು ನಿಂತಿದೆ.

ಧಾರವಾಡ ಜಿಲ್ಲೆಯಲ್ಲಿಯೇ 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿಜೋಳ ಬೆಳೆಯಲಾಗಿದ್ದು, ಹಾವೇರಿ ಜಿಲ್ಲೆಯ ಹಾನಗಲ್‌ ಮತ್ತು ಹಾವೇರಿ ತಾಲೂಕುಗಳನ್ನು ಒಳಗೊಂಡು 23 ಸಾವಿರ ಹೆಕ್ಟೇರ್‌, ಬೆಳಗಾವಿ ಜಿಲ್ಲೆಯಲ್ಲಿ 56 ಸಾವಿರ ಹೆಕ್ಟೇರ್‌ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ.

ಯಾಕೆ ಬಂತು ಜೋಳ: ಭತ್ತಕ್ಕೆ ಹೆಸರಾದ ಈ ಸ್ಥಳದಲ್ಲಿ ಜೋಳ ಇಷ್ಟು ಹುಲುಸಾಗಿ ಬೆಳೆಯಲು ಪ್ರಮುಖ ಕಾರಣ ವಾಗಿದ್ದು, ರೈತರು ಮುಂಗಾರಿನಲ್ಲಿ ಸೋಯಾಬಿನ್‌ ಬಿತ್ತನೆ ಮಾಡಿರುವುದು. ಸೋಯಾ ಅವರೆಯನ್ನು ಜೂನ್‌ನಲ್ಲಿ ಬಿತ್ತನೆ ಮಾಡಿದರೆ ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಕಟಾವಿಗೆ ಬರುತ್ತದೆ. ಹೀಗಾಗಿ, ರೈತರು ಈ ಬೆಳೆ ಕಟಾವು ಮಾಡುತ್ತಿ ದ್ದಂತೆಯೇ ಅಕ್ಟೋಬರ್‌ನಲ್ಲಿ ಬೀಳುವ ಹಿಂಗಾರು ಮಳೆಗೆ ಭೂಮಿ ಹದ ಮಾಡಿ ಬಿಳಿಜೋಳ (ಹವಾದ ಜೋಳ)ಬಿತ್ತನೆ ಮಾಡಿದ್ದಾರೆ. ಈ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬಿಳಿಜೋಳ ಬೆಳೆದಿದ್ದು ಇದೇ ಮೊದಲ ಬಾರಿಗೆ ಎನ್ನುತ್ತಿದೆ ಕೃಷಿ ಇಲಾಖೆ.

ಮೇವಿನ ಕೊರತೆಯೂ ನೀಗಿತು: ಜೋಳ ರೊಟ್ಟಿಗೆ ಮಾತ್ರವಲ್ಲ, ಸತತ ಬರಗಾಲದಿಂದ ಕಂಗೆಟ್ಟಿದ್ದ ಮತ್ತು ಕಬ್ಬು ಬೆಳೆಯನ್ನೇ ಹೆಚ್ಚಾಗಿ ಬೆಳೆದಿದ್ದರಿಂದ ಈ ಭಾಗದಲ್ಲಿ ಉಂಟಾ ಗಿದ್ದ ಮೇವಿನ ಕೊರತೆಯನ್ನು ಸಹ ನೀಗಿಸಿದೆ. ಅಂದಾಜು 3,000 ಮೆಟ್ರಿಕ್‌ ಟನ್‌ನಷ್ಟು ಜೋಳದ ಮೇವು ಉತ್ಪಾದನೆಯಾಗುತ್ತಿದ್ದು, ಮುಂದಿನ ಎಂಟು ತಿಂಗಳ ಕಾಲ ಜಾನುವಾರುಗಳಿಗೆ ಈ ಭಾಗದಲ್ಲಿ ಮೇವಿನ ಕೊರತೆ ಆಗುವುದಿಲ್ಲ ಎನ್ನುತ್ತಿದ್ದಾರೆ ಸ್ವತ: ರೈತರು. ಕಳೆದ ವರ್ಷ ಇದೇ ದಿನಗಳಲ್ಲಿ ಬರಗಾಲದಿಂದಾಗಿ ಮೇವು ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ, ಈ ವರ್ಷ ಹಿಂಗಾರಿ ಜೋಳದಿಂದಾಗಿ ಮೇವು ಬ್ಯಾಂಕ್‌ನತ್ತ ರೈತರು ಹೋಗದಂತಾಗಿದೆ.

Advertisement

ಪಕ್ಷಿ ಸಂಕುಲಕ್ಕೆ ಸುಗ್ಗಿ: ಇನ್ನು ಬೇಡ್ತಿ ಕೊಳ್ಳದಲ್ಲಿನ ಸಣ್ಣ ಪುಟ್ಟ ತೊರೆ, ಹಳ್ಳಗಳಲ್ಲಿ 27 ಬಗೆಯ ಪಕ್ಷಿಗಳಿದ್ದು, ಅವುಗಳಿಗೆ ಈ ವರ್ಷ ಹಿಂಗಾರಿನಲ್ಲಿ ಜೋಳದ ಬೆಳೆ ಚೆನ್ನಾಗಿ ಬಂದಿರುವುದು ಆಹಾರ ಖಣಜವೇ ಸಿಕ್ಕಂತಾಗಿದೆ. ನಿಜಕ್ಕೂ ಇದು ದೇಶಿ ಪಕ್ಷಿ ಸಂಕುಲ ತನ್ನ ಜೀವಜಾಲ ವಿಸ್ತರಿಸಿಕೊಳ್ಳುವುದಕ್ಕೆ ಅನುವು ಮಾಡಿದಂತಾಗಿದೆ ಎನ್ನುತ್ತಾರೆ ಪಕ್ಷಿ ತಜ್ಞರು.

ಹೈನುಗಾರಿಕೆಗೆ ಬೆನ್ನೆಲುಬು
ವಿಚಿತ್ರ ಎಂದರೆ ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಯ ಅನೇಕ ತಾಲೂಕುಗಳು ಈ ವರ್ಷ ಸಂಪೂರ್ಣ ಬರಗಾಲಕ್ಕೆ ತುತ್ತಾಗಿವೆ. ಆದರೆ, ಇದೇ ಜಿಲ್ಲೆಯ ಮಲೆನಾಡು ಪ್ರದೇಶದ ಹೊಲಗಳಲ್ಲಿ ಬಯಲು ಸೀಮೆಯ ಹಿಂಗಾರಿಯ ಪ್ರಧಾನ ಬೆಳೆ ಜೋಳ ಉತ್ತಮವಾಗಿ ಫಸಲು ಕೊಟ್ಟಿದೆ. ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ ಬರಗಾಲದಿಂದಾಗಿ ಸಾಕಷ್ಟು ಹಿಂಗಾರಿ ಬಿಳಿ ಜೋಳ ಬೆಳೆದಿಲ್ಲ. ಆದರೆ, ಅರೆಮಲೆನಾಡಿನ ರೈತರು ಬಯಲು ಸೀಮೆಯ ಜೋಳ ಬೆಳೆದು ರೊಟ್ಟಿ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಿಂದ ಹೊರ ಬಂದಿದ್ದಂತೂ ಸತ್ಯ. ಅಷ್ಟೇ ಅಲ್ಲ, ಹೈನುಗಾರಿಕೆಗೆ ಹಿಂಗಾರಿ ಜೋಳದ ಮೇವು ಬೆನ್ನೆಲುಬಾಗಿದೆ ಎನ್ನುತ್ತಿದ್ದಾರೆ ಹೈನುಗಾರಿಕೆ ಮಾಡುವ ರೈತರು.

ನಿಜಕ್ಕೂ ಅರೆಮಲೆನಾಡು ರೈತರು ಈ ವರ್ಷ ಉತ್ತಮ ಜೋಳದ ಬೆಳೆ ಪಡೆದುಕೊಂಡಿದ್ದಾರೆ. ಬರೀ ವಾಣಿಜ್ಯ ಬೆಳೆ ಬೆನ್ನು ಹತ್ತುವ ಬದಲು ಆಹಾರ ಬೆಳೆಗೆ ಜಿಲ್ಲೆಯ ರೈತರು ಒತ್ತು ಕೊಟ್ಟಿದ್ದರಿಂದ ಜೋಳ ಬೆಳೆದಲ್ಲೆಲ್ಲಾ ಈ ವರ್ಷ ಮೇವಿನ ಕೊರತೆ ಇಲ್ಲದಂತಾಗಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಇದನ್ನು ಕೃಷಿ ಸಚಿವರ ಗಮನಕ್ಕೆ ತರಲಾಗುವುದು.
 ●ಟಿ.ಎ.ರುದ್ರೇಶಪ್ಪ, ಜಂಟಿ ಕೃಷಿ ನಿರ್ದೇಶಕ, ಧಾರವಾಡ
 
ಕಬ್ಬು, ಭತ್ತದ ಕಾಲಾಗ ಸಿಕ್ಕೊಂಡು ಸಾಕಾಗಿತ್ತು. ಈ ವರ್ಷ ಹಿಂಗಾರಿ ಮಳಿ ಚಲೋ ಬಿದ್ದಿದ್ದರಿಂದ ಹವಾದ ಜೋಳ ಬಿತ್ತನೆ ಮಾಡಿದ್ದೇ. ತುಂಬಾ ಚೆನ್ನಾಗಿ ಬಂದಿದೆ. ಈ ಹಿಂದಿನ ಯಾವ ವರ್ಷದಾಗೂ ಇಷ್ಟು ಚಲೋ ಜೋಳ ಬೆಳದಿಲ್ಲ. 
 ●ಚಂದ್ರಕಾಂತ ಹಿರೇಮಠ ಜೋಡಳ್ಳಿ ರೈತ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next